• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಪ ಸಮರದಲ್ಲಿ ಮತದಾರನ ಸಂದೇಶ: 8 ಬಿಜೆಪಿ, 10 ಕಾಂಗ್ರೆಸ್, 4ರಲ್ಲಿ ಟಿಎಂಸಿ ಗೆಲುವು

|
Google Oneindia Kannada News

ನವದೆಹಲಿ, ನವೆಂಬರ್ 2: ಭಾರತದ 13 ರಾಜ್ಯಗಳಲ್ಲಿ ಮೂರು ಲೋಕಸಭೆ ಹಾಗೂ 29 ವಿಧಾನಸಭೆಗಳಿಗೆ ನಡೆದ ಉಪ ಚುನಾವಣೆ ಫಲಿತಾಂಶವು ಮಂಗಳವಾರ ಹೊರ ಬಿದ್ದಿದೆ. ಅಸ್ಸಾಂನ ಎಲ್ಲಾ ಐದು ವಿಧಾನಸಭೆ ಕ್ಷೇತ್ರಗಳಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಗೆಲುವು ಸಿಕ್ಕರೆ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ವಿಜಯಮಾಲೆ ಹಾಕಿದ್ದಾರೆ.

ಕಳೆದ ಅಕ್ಟೋಬರ್ 30ರಂದು ದಾದ್ರ ಮತ್ತು ನಗರ್ ಹವೇಲಿ, ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದ್ದು, ಮಧ್ಯಪ್ರದೇಶದ ಖಂದ್ವಾ ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಆ ಮೂಲಕ 3 ಕ್ಷೇತ್ರಗಳ ಪೈಕಿ ಎರಡರಲ್ಲಿ ಸೋಲು ಕಂಡಿದೆ. ಅದೇ ರೀತಿ 13 ರಾಜ್ಯಗಳ 29 ವಿಧಾನಸಭೆ ಕ್ಷೇತ್ರಗಳಲ್ಲೂ ಭಾರತೀಯ ಜನತಾ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ.

 ಚುನಾವಣಾ ಫಲಿತಾಂಶ 2021: ಮೂರು ಲೋಕಸಭೆ ಮತ್ತು 29 ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಎಣಿಕೆ ಚುನಾವಣಾ ಫಲಿತಾಂಶ 2021: ಮೂರು ಲೋಕಸಭೆ ಮತ್ತು 29 ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಎಣಿಕೆ

ಲೋಕಸಭೆ ಕ್ಷೇತ್ರಗಳಷ್ಟೇ ಅಲ್ಲದೇ 29 ವಿಧಾನಸಭೆ ಚುನಾವಣೆಗಳಲ್ಲೂ ಬಿಜೆಪಿ ಹಿನ್ನಡೆ ಅನುಭವಿಸಿರುವುದು ಗೋಚರಿಸುತ್ತಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಆಕಾಶದೆತ್ತರಕ್ಕೆ ಏರಿಸಿರುವ ಕೇಂದ್ರ ಸರ್ಕಾರಕ್ಕೆ ಮತದಾರರು ನೀಡಿದ ಉತ್ತರ ಸ್ಪಷ್ಟವಾಗಿದೆ. ದೇಶದ 29 ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 8 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಕಂಡುಕೊಂಡಿದ್ದರೆ, ಕಾಂಗ್ರೆಸ್ 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಟಿಎಂಸಿ ರಾಜ್ಯದ ನಾಲ್ಕೂ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇದರ ಹೊರತಾಗಿ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ 1, ಯುಡಿಪಿ 1, ಮಿಜೋ ನ್ಯಾಷನಲ್ ಫ್ರೆಂಟ್ 1, ಎನ್ ಡಿಪಿಪಿ 1, ಭಾರತದ ರಾಷ್ಟ್ರೀಯ ಲೋಕದಳ ಪಕ್ಷ 1, ಜನತಾ ದಳ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.


ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಗೆಲುವು:

ಅಸ್ಸಾಂ ಐದು, ಪಶ್ಚಿಮ ಬಂಗಾಳದ ನಾಲ್ಕು, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಹಾಗೂ ಮೇಘಾಲಯದ ಮೂರು ಮತ್ತು ಬಿಹಾರ, ಕರ್ನಾಟಕ ಹಾಗೂ ರಾಜಸ್ಥಾನದ ಎರಡು, ಆಂಧ್ರ ಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಮಿಜೋರಾಂ ಹಾಗೂ ತೆಲಂಗಾಣದ ಒಂದೊಂದು ವಿಧಾನಸಭೆ ಕ್ಷೇತ್ರ ಸೇರಿದಂತೆ ಒಟ್ಟು 29 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ.

ಅಸ್ಸಾಂನ ಐದು ಕ್ಷೇತ್ರಗಳಲ್ಲಿ 3 ಬಿಜೆಪಿ, 2 ಕ್ಷೇತ್ರಗಳಲ್ಲಿ ಯುಪಿಪಿಎಲ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಡೆದ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಆಂಧ್ರ ಪ್ರದೇಶದ ಒಂದು ವಿಧಾನಸಭೆ ಕ್ಷೇತ್ರದಲ್ಲಿ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ಬಿಹಾರದ 2 ಕ್ಷೇತ್ರಗಳಲ್ಲಿ ಜನತಾ ದಳ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಹರಿಯಾಣದಲ್ಲಿ ಭಾರತದ ರಾಷ್ಟ್ರೀಯ ಲೋಕದಳ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮೂರೂ ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಕರ್ನಾಟಕದಲ್ಲಿ ಒಂದು ಕಾಂಗ್ರೆಸ್, ಮತ್ತೊಂದರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿಯ ಎರಡು ಹಾಗೂ ಕಾಂಗ್ರೆಸ್ಸಿನ ಒಬ್ಬ ಅಭ್ಯರ್ಥಿ ದಿಗ್ವಿಜಯ ಸಾಧಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಕಂಡಿದ್ದಾರೆ. ಮೇಘಾಲಯದ ಮೂರು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಎರಡು ಹಾಗೂ ಯುನೈಟೆಡ್ ಡೆಮಾಕ್ರೆಟಿಕ್ ಪಕ್ಷದ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಮಿಜೋರಾಂನ ಒಂದು ವಿಧಾನಸಭೆ ಕ್ಷೇತ್ರದಲ್ಲಿ ಮಿಜೋ ನ್ಯಾಷನಲ್ ಫ್ರೆಂಟ್ ಗೆಲುವು ಸಾಧಿಸಿದೆ. ನಾಗಾಲ್ಯಾಂಡ್ ನಲ್ಲಿ ನಡೆದ ಒಂದು ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಎನ್ ಡಿಪಿಪಿ ಅಭ್ಯರ್ಥಿ ಗೆಲುವು ಪಡೆದುಕೊಂಡಿದ್ದಾರೆ. ರಾಜಸ್ಥಾನದಲ್ಲಿ ನಡೆದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎರಡೂ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ.

ಅಸ್ಸಾಂ ಐದು ಕ್ಷೇತ್ರಗಳಲ್ಲೂ ಬಿಜೆಪಿ ದಿಗ್ವಿಜಯ:

ಅಸ್ಸಾಂನಲ್ಲಿ ಐದು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲವು ಸಾಧಿಸಿದೆ. ಕೊಕ್ರಜಾರ್ ಜಿಲ್ಲೆಯ ಗೊಸ್ಸೈಗಾಂವ್, ಬಕ್ಸಾ ಜಿಲ್ಲೆಯ ತಮುಲ್ಪುರ್, ಜೋರ್ಹತ್ ಜಿಲ್ಲೆಯ ಮರಿಯಾನಿ ಮತ್ತು ಥೌರಾ ಹಾಗೂ ಬಾರ್ಪೇಟಾ ಜಿಲ್ಲೆಯ ಭವಾನಿಪುರ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಅಸ್ಸಾಂನ 5 ಸ್ಥಾನಗಳ ಪೈಕಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಮೂರರಲ್ಲಿಯೂ ಗೆಲುವು ಸಾಧಿಸಿದೆ. ಮೈತ್ರಿಕೂಟದ ಪಾಲುದಾರ ಯುಪಿಪಿಎಲ್ ತನಗೆ ಹಂಚಿಕೆಯಾದ ಎರಡು ಸ್ಥಾನಗಳಲ್ಲಿ ಗೆದ್ದು ಬೀಗಿದೆ.

ಕರ್ನಾಟಕದಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಕ್ಕೆ ಮಿಶ್ರಫಲ:

ಕರ್ನಾಟಕದ ಹಾನಗಲ್ ಮತ್ತು ಸಿಂದಗಿ ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಒಂದು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದುಕೊಂಡಿದೆ. ಸಿಎಂ ಬಸವರಾಜ ಬೊಮ್ಮಾಯಿತ ತವರ ಜಿಲ್ಲೆ ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಗೆಲುವು ಸಾಧಿಸಿದ್ದಾರೆ. ಇನ್ನೊಂದು ಕಡೆ ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಎದುರು ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ್ ಗೆಲುವಿನ ನಗೆ ಬೀರಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ವಿಜಯಹಾರ:

ಪಶ್ಚಿಮ ಬಂಗಾಳದಲ್ಲಿ ನಡೆದ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 1,64,089 ಮತಗಳ ಅಂತರದಿಂದ ದಿನ್ಹತಾ ಕ್ಷೇತ್ರದಲ್ಲಿ ಟಿಎಂಸಿ ಗೆಲುವು ಸಾಧಿಸಿದೆ. ಶಾಂತಿಪುರವನ್ನು 64,675 ಮತಗಳ ಅಂತರದಿಂದ ಗೆದ್ದಿದ್ದು, ಬಿಜೆಪಿ 2ನೇ ಸ್ಥಾನದಲ್ಲಿದೆ. ಖರ್ದಾಹಾದಲ್ಲಿ 93,832 ಮತಗಳ ಅಂತರದಿಂದ ಟಿಎಂಸಿ ಗೆಲುವು ಸಾಧಿಸಿದರೆ, ಬಿಜೆಪಿ 2ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಅದೇ ರೀತಿ ಗೋಸಾಬದಲ್ಲಿ 1,43,051 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಇಲ್ಲಿಯೂ ಬಿಜೆಪಿ 2ನೇ ಸ್ಥಾನದಲ್ಲಿದೆ.

ಪಶ್ಚಿಮ ಬಂಗಾಳ ನಾಡಿಯಾ ಜಿಲ್ಲೆಯ ಸಂತಿಪುರ್ ವಿಧಾನಸಭೆ, ದಕ್ಷಿಣದ 24 ಪರಗಣ ಜಿಲ್ಲೆಯ ಖರ್ದಹಾ ಮತ್ತು ಗೋಸಬಾ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತಿದೆ. ಇತ್ತೀಚಿನ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಖರ್ದಹಾ ಮತ್ತು ಗೋಸಬಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಗೆ ಈ ಉಪ ಚುನಾವಣೆಯುಪ್ರತಿಷ್ಠೆಯ ಕಣವಾಗಿತ್ತು.

ಮೂರು ಲೋಕಸಭೆ ಕ್ಷೇತ್ರಗಳ ಚಿತ್ರಣ:

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ದಿವಂಗತ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಅವರು ಬಿಜೆಪಿಯ ಕಾರ್ಗಿಲ್ ಯುದ್ಧ ವೀರ ಬ್ರಿಗೇಡಿಯರ್ (ನಿವೃತ್ತ) ಖುಶಾಲ್ ಠಾಕೂರ್ ಅವರನ್ನು ಸೋಲಿಸಿದರು. ಮಧ್ಯಪ್ರದೇಶದ ಖಾಂಡ್ವಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜ್ಞಾನೇಶ್ವರ್ ಪಾಟೀಲ್ ಗೆಲುವು ಸಾಧಿಸಿದ್ದಾರೆ. ದಾದ್ರಾ ಮತ್ತು ನಗರ್ ಹವೇಲಿ ಕ್ಷೇತ್ರವನ್ನು ಶಿವಸೇನೆ ಗೆದ್ದುಕೊಂಡಿದೆ.

ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಫಲಿತಾಂಶ:

ಹಿಮಾಚಲ ಪ್ರದೇಶದ ಫತೇಪುರ್, ಜುಬ್ಬಲ್-ಕೋಟ್‌ಖೈ ಮತ್ತು ಅರ್ಕಿಯ ಮೂರು ವಿಧಾನಸಭಾ ಸ್ಥಾನಗಳನ್ನೂ ಕಾಂಗ್ರೆಸ್ ಗೆದ್ದುಕೊಂಡಿದೆ. INLD ನ ಅಭಯ್ ಚೌತಾಲ ಅವರು ತಮ್ಮ ಸಾಂಪ್ರದಾಯಿಕ ಭದ್ರಕೋಟೆಯಾದ ಎಲೆನಾಬಾದ್ ಅನ್ನು ಗೆದ್ದರು.

ಮೇಘಾಲಯದ ಚುನಾವಣಾ ಫಲಿತಾಂಶ:

ಮೇಘಾಲಯದಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿದ್ದ ಮಾಜಿ ಫುಟ್‌ಬಾಲ್ ಆಟಗಾರ ಯುಜೆನೆಸನ್ ಲಿಂಗ್ಡೋ ಗೆದ್ದಿದ್ದಾರೆ. ಬಿಜೆಪಿ ಮಿತ್ರ ಪಕ್ಷವಾದ ಎನ್‌ಪಿಪಿ (ನ್ಯಾಷನಲ್ ಪೀಪಲ್ಸ್ ಪಾರ್ಟಿ) ರಾಜಬಾಲಾ ಕ್ಷೇತ್ರವನ್ನು ಗೆದ್ದುಕೊಂಡಿದೆ. ಮಿಜೋರಾಂನಲ್ಲಿ ಎಂಎನ್‌ಎಫ್ ಟುಯಿರಿಯಲ್ ಸ್ಥಾನವನ್ನು ಗೆದ್ದಿದೆ.

ಬಿಹಾರ ಮತ್ತು ರಾಜಸ್ಥಾನದ ಫಲಿತಾಂಶ:

ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಜನತಾ ದಳ ಯುನೈಟೆಡ್ ಎರಡೂ ಸ್ಥಾನಗಳನ್ನು ಗೆದ್ದಿದೆ. ಮಿತ್ರಪಕ್ಷ ಬಿಜೆಪಿ ಜೊಬಾಟ್ ಬುಡಕಟ್ಟು ಸ್ಥಾನವನ್ನು ಕಾಂಗ್ರೆಸ್‌ನಿಂದ ಕಸಿದುಕೊಂಡಿದ್ದು, ಇನ್ನೆರಡು ಕ್ಷೇತ್ರಗಳಲ್ಲಿ ಮುಂದಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ವಲ್ಲಭನಗರ ಮತ್ತು ಧರಿಯಾವಾಡ ಎಂಬ 2 ಸ್ಥಾನಗಳನ್ನು ಗೆದ್ದಿದೆ. ಈ ಚುನಾವಣೆಯು ಅಶೋಕ್ ಗೆಹ್ಲೋಟ್ ಸರ್ಕಾರದ ಕಾರ್ಯಕ್ಷಮತೆಯ ಮೇಲೆ ಜನಾಭಿಪ್ರಾಯವನ್ನು ತೋರಿಸುವಂತಿದೆ.

ತೆಲಂಗಾಣದ ಹುಜೂರಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ತೊರೆದು ಬಿಜೆಪಿ ಸೇರಿದ ಎಟಾಲ ರಾಜೇಂದರ್ ಮುಂದಿದ್ದಾರೆ. ಕ್ಷೇತ್ರದ ಹಾಲಿ ಶಾಸಕರಾದ ಶ್ರೀ ರಾಜೇಂದರ್ ಅವರು ಭೂಕಬಳಿಕೆ ಆರೋಪದ ನಂತರ ರಾಜೀನಾಮೆ ನೀಡಿದ್ದರು, ಅದನ್ನು ಅವರು ನಿರಾಕರಿಸಿದರು.

ಬಿಜೆಪಿ ವಿರುದ್ಧ ರಂದೀಪ್ ಸಿಂಗ್ ಸರ್ಜೇವಾಲ ಟ್ವೀಟ್:

"ದೇಶದಲ್ಲಿ ನಡೆದ ಮೂರು ಲೋಕಸಭೆ ಕ್ಷೇತ್ರಗಳ ಪೈಕಿ ಬಿಜೆಪಿಯು ಎರಡು ಕ್ಷೇತ್ರಗಳಲ್ಲಿ ಸೋಲು ಕಂಡಿದೆ. ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿಯೊಂದಿಗೆ ಕಾಂಗ್ರೆಸ್ ತೀವ್ರ ಪೈಪೋಟಿ ನೀಡಿದೆ. ಹಿಮಾಚಲ ಪ್ರದೇಶ, ರಾಜಸ್ಥಾನ, ಕರ್ನಾಟಕ ಮತ್ತು ಮಹಾರಾಷ್ಟ್ರದ ಚುನಾವಣೆಗಳು ಇದಕ್ಕೆ ಸಾಕ್ಷಿಯಾಗುತ್ತವೆ," ಎಂದು ಕಾಂಗ್ರೆಸ್ ಹಿರಿಯ ಮುಖಂಡ ರಂದೀಪ್ ಸಿಂಗ್ ಸರ್ವೇವಾಲಾ ತಿಳಿಸಿದ್ದಾರೆ.

English summary
TMC Sweeps West Bengal; NDA Wins All 5 Seats in Assam, Defeats Congress in By Elections. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X