Tirupati Train: ತಿರುಮಲ ಶ್ರೀವಾರಿಯ ಭಕ್ತರೇ ಗಮನಿಸಿ.. ಈ ರೈಲುಗಳು ರದ್ದು- ವಿವರ ಇಲ್ಲಿದೆ
ಆಂಧ್ರಪ್ರದೇಶದಲ್ಲಿ ಧಾರಾಕಾರ ಮಳೆಗೆ ಪ್ರವಾಹದ ಪರಿಸ್ಥಿತಿ ಎದುರಾಗಿದ್ದು, ಇದರ ಪರಿಣಾಮ ತಿರುಪತಿಗೂ ತಟ್ಟಿದೆ. ಪ್ರವಾಹ ಮತ್ತು ಮಳೆಯಿಂದಾಗಿ ತಿರುಪತಿಗೆ ತೆರಳುವ ಕೆಲ ರೈಲುಗಳನ್ನು ರದ್ದುಗೊಳಿಸಲಾಗಿದೆ. ಹಾಗಾದರೆ ಯಾವ ರೈಲುಗಳನ್ನು ರದ್ದು ಮಾಡಲಾಗಿದೆ? ಇದರ ಸಂಪೂರ್ಣ ವಿವರ ಇಲ್ಲಿದೆ...
ಆಂಧ್ರಪ್ರದೇಶದ ವಿಜಯವಾಡ ವಿಭಾಗದ ಅನೇಕ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಎಪಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ತಿರುಪತಿಯಿಂದ ಹೊರಡಬೇಕಿದ್ದ ತಿರುಪತಿ-ವಿಶಾಖಪಟ್ಟಣಂ ವಿಶೇಷ ರೈಲು ಸಂಖ್ಯೆ (08584), ತಿರುವನಂತಪುರಂ-ಸಿಕಂದರಾಬಾದ್ ರೈಲು (17229), ಬೆಂಗಳೂರು-ಹೌರಾ ರೈಲು (12864) ಮತ್ತು ಬೆಂಗಳೂರು-ಹತಿಯಾ (12836) ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಜೊತೆಗೆ ತೆನಾಲಿ ಜಂಕ್ಷನ್‌ನಿಂದ ಇನ್ನೂ ಕೆಲವು ರೈಲುಗಳನ್ನು ಅಧಿಕಾರಿಗಳು ತಿರುಗಿಸಿದ್ದಾರೆ.

ತಿರುಪತಿ-ಸಿಕಂದರಾಬಾದ್ (12763) ಪದ್ಮಾವತಿ ಎಕ್ಸ್‌ಪ್ರೆಸ್ ಮಂಗಳವಾರ ಸಂಜೆ 16:55 ಕ್ಕೆ ಹೊರಡಬೇಕಿತ್ತು, ಆದರೆ 5:35 ಗಂಟೆಗಳ ವಿಳಂಬದೊಂದಿಗೆ 22:30ಕ್ಕೆ ಹೊರಟಿದೆ. ಈ ರೈಲನ್ನು ತೆನಾಲಿ ಜಂಕ್ಷನ್‌ನಿಂದ ನೇರವಾಗಿ ಸಿಕಂದರಾಬಾದ್‌ಗೆ ವಿಜಯವಾಡ, ಖಮ್ಮಮ್ ಮತ್ತು ಮಹಬೂಬಾಬಾದ್ ಮೂಲಕ ಬದಲಾಗಿ ಗುಂಟೂರು ಮೂಲಕ ತಿರುಗಿಸಲಾಯಿತು. ಅಲ್ಲದೆ ಮಳೆ ಮತ್ತು ಪ್ರವಾಹದಿಂದಾಗಿ ಕಾಜಿಪೇಟೆ-ವಿಜಯವಾಡ ಮಾರ್ಗದಲ್ಲಿ ಭಾರೀ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಇಂದು ಕೂಡ ಹತ್ತಾರು ರೈಲುಗಳನ್ನು ದಕ್ಷಿಣ ಮಧ್ಯ ರೈಲ್ವೆ ಇಲಾಖೆ ರದ್ದುಗೊಳಿಸಿದೆ.
ಮತ್ತೊಂದೆಡೆ ವಿಜಯವಾಡ-ಕಾಜಿಪೇಟೆ ಭಾಗದಲ್ಲಿ ಮಳೆಯಿಂದ ಹಾನಿಗೀಡಾದ ಟ್ರ್ಯಾಕ್ ಮರುಸ್ಥಾಪಿಸುವ ಕಾರ್ಯ ಭರದಿಂದ ಸಾಗಿದೆ. ಆದರೆ ರೈಲು ಟ್ರ್ಯಾಕ್ ಮೇಲೆ ಕೆರೆಗಳಲ್ಲಿ ನೀರು ಹರಿದು ಬರುವ ಜತೆಗೆ ಧಾರಾಕಾರ ಮಳೆ ಬರುತ್ತಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ತಲ್ಲಪುಸಪಲ್ಲಿ ಮತ್ತು ಮಹಬೂಬಾಬಾದ್ ನಡುವಿನ ಪುನಶ್ಚೇತನ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

ಶನಿವಾರ ಮಧ್ಯರಾತ್ರಿಯ ನಂತರ ತಲ್ಲಪೂಸಪಲ್ಲಿ-ಮಹಬೂಬಾಬಾದ್ ಮತ್ತು ಇಂಟಿಕನ್ನೆ-ಕೇಸಮುದ್ರಂ ನಡುವಿನ ರೈಲ್ವೆ ಹಳಿಗಳ ಮೇಲೆ ಭಾರಿ ಪ್ರವಾಹದ ನೀರು ಹರಿದಿದೆ. ಈ ಪ್ರವಾಹದ ಪರಿಣಾಮವಾಗಿ ರೈಲು ಹಳಿಗಳ ಕೆಳಗೆ ಮಣ್ಣು ಮತ್ತು ಜಲ್ಲಿಕಲ್ಲುಗಳು ನಿಂತುಕೊಂಡಿವೆ. ತಕ್ಷಣ ಸ್ವಚ್ಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ. ಆದರೆ ಹಳಿಗಳ ಕೆಳಗೆ ಮಣ್ಣು ಸವಿತ ಕಂಡು ಬಂದಿದೆ.
ಇದರಿಂದಾಗಿ ಹಳಿಗಳು ತೂಗಾಡುವ ಹಂತಕ್ಕೆ ಕೆಲವೆಡೆ ಕಂಡು ಬಂದಿವೆ. ಹೀಗಾಗಿ ರೈಲ್ವೆ ಸಿಬ್ಬಂದಿ ಹಳಿಗಳ ಕೆಳಭಾಗದಲ್ಲಿ ಕಲ್ಲು, ಜಲ್ಲಿಕಲ್ಲು ಹಾಕಿ ಭದ್ರಪಡಿಸಿದ್ದಾರೆ. ಮಳೆಯಾಗುತ್ತಿರುವುದರಿಂದ ನೀರಿನ ಹರಿವು ಅಲ್ಲಲ್ಲಿ ತಡೆಗೋಡೆಯಾಗಿದೆ. ಇಂದು ರಾತ್ರಿ ವೇಳೆಗೆ ಎಲ್ಲಾ ರೈಲುಗಳು ಸಂಚಾರ ಮಾಡುವ ಸಾಧ್ಯತೆ ಇದೆ.
ಮಳೆರಾಯನ ಅರ್ಭಟಕ್ಕೆ ಆಂಧ್ರಪ್ರದೇಶದ ಜನ ಹೈರಾಣಾಗಿದ್ದಾರೆ. ರಾಜ್ಯದಲ್ಲಿ ಸಂಭವಿಸಿದ ಪ್ರವಾಹವನ್ನು ದೊಡ್ಡ ದುರಂತ ಎಂದು ಕರೆಯಲಾಗಿದೆ. ಪ್ರವಾಹದ ಬೆನ್ನಲ್ಲೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿಜಯವಾಡಕ್ಕೆ ಭೇಟಿ ನೀಡಿ, ಆಂಧ್ರಪ್ರದೇಶದ ಪ್ರವಾಹವನ್ನು ನೈಸರ್ಗಿಕ ವಿಕೋಪ ಎಂದು ಘೋಷಿಸಲು ಕೇಂದ್ರಕ್ಕೆ ಮನವಿ ಮಾಡುವುದಾಗಿ ಹೇಳಿದರು.
ಆಂಧ್ರಪ್ರದೇಶದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಸೇರಿದಂತೆ ಒಟ್ಟು 47 ರಕ್ಷಣಾ ತಂಡಗಳನ್ನು ರಾಜ್ಯದಲ್ಲಿ ಪರಿಹಾರ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಸೋಮವಾರ ರಾಜ್ಯದ 3.5 ಲಕ್ಷಕ್ಕೂ ಅಧಿಕ ಜನರಿಗೆ ಆಹಾರವನ್ನು ವಿತರಿಸಲಾಗಿದೆ.












Click it and Unblock the Notifications