Leopard in Tirupati: ತಿರುಮಲದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ, ಕರಡಿ: ಭಕ್ತರಿಗೆ ಎಚ್ಚರಿಕೆ ನೀಡಿದ ಟಿಟಿಡಿ
ತಿರುಮಲಕ್ಕೆ ತೆರಳುವ ಭಕ್ತರಿಗೆ ಟಿಟಿಡಿ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ತಿರುಮಲದಲ್ಲಿ ಚಿರತೆ ಮತ್ತು ಕರಡಿಗಳು ಮತ್ತೆ ಕಾಣಿಸಿಕೊಂಡಿದ್ದು ಸಂಚಲನ ಮೂಡಿಸಿವೆ. ಟ್ರ್ಯಾಪ್ ಕ್ಯಾಮೆರಾಗಳಲ್ಲಿ ಚಿರತೆ ಮತ್ತು ಕರಡಿ ಚಲನವಲನಗಳು ಸೆರೆಹಿಡಿಯಲಾಗಿದೆ.
ಕಳೆದ ತಿಂಗಳಲ್ಲಿ ಎರಡು ದಿನಗಳ ಕಾಲ ಟ್ರ್ಯಾಪ್ ಕ್ಯಾಮೆರಾದಲ್ಲಿ ಚಿರತೆ ಮತ್ತು ಕರಡಿಗಳ ಚಲನವಲನಗಳು ದಾಖಲಾಗಿವೆ. ನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಹಾಕಲಾಗಿದ್ದ ಟ್ರ್ಯಾಪ್ ಕ್ಯಾಮೆರಾದಲ್ಲಿ ಚಿರತೆ ಮತ್ತು ಹುಲಿ ಚಲನವಲನ ಸೆರೆಯಾಗಿದೆ.

ಡಿಸೆಂಬರ್ 13 ಮತ್ತು 29 ರಂದು ಟ್ರ್ಯಾಪ್ ಕ್ಯಾಮೆರಾದಲ್ಲಿ ಚಿರತೆ ಮತ್ತು ಕರಡಿ ಚಲನವಲನಗಳು ಕಂಡು ಬಂದಿವೆ. ಇದರಿಂದ ಎಚ್ಚೆತ್ತಿರುವ ಟಿಟಿಡಿ ನಡಿಗೆದಾರಿಯಲ್ಲಿ ತಿರುಮಲಕ್ಕೆ ತೆರಳುವ ಭಕ್ತರಿಗೆ ಕೆಲ ಸೂಚನೆಗಳನ್ನು ನೀಡಿದೆ. 'ಭಕ್ತರು ಜಾಗೃತರಾಗಿರಿ.. ಗುಂಪು ಗುಂಪಾಗಿ ತೆರಳಿ' ಎಂದು ಮನವಿ ಮಾಡಿದೆ.
ಈ ಹಿಂದೆ ಅಲಿಪಿರಿ ಫುಟ್‌ಪಾತ್‌ನಲ್ಲಿ ಚಿರತೆಗಳು ಸಂಚರಿಸಿ ಬಾಲಕನ ಮೇಲೆ ದಾಳಿ ಮಾಡಿತ್ತು. ನೆಲ್ಲೂರು ಜಿಲ್ಲೆಯ ಕೋವೂರು ಮೂಲದ ಬಾಲಕಿಯ ಮೇಲೆ ದಾಳಿ ಮಾಡಿ ಕೊಂದು ಹಾಕಿದ್ದವು. ಬಳಿಕ ಟಿಟಿಡಿ ಎಚ್ಚರಿಕೆ ನೀಡಿತ್ತು. ಇದಾದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಸೇರಿ ಬಲೆ ಹಾಕಿ ಐದು ಚಿರತೆ ಸೆರೆ ಹಿಡಿದರು.
ಇದಾದ ಬಳಿಕ ಚಿರತೆ ಭೀತಿ ಇರಲಿಲ್ಲ. ಚಿರತೆ ಕಾಟ ಇನ್ನಿರುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಭಾವಿಸಿದ್ದರು. ಆದರೆ ಇತ್ತೀಚೆಗೆ ಮತ್ತೊಂದು ಚಿರತೆ, ಕರಡಿ ಓಡಾಡುತ್ತಿರುವುದು ಕಂಡು ಬಂದಿದ್ದು, ಭಕ್ತರಲ್ಲಿ ಭೀತಿ ಹುಟ್ಟಿಸಿದೆ. ಈಗಾಗಲೇ ನಡಿಗೆ ಮಾರ್ಗದಲ್ಲಿ ಕೆಲವು ನಿಯಮಗಳನ್ನು ಅಳವಡಿಸಲಾಗಿದೆ.

ತಿರುಮಲಕ್ಕೆ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರ ಸುರಕ್ಷತೆಗಾಗಿ ಟಿಟಿಡಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ರಾತ್ರಿ 10 ಗಂಟೆಯ ನಂತರ ಅಲಿಪಿರಿ ನಡಿಗೆ ಮಾರ್ಗದಲ್ಲಿ ಭಕ್ತರಿಗೆ ಪ್ರವೇಶವಿಲ್ಲ. ಬೆಳಿಗ್ಗೆ 6 ಗಂಟೆಯ ನಂತರವೇ ಪಾದಯಾತ್ರೆಗೆ ಅವಕಾಶ ಕಲ್ಪಿಸಲಾಗಿದೆ.
ಅಲ್ಲದೆ, ಮಧ್ಯಾಹ್ನ 2 ಗಂಟೆಯ ನಂತರ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ವಾಕ್‌ವೇನಲ್ಲಿ ಅನುಮತಿಸಲಾಗುವುದಿಲ್ಲ. ಅಲಿಪಿರಿ ಜೊತೆಗೆ ತಿರುಮಲಕ್ಕೆ ಹೋಗುವ ಭಕ್ತರು ಶ್ರೀವಾರಿ ಮೆಟ್ಟಿಲು ಮಾರ್ಗದಲ್ಲಿ ಗುಂಪು ಗುಂಪಾಗಿ ನಡೆದುಕೊಂಡು ಹೋಗಬೇಕು ಎಂದು ಟಿಟಿಡಿ ಸೂಚಿಸಿದೆ. ಇಂತಹ ಸ್ಥಳಗಳಲ್ಲಿ ಕೆಲ ಕಾವಲುಗಾರರನ್ನೂ ನೇಮಿಸಲಾಗಿದೆ.
ತಿರುಪತಿಯಲ್ಲಿ ಹತ್ತು ದಿನದ ವೈಕುಂಠ ದ್ವಾರ ದರ್ಶನ ಆರಂಭವಾಗಿದೆ. ಇದಕ್ಕಾಗಿ ಭಕ್ತ ಸಾಗರವೇ ತಿರುಪತಿಗೆ ಭೇಟಿ ನೀಡುತ್ತಿದೆ. ಜನವರಿ 2ರವರೆಗೆ ವೈಕುಂಠ ದ್ವಾರ ದರ್ಶನ ಇರಲಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತಿರುಮಲಕ್ಕೆ ತೆರಳುವ ಮೂಲಕ ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದಾರೆ. ಈ ನಡುವೆ ಕಾಡು ಪ್ರಾಣಿಗಳು ಭಕ್ತರಲ್ಲಿ ಭೀತಿಯನ್ನು ಹುಟ್ಟಿಸಿವೆ. ಇದರಿಂದ ಟಿಟಿಡಿ ಭಕ್ತರಿಗೆ ಎಚ್ಚರಿಕೆಯಿಂದರಿಲು ಸೂಚಿಸಿದ್ದು ಕೆಲ ಸ್ಥಳಗಳಲ್ಲಿ ಕಾವಲುಗಾರರನ್ನೂ ನೇಮಿಸಿದೆ.












Click it and Unblock the Notifications