Tirumala Tirupati: ಭಕ್ತರೇ ಎಚ್ಚರಿಕೆ.. ತಿರುಪತಿ ತಿಮ್ಮಪ್ಪನ ದರ್ಶನದ ನಕಲಿ ಟಿಕೆಟ್ ಜಾಲ ಪತ್ತೆ- ವರದಿ, ವಿವರ
ವಿಜಯವಾಡ ನವೆಂಬರ್ 21: ತಿರುಪತಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಟಿಕೆಟ್ ಪಡೆಯುವುದು ಕಷ್ಟವಾಗುತ್ತಿದೆ. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಲು ಭಕ್ತರು ಹೆಣಗಾಡುತ್ತಿದ್ದಾರೆ. ಇದೇ ಸಂದರ್ಭವನ್ನು ಬಳಸಿಕೊಂಡ ವಂಚಕರ ಗುಂಪೊಂದು ನಕಲಿ ಟಿಕೆಟ್ ಮಾರಾಟಕ್ಕೆ ಇಳಿದಿದೆ. ಸದ್ಯ ಈ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ತಿರುಮಲ ಟೌನ್ ಪೊಲೀಸರು ತಿರುಪತಿ ತಿಮ್ಮಪ್ಪನ ದರ್ಶನದ ನಕಲಿ ಟಿಕೆಟ್ ಜಾಲವನ್ನು ಪತ್ತೆ ಮಾಡಿದ್ದಾರೆ. ದರ್ಶನದ ನಕಲಿ ಟಿಕೆಟ್ ನೀಡಿ ಸಾವಿರಾರು ರೂಪಾಯಿ ವಂಚಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

49 ವರ್ಷದ ದೇವರಾಜ್ ಟಿ ಗೌಡ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ನಕಲಿ ಟಿಕೆಟ್ ಪಡೆದು ಮೋಸ ಹೋದ ವ್ಯಕ್ತಿ. ಬೆಂಗಳೂರಿನ ದೇವರಚಿಕ್ಕನಹಳ್ಳಿಯ ನಿವಾಸಿಯಾದ ದೇವರಾಜ್ ಟಿ ಗೌಡ ಅವರು 42,500 ರೂಪಾಯಿಗೆ ಆನ್‌ಲೈನ್‌ನಲ್ಲಿ ತಿರುಪತಿ ದರ್ಶನದ ಟಿಕೆಟ್ ಪಡೆದಿದ್ದರು. ಬಳಿಕ ತಾವು ಮೋಸ ಹೋಗಿರುವುದು ತಿಳಿದು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಇತ್ತೀಚೆಗಷ್ಟೇ ತಿರುಮಲದಲ್ಲಿ ವಿಜಿಲೆನ್ಸ್ ಇನ್ಸ್ ಪೆಕ್ಟರ್ ಬಿ ಶಂಕರ್ ಬಾಬು ಅವರಿಗೆ ದೇವರಾಜ್ ಟಿ ಗೌಡ ಅವರು ನಕಲಿ ಟಿಕೆಟ್ ಪಡೆದಿರುವುದಾಗಿ ದೂರು ನೀಡಿದ್ದರು. ತಿರುಮಲ ದೇವಸ್ಥಾನದಲ್ಲಿ ಶ್ರೀವಾಣಿ ದರ್ಶನ ಟಿಕೆಟ್ ಕೊಡಿಸುವ ನೆಪದಲ್ಲಿ ಮಾರುತಿ ಎಂಬ ವ್ಯಕ್ತಿ ತನಗೆ ಮೋಸ ಮಾಡಿದ್ದಾನೆ ಎಂದು ಗೌಡ ಅವರು ಶಂಕರ್ ಬಾಬು ಅವರಿಗೆ ಇ-ಮೇಲ್‌ನಲ್ಲಿ ತಿಳಿಸಿದ್ದರು. ಈ ಮೂಲಕ ಆರೋಪಿಗಳು ಟಿಟಿಡಿಗೂ ಮೋಸ ಮಾಡುತ್ತಿದ್ದಾರೆ ಎಂದು ಗೌಡರು ಉಲ್ಲೇಖಿಸಿದ್ದರು. ಈ ಮೇಲ್ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿದ್ದಾರೆ.
ಮಾರುತಿ ಎಂಬ ವ್ಯಕ್ತಿ ಈ ಹಿಂದೆಯೂ ಮತ್ತೊರ್ವರಿಗೆ ಹಣವನ್ನು ವಂಚಿಸಿದ್ದಾನೆ. ಇದೇ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿ ಮಾರುತಿ ಬೆಂಗಳೂರಿನ ವಕೀಲರೊಬ್ಬರಿಗೆ ಶ್ರೀವಾರಿ ದರ್ಶನದ ನಕಲಿ ಟಿಕೆಟ್‌ಗಳನ್ನು ನೀಡಿ 28.03 ಲಕ್ಷ ರೂಪಾಯಿ ವಂಚಿಸಿದ್ದಾನೆ.

ಆರೋಪಿಯು ತನ್ನನ್ನು ಟಿಟಿಡಿ ಮಂಡಳಿಯ ಸದಸ್ಯ ಮತ್ತು ಕರ್ನಾಟಕದ ಶಾಸಕ ಎಂದು ಪರಿಚಯಿಸಿಕೊಂಡು ಜನರಿಗೆ ನಕಲಿ ತಿರುಮಲ ದರ್ಶನ ಟಿಕೆಟ್ ನೀಡಿ ಹಣ ವಂಚಿಸಿದ್ದಾನೆ. ಆರೋಪಿ ಈ ಹಿಂದೆ ಬೆಂಗಳೂರಿನಲ್ಲಿ ಟಿಟಿಡಿ ಮಂಡಳಿಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದನು. ಈತನನ್ನು ಈ ಹಿಂದೆ ಪಾಲಿಕೆ ಸದಸ್ಯರು ಮತ್ತು ಶಾಸಕರು ಆಪ್ತ ಸಹಾಯಕ ಹುದ್ದೆಯಿಂದ ವಜಾಗೊಳಿಸಿದ್ದರು.
ಆದರೆ ಈತ ತನ್ನ ವಂಚನೆ ಬುದ್ಧಿಯನ್ನು ಬಿಟ್ಟಿರಲಿಲ್ಲ. ಹೊರ ಬಂದು ಮತ್ತದೇ ಚಾಲಾಕಿತನ ಮುಂದುವರೆಸಿದ್ದಾನೆ. ಜನರನ್ನು ಯಾಮಾರಿಸುವಾಗ ತಾನು ಪಾಲಿಕೆ ಸದಸ್ಯ ಹಾಗೂ ಎಂಎಲ್ ಎ ಎಂದು ಹೇಳಿಕೊಂಡು ಜನರನ್ನು ವಂಚಿಸಿದ್ದಾನೆ. ಈ ಬಗ್ಗೆ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂ ಧರ್ಮ ಗ್ರಂಥಗಳಲ್ಲಿ ತಿರುಮಲ ತಿರುಪತಿ ದೇವಾಲಯವನ್ನು ವಿಷ್ಣು ದೇವನು ಕಲಿಯುಗದಲ್ಲಿ ವಾಸಿಸುವ ಐಹಿಕ ಸ್ಥಳವೆಂದು ವಿವರಿಸಲಾಗಿದೆ. ತಿರುಪತಿ ಬಾಲಾಜಿ ಅಥವಾ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ಹಿಂದೂ ಪುರಾಣದ ಅತ್ಯಂತ ಪ್ರಮುಖ ಹೆಗ್ಗುರುತುಗಳಲ್ಲಿ ಇಂದಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಈ ಪ್ರಭಾವಶಾಲಿಯಾದ ದೇವಾಲಯಕ್ಕೆ ನಿತ್ಯ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಹರಕೆಯನ್ನು ತೀರಿಸುತ್ತಾರೆ. ನಿತ್ಯ ವಿಶೇಷ ಪೂಜೆಗಳು ನಡೆಯುತ್ತವೆ.
ತಿರುಪತಿ ಬಾಲಾಜಿ ದೇವಾಲಯವು ಭೂಮಿಯ ಮೇಲಿನ ಅತ್ಯಂತ ಜನಪ್ರಿಯ ಸಿರಿವಂತ ದೇವಾಲಯವಾಗಿದ್ದು, ವರ್ಷದ ಯಾವುದೇ ದಿನ ಈ ದೇವಾಲಯಕ್ಕೆ ಭೇಟಿ ನೀಡಬಹುದು. ಲಕ್ಷಾಂತರ ಜನ ನಿತ್ಯ ತಿರುಪತಿಗೆ ಭೇಟಿ ನೀಡುತ್ತಾರೆ. ಇಲ್ಲಿ ಭಕ್ತರು ತಮ್ಮೆಲ್ಲಾ ಇಚ್ಚೆಯನ್ನು ಈಡೇರಿಸುವಂತೆ ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ.












Click it and Unblock the Notifications