Tirupati laddu row ಯೂಟರ್ನ್ ತೆಗೆದುಕೊಂಡ ಪವನ್: ಜಗನ್ ಬಗ್ಗೆ ಅಚ್ಚರಿಯ ಹೇಳಿಕೆ
ತಿರುಪತಿ ಲಡ್ಡುವಿನ ತಯಾರಿಕೆಯಲ್ಲಿ ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎನ್ನುವ ವಿಚಾರದಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯ ಬಗ್ಗೆ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಇದೇ ಮೊದಲ ಬಾರಿ ಬಹಿರಂಗವಾಗಿ ಮಾತನಾಡಿದ್ದು. ತಿರುಪತಿ ಲಡ್ಡುವಿನಲ್ಲಿ ಕಲಬೆರಕೆ ತುಪ್ಪ ಬಳಸಿರುವುದಕ್ಕೆ ನಾನು ಜಗನ್ ಅವರನ್ನು ಆರೋಪಿಸುತ್ತಿಲ್ಲ. ನಾನು ಎಲ್ಲಿಯೂ ಲಡ್ಡುವಿನಲ್ಲಿ ಕಲಬೆರಕೆ ತುಪ್ಪ ಬಳಸಿರುವ ವಿಚಾರಕ್ಕೆ ಜಗನ್ ಮೋಹನ್ ರೆಡ್ಡಿ ಕಾರಣ ಎಂದು ಹೇಳಿಯೇ ಇಲ್ಲ ಎಂದು ಹೇಳಿದ್ದಾರೆ.
ಆದರೆ, ತಿರುಪತಿ ಲಡ್ಡು ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಹಸುವಿನ ಕೊಬ್ಬಿನ ಅಂಶ, ಹಂದಿ ಕೊಬ್ಬಿನ ಅಂಶ ಹಾಗೂ ಮೀನಿನ ಎಣ್ಣೆಯನ್ನು ಬಳಸಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿತ್ತು. ಇದನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ಬಹಿರಂಗಪಡಿಸಿದ್ದರು. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಆಡಳಿತ ಅವಧಿಯಲ್ಲಿ ಈ ರೀತಿ ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎಂದು ಅವರು ಆರೋಪಿಸಿದ್ದರು.

ಲ್ಯಾಬ್ ರಿಪೋರ್ಟ್ ಅನ್ನು ಸಹ ಚಂದ್ರಬಾಬು ನಾಯ್ಡು ಅವರು ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷ, ಬಿಜೆಪಿ ಹಾಗೂ ಜನಸೇನಾ ಪಕ್ಷಗಳು ವಾಗ್ದಾಳಿ ನಡೆಸಿದ್ದವು. ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷ ಹಾಗೂ ಬಿಜೆಪಿ ನೇರವಾಗಿ ಜಗನ್ ಮೋಹನ್ ರೆಡ್ಡಿ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದವು. ಆದರೆ, ಪವನ್ ಕಲ್ಯಾಣ್ ಅವರು, ಅಂದಿನ ತಿರುಮಲ (ಟಿಟಿಡಿ) ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ತೀವ್ರ ವಾಗ್ದಾಳಿಯನ್ನೂ ನಡೆಸಿದ್ದರು.
ಜಗನ್‌ನನ್ನು ದೂಷಿಸುವುದಿಲ್ಲ
ತಿರುಪತಿ ಲಡ್ಡಿನಲ್ಲಿ ಕಲಬೆರಕೆ ತುಪ್ಪವನ್ನು ಬಳಸಿದ ವಿಚಾರವಾಗಿ ನಾನು ಜಗನ್ ಮೋಹನ್ ರೆಡ್ಡಿ ಅವರನ್ನು ಗುರಿಯಾಗಿಸಿಲ್ಲ, ದೂಷಿಸುವುದು ಇಲ್ಲ. ಆದರೆ, ಅವರ ಆಡಳಿತ ಅವಧಿಯಲ್ಲಿ ರಚನೆಯಾಗಿದ್ದ ಟಿಟಿಡಿ ಆಡಳಿತ ಮಂಡಳಿ ಈಗ ಎದುರಾಗಿರುವ ಪ್ರಶ್ನೆಗಳಿಗ ಉತ್ತರಿಸಬೇಕು.

ಆಂಧ್ರಪ್ರದೇಶದ ಸಮ್ಮಿಶ್ರ ಸರ್ಕಾರ (ತೆಲುಗುದೇಶಂ ಪಾರ್ಟಿ, ಜನಸೇನಾ ಹಾಗೂ ಬಿಜೆಪಿ)ದ ಐಟಿ ಸಚಿವ ನಾರಾ ಲೋಕೇಶ್ ಅವರೇ ತಿರುಮಲ (ಟಿಟಿಡಿ) ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿ ಸ್ವತಂತ್ರ ಸಂಸ್ಥೆ (ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಅವಕಾಶ ಇರುವ ಮಂಡಳಿ) ಎಂದು ಹೇಳಿದ್ದಾರೆ. ನಾವು ಯಾವಾಗ ಜಗನ್ ಮೇಲೆ ಆರೋಪ ಮಾಡಿದ್ದೇವೆ ಹೇಳಿ ಎಂದು ಪವನ್ ಕಲ್ಯಾಣ್ ಪ್ರಶ್ನೆ ಮಾಡಿದ್ದಾರೆ.
ನಾವು ಪ್ರಶ್ನೆ ಮಾಡುತ್ತಿರುವುದು ಹಾಗೂ ಟೀಕಿಸುತ್ತಿರುವುದು ಟಿಟಿಡಿ ಮಂಡಳಿಯನ್ನು. ವೈಯಕ್ತಿಕವಾಗಿ ಇಲ್ಲವೇ ಬಹಿರಂಗವಾಗಿ ಇಲ್ಲಿಯವರೆಗೂ ಒಮ್ಮೆಯೂ ನಾನು ಜಗನ್ ಮೋಹನ್ ರೆಡ್ಡಿಯ ಹೆಸರನ್ನು ಪ್ರಸ್ತಾಪಿಸಿಲ್ಲ. ನಾವು ಮಾತನಾಡುತ್ತಿರುವುದು ಜಗನ್ ಆಡಳಿತಾವಧಿಯಲ್ಲಿ ರಚನೆಯಾದ ಟಿಟಿಡಿ ಮಂಡಳಿಯ ಬಗ್ಗೆ. ನನ್ನ ಪ್ರಶ್ನೆ ಅಂತ್ಯಂತ ಸರಳವಾಗಿದೆ ನಿಮ್ಮ (ಜಗನ್) ಆಡಳಿತ ಅವಧಿಯಲ್ಲಿ ಬೋರ್ಡ್ ರಚನೆಯಾಗಿದೆ ನಿಜ.
ಆದರೆ, ಇದಕ್ಕೆ (ಲಡ್ಡಿನಲ್ಲಿ ಕಲಬೆರಕೆ ತುಪ್ಪ ಬಳಕೆ) ನೀವು ನೇರವಾಗಿ ಕಾರಣರಲ್ಲ ಎನ್ನುವುದನ್ನು ಒಪ್ಪೋಣ. ತನಿಖೆ ನಡೆಯಲಿ, ಸತ್ಯಾಂಶ ಬಹಿರಂಗವಾಗಲಿ. ಆದರೆ, ನೀವು ಏಕೆ ಭಯ ಬೀಳುತ್ತಿದ್ದೀರಿ, ಅವರನ್ನು ಏಕೆ ನೀವು ರಕ್ಷಿಸಲು ಪ್ರಯತ್ನಿಸುತ್ತಿದ್ದೀರಿ ಎನ್ನುವುದು ನನ್ನ ಪ್ರಶ್ನೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ಇಲ್ಲಿಯ ವರೆಗೆ ಪವನ್ ಕಲ್ಯಾಣ್ ಅವರು ಜಗನ್ ಅವರ ಹೆಸರನ್ನು ಪ್ರಸ್ತಾಪಿಸದೆ ಇದ್ದರೂ, ಪರೋಕ್ಷವಾಗಿ ಟೀಕಿಸುತ್ತಿದ್ದರು. ಇದೀಗ ಅಚ್ಚರಿಯ ಹೇಳಿಕೆ ನೀಡಿದ್ದಾರೆ.












Click it and Unblock the Notifications