Tirupati laddu: ಆಂಧ್ರದಲ್ಲಿ ವ್ರತ vs ಪಶ್ಚಾತಾಪ "ಪೂಜೆ" ರಾಜಕೀಯ
ದೇಶದಲ್ಲಿ ಧರ್ಮದ ಆಧಾರದ ಮೇಲೆ ರಾಜಕೀಯ ನಡೆಯುವುದನ್ನು ನಾವು ಉತ್ತರ ಭಾರತದ ರಾಜ್ಯಗಳಲ್ಲಿ ನೋಡುತ್ತಿದ್ದೆವು. ಅದು ನಿಧಾನವಾಗಿ ಈಗ ದಕ್ಷಿಣ ಭಾರತದಲ್ಲೂ ಪ್ರಾರಂಭವಾದಂತಿದೆ. ಉತ್ತರ ಭಾರತದ ಉತ್ತರ ಪ್ರದೇಶದಲ್ಲಿ ಧರ್ಮ ಹಾಗೂ ದೇವರ ಹೆಸರಿಲ್ಲಿ ಚುನಾವಣೆ ನಡೆಯುವುದನ್ನು, ಮತ ಕೇಳುವುದನ್ನು ನಾವು ನೋಡಿದ್ದೇವೆ. ಕಳೆದ 15 ದಿನಗಳಿಂದ ಅಲ್ಲಿನ ರಾಜಕೀಯ ಬೆಳವಣಿಗೆಯನ್ನೇ ಆಂಧ್ರಪ್ರದೇಶವೂ ನೆನಪಿಸುತ್ತಿದೆ.
ತಿರುಪತಿ ತಿರುಮಲ ದೇವಸ್ಥಾನದ ಲಡ್ಡುವಿನಲ್ಲಿ ಹಸುವಿನ ಕೊಬ್ಬು, ಹಂದಿಯ ಕೊಬ್ಬಿನ ಅಂಶ ಹಾಗೂ ಮೀನಿನ ಎಣ್ಣೆ ಬಳಸಲಾಗಿದೆ ಎನ್ನುವ ಗಂಭೀರ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಲ್ಲಿ ಹೊಸ ರಾಜಕೀಯ ಅಲೆ ಶುರುವಾಗಿದೆ. ಆಂಧ್ರಪ್ರದೇಶದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಇದರ ಬೆನ್ನಲ್ಲೇ ವ್ರತ, ಪಶ್ಚಾತಾಪ, ಪೂಜೆ ಹಾಗೂ ಸನಾತನ ಧರ್ಮದ ವಿಚಾರಗಳು ಚರ್ಚೆಯ ಮುನ್ನೆಲೆಗೆ ಬಂದಿದೆ.

11 ದಿನ ವ್ರತ ಮಾಡಿದ ಪವನ್ ಕಲ್ಯಾಣ್
ತಿರುಪತಿ ತಿರುಮಲ ದೇವಸ್ಥಾನದಲ್ಲಿ ನೀಡುವ ಪವಿತ್ರ ಪ್ರಸಾದವಾದ ಲಡ್ಡುವಿನಲ್ಲಿ ಕಲಬೆರಕೆ ತುಪ್ಪ ಬಳಸಲಾಗಿದೆ ಎನ್ನುವ ಗಂಭೀರ ವಿಚಾರದ ನಂತರ ಜನಸೇನ ಪಕ್ಷದ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು 11 ದಿನಗಳ ಪ್ರಾಯಶ್ಚಿತ ವ್ರತ ಘೋಷಿಸಿದ್ದರು. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಅಧಿಕಾರ ಅವಧಿಯಲ್ಲಿ ಮಹಾ ಪಾಪವಾಗಿದೆ. ಈ ಪಾಪದಿಂದ ಮುಕ್ತ ಹೊಂದಲು ಪ್ರತಿಯೊಬ್ಬ ಹಿಂದೂವು ಸಹ 11 ದಿನಗಳ ಪ್ರಾಯಶ್ಚಿತ ವ್ರತ ಮಾಡಬೇಕು. ತಿರುಪತಿ ತಿಮ್ಮಪ್ಪನ ವ್ರತ ಮಾಡುತ್ತಿದ್ದೇನೆ ಎಂದು ಅವರು ಘೋಷಿಸಿದ್ದರು.
ಜಗನ್‌ನಿಂದಲೂ ಪಾಪ ವ್ರತ
ಈ ನಡುವೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯೂ ಅವರು ಪ್ರಾಯಶ್ಚಿತ ಪೂಜೆಗೆ ಕರೆ ನೀಡಿದ್ದಾರೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಾಡಿರುವ ಪಾಪ ಪ್ರಾಯಶ್ಚಿತಕ್ಕಾಗಿ ಆಂಧ್ರಪ್ರದೇಶದ ಎಲ್ಲೆಡೆಯೂ ಸೆಪ್ಟೆಂಬರ್ 28ರಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡೋಣ. ರಾಜ್ಯದಾದ್ಯಂತ ದೇವಸ್ಥಾನಗಳಲ್ಲಿ ಪೂಜೆಗಳಲ್ಲಿ ಭಾಗವಹಿಸಿ ಎಂದಿದ್ದಾರೆ. ಆಂಧ್ರ ಸಿ.ಎಂ ಚಂದ್ರಬಾಬು ಮಾಡಿರುವ ಪಾಪ (ಸುಳ್ಳು ಸುದ್ದಿ ಹಾಗೂ ಸತ್ಯವನ್ನು ತಿರುಚಿದ್ದಾರೆ ಎಂಬ ಆರೋಪ) ಪ್ರಾಯಶ್ಚಿತ ಮಾಡಿಕೊಳ್ಳೋಣ ಎಂದು ಹೇಳಿದ್ದಾರೆ.
ತಿರುಪತಿ ದೇವಸ್ಥಾನ ಶುದ್ಧೀಕರಣ: ಇನ್ನು ತಿರುಪತಿ ತಿರುಮಲ ದೇವಸ್ಥಾನ ಶುದ್ಧೀಕರಣ ಪ್ರಕ್ರಿಯೆಯನ್ನೂ ನಡೆಸಲಾಗಿದೆ. ಲಡ್ಡು ವಿವಾದದ ನಂತರ ದೇವಾಲಯವನ್ನು ಶುದ್ಧೀಕರಣ ಮಾಡಲಾಗಿದೆ. ಅಲ್ಲದೇ ವಿಶೇಷ ಪೂಜೆಗಳನ್ನು ಸಹ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಹೋಮ ನಡೆಸುವ ಬಗ್ಗೆಯೂ ಚಿಂತನೆ ಇದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಆಂಧ್ರಪ್ರದೇಶದ ರಾಜಕೀಯದಲ್ಲಿ ಹೊಸ ಸಂಚಲನವೇ ಸೃಷ್ಟಿಯಾಗಿದೆ. ಹಿಂದೂ ಹಾಗೂ ಸನಾತನ ಧರ್ಮದ ಬಗ್ಗೆ ಈ ರಾಜ್ಯದಲ್ಲೂ ಚರ್ಚೆಯಾಗುತ್ತಿದೆ. ಇಲ್ಲಿಯ ವರೆಗೂ ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಈ ರೀತಿಯ ಧರ್ಮ ರಾಜಕೀಯಕ್ಕೆ ಸಾಕ್ಷಿಯಾಗಿರಲಿಲ್ಲ.












Click it and Unblock the Notifications