ಆಗಸ್ಟ್‌ನಲ್ಲಿ 5 ದಿನ ತಿರುಪತಿ ತಿಮ್ಮಪ್ಪನ ದರ್ಶನವಿಲ್ಲ!
Recommended Video

ಬೆಂಗಳೂರು, ಜುಲೈ 06 : ತಿರುಪತಿ ದೇವಾಲಯಕ್ಕೆ 5 ದಿನಗಳ ಕಾಲ ಭಕ್ತರ ಭೇಟಿಯನ್ನು ನಿಷೇಧಿಸುವ ಸಾಧ್ಯತೆ ಇದೆ. ಆಗಸ್ಟ್‌ನಲ್ಲಿ ಐದು ದಿನಗಳ ಕಾಲ ದೇವಾಲಯದ ಸಿಬ್ಬಂದಿಯೂ ಒಳಗೆ ಪ್ರವೇಶಿಸುವಂತಿಲ್ಲ. ಈ ಬಗ್ಗೆ ಶೀಘ್ರದಲ್ಲೇ ಆದೇಶ ಪ್ರಕಟವಾಗುವ ಸಾಧ್ಯತೆ ಇದೆ.
ಪ್ರತಿ 12 ವರ್ಷಕ್ಕೊಮ್ಮೆ ದೇವಾಲಯದಲ್ಲಿ 'ಅಷ್ಟಬಂಧ ಬಾಲಾಲಯ ಮಹಾಪ್ರೋಕ್ಷಣಂ' ಎಂಬ ಕಾರ್ಯಕ್ರಮ ನಡೆಯುತ್ತದೆ. ಈ ಕಾರ್ಯಕ್ರಮ ನಡೆಯುವಾಗ ಅರ್ಚಕರನ್ನು ಹೊರತುಪಡಿಸಿ ಬೇರೆ ಯಾರಿಗೂ ದೇವಾಲಯ ಪ್ರವೇಶಿಸುವುದಕ್ಕೆ ಅನುಮತಿ ನೀಡುವುದಿಲ್ಲ.
ಈ ವರ್ಷದ ಆಗಸ್ಟ್ 12 ರಿಂದ 16ರ ತನಕ ಈ ಕಾರ್ಯಕ್ರಮ ನಿಗದಿಯಾಗಿದೆ. ಆದ್ದರಿಂದ, 5 ದಿನಗಳ ಕಾಲ ಭಕ್ತರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಅವಕಾಶ ನಿಷೇಧಿಸುವ ಸಾಧ್ಯತೆ ಇದೆ. ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಈ ಕುರಿತು ಚಿಂತನೆ ನಡೆಸುತ್ತಿದೆ.

ಟಿಟಿಡಿ ಆಡಳಿತ ಮಂಡಳಿ ಈಗಾಗಲೇ ಆಗಸ್ಟ್‌ನಲ್ಲಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ತಮ್ಮ ಪ್ರವಾಸದ ದಿನಾಂಕವನ್ನು ಪರಿಶೀಲಿಸುವಂತೆ ಸೂಚನೆ ನೀಡಿದೆ. ಐದು ದಿನಗಳ ಅವಧಿಯಲ್ಲಿ ದೇವಾಲಯಕ್ಕೆ ಆಗಮಿಸುವವರಿದ್ದರೆ ವೇಳಾಪಟ್ಟಿಯನ್ನು ಬದಲಿಸಲು ಕೋರಿದೆ.
ಆಗಸ್ಟ್ 12 ರಿಂದ 16ರ ತನಕ ಭಕ್ತರ ಪ್ರವೇಶ ನಿಷೇಧಿಸುವ ಕುರಿತು ಇನ್ನೂ ಚಿಂತನೆ ನಡೆಯುತ್ತಿದೆ. ಟಿಟಿಡಿ ಕೆಲವೇ ದಿನಗಳಲ್ಲಿ ಈ ಕುರಿತು ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.
ತಿರುಪತಿ ದೇವಾಲಯದ ಆಡಳಿತ ಮಂಡಳಿ ಐದು ದಿನಗಳ ಕಾಲ 30 ರಿಂದ 35 ಸಾವಿರ ಭಕ್ತರಿಗೆ ಮಾತ್ರ ಪ್ರವೇಶ ನೀಡುವ ಕುರಿತು ಚಿಂತನೆ ನಡೆಸಿದೆ. 5 ದಿನಗಳ ಕಾಲ ನಿಗದಿಯಾಗಿದ್ದ ಎಲ್ಲಾ ಸೇವೆಗಳನ್ನು ಆಡಳಿತ ಮಂಡಳಿ ಈಗಾಗಲೇ ರದ್ದುಗೊಳಿಸಿದೆ.
'ಅಷ್ಟಬಂಧ ಬಾಲಾಲಯ ಮಹಾಪ್ರೋಕ್ಷಣಂ' ಕಾರ್ಯಕ್ರಮದಲ್ಲಿ ಸುಮಾರು 44 ಋತ್ವಿಕರು, 100 ಪ್ರಧಾನ ಪಂಡಿತರು ಪಾಲ್ಗೊಳ್ಳಲಿದ್ದಾರೆ. ಆಗಸ್ಟ್ 17ರಿಂದ 48 ದಿನಗಳ ಕಾಲ ದೇವಾಲಯದಲ್ಲಿ ಮಹಾಮಸ್ತಕಾಭಿಷೇಕ ಪ್ರತಿ ದಿನ ನಡೆಯಲಿದೆ.












Click it and Unblock the Notifications