Tirumala: ಶ್ರೀಕಾಳಹಸ್ತಿ ದೇವಸ್ಥಾನದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ದಾಖಲೆ ದೇಣಿಗೆ ಸಂಗ್ರಹ!
ಶ್ರೀಕಾಳಹಸ್ತಿ ದೇವಸ್ಥಾನದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಹೊಸ ದಾಖಲೆ ದಾಖಲಾಗಿದೆ. ಭಾನುವಾರದಂದು ದೇವಸ್ತಾನದಲ್ಲಿ ರಾಹು-ಕೇತು ಪೂಜೆಗಳು ನಡೆದವು. ಈ ಸಂದರ್ಭದಲ್ಲಿ ನೂರಾರು ಭಕ್ತರು ದೇಗುಲದಲ್ಲಿ ನಡೆದ ರಾಹು ಕೇತು ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು. ಭಾನುವಾರ ಭೀಮನ ಅಮವಾಸ್ಯೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥನಕ್ಕೆ ಭೇಟಿ ನೀಡಿ ಉದ್ದನೆಯ ಸರತಿ ಸಾಲುಗಳಲ್ಲಿ ನಿಂತು ದೇವರ ದರ್ಶನ ಪಡೆದರು. ಇದೇ ದಿನ ದೇವಸ್ಥಾನದ ಹುಂಡಿಯಲ್ಲಿ ದಾಖಲೆಯ ಆದಾಯ ಸಂಗ್ರಹವಾಗಿದೆ.
ಹೌದು.... ಶ್ರೀಕಾಳಹಸ್ತಿ ದೇವಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ ದೇಣಿಗೆ ಸಂಗ್ರಹವಾಗಿದೆ. ದೇವಾಲಯದಲ್ಲಿ ರಾಹು-ಕೇತು ಸರ್ಪದೋಷ ಪರಿಹಾರ ಪೂಜೆಗಳನ್ನು ಐದು ವಿಭಿನ್ನ ಬೆಲೆಯ ಟಿಕೆಟ್‌ಗಳಲ್ಲಿ ನೀಡಲಾಗುತ್ತದೆ. ಐದು ವಿಭಾಗಗಳಲ್ಲಿ 9,168 ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ. ಇದರಿಂದ ದಾಖಲೆಯ ಹಣ ಸಂಗ್ರಹವಾಗಿದೆ.

ಭೀಮನ ಅಮಾವಾಸ್ಯೆ ಭಾನುವಾರವಿತ್ತು. ಈ ಒಂದೇ ದಿನ 9,168 ರಾಹುಕೇತು ವಿಶೇಷ ಪೂಜೆ ಟಿಕೆಟ್‌ಗಳು ಮಾರಾಟವಾಗಿವೆ. ಇದು ದೇವಾಲಯದ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಮುಕ್ಕಂಟಿ ದೇವಸ್ಥಾನದ ರಾಹುಕೇತು ದೇವಸ್ಥಾನ ಬೆಳಗ್ಗೆಯಿಂದ ಸಂಜೆಯವರೆಗೆ ಭಕ್ತರಿಂದ ತುಂಬಿ ತುಳುಕುತ್ತಿರುವ ದೃಶ್ಯಗಳು ಕಂಡು ಬಂದಿವೆ.
ಶ್ರೀಕಾಳಹಸ್ತಿ ದೇವಸ್ಥಾನಕ್ಕೆ ದಾಖಲೆಯ ಆದಾಯ ಸಂಗ್ರಹ!
ಇದಲ್ಲದೆ ಶ್ರೀಕಾಳಹಸ್ತಿ ದೇವಸ್ಥಾನಕ್ಕೆ ಸ್ವಾಮಿಗೆ ಸೇವೆ, ದರ್ಶನ, ಪ್ರಸಾದ, ವಸತಿ ಸಮುಚ್ಚಯ, ದೇಣಿಗೆ ಮೂಲಕ 1,00,95,356 ರೂಪಾಯಿ ಆದಾಯ ಸಂಗ್ರಹವಾಗಿದೆ. ಶ್ರೀಕಾಳಹಸ್ತಿ ದೇವಸ್ಥಾನದಲ್ಲಿ 500 ರೂಪಾಯಿಗಳ 5,183 ಟಿಕೆಟ್‌ಗಳು, 750 ರೂಪಾಯಿಯ 2,288 ಟಿಕೆಟ್‌ಗಳು, 1,500 ರೂಪಾಯಿ 933 ಟಿಕೆಟ್‌ಗಳು, 2,500 ರೂಪಾಯಿಯ 610 ಟಿಕೆಟ್‌ಗಳು ಮತ್ತು 5,000 ರೂಪಾಯಿಯ 154 ಟಿಕೆಟ್‌ಗಳನ್ನು ಮಾರಾಟ ಮಾಡಲಾಯಿತು. ಅಲ್ಲದೆ ಐದು ಬಗೆಯ ಪ್ರಸಾದದ 29,505 ಪ್ಯಾಕೆಟ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡಲಾಗಿದೆ. ಈ ಸೇವೆಗಳು ದಾಖಲೆಯ ಮಟ್ಟವನ್ನು ತಲುಪಿವೆ.

ಶ್ರೀಕಾಳಹಸ್ತಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಳ
ಇತ್ತೀಚಿನ ದಿನಗಳಲ್ಲಿ ಶ್ರೀಕಾಳಹಸ್ತಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ತಿರುಮಲ ಶ್ರೀಗಳ ದರ್ಶನಕ್ಕೆ ಬರುವ ಭಕ್ತರು ಕೂಡ ಶ್ರೀಕಾಳಹಸ್ತೇಶ್ವರನ ದರ್ಶನ ಪಡೆಯುತ್ತಿದ್ದಾರೆ. ಅದರಲ್ಲೂ ವಾರಾಂತ್ಯದಲ್ಲಿ ಇಲ್ಲಿ ಜನಜಂಗುಳಿ ಹೆಚ್ಚಾಗಿರುತ್ತದೆ. ಇದಕ್ಕಾಗಿ ದೇವಸ್ಥಾನದ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡುತ್ತಿದ್ದಾರೆ. ಅಲ್ಲದೆ ಭಾನುವಾರ ಅಮವಾಸ್ಯೆ ಆಗಿರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು ಎನ್ನಲಾಗಿದೆ. ಒಟ್ಟಿನಲ್ಲಿ ಶ್ರೀಕಾಳಹಸ್ತಿ ದೇವಸ್ಥಾನದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ದೇವಸ್ಥಾನದ ಅಧಿಕಾರಿಗಳು ಭಾರೀ ಪ್ರಮಾಣದಲ್ಲಿ ಪೂಜೆ ಟಿಕೆಟ್ ಮಾರಾಟ ಮಾಡಿದ್ದಾರೆ.
ಸ್ಥಳೀಯ ಶಾಸಕ ಬೊಜ್ಜಲ ಸುಧೀರ್ ರೆಡ್ಡಿ ಅವರ ಸೂಚನೆ ಮೇರೆಗೆ ದೇವಸ್ಥಾನದ ಉಪ ಇಒ ಎನ್.ಆರ್.ಕೃಷ್ಣಾರೆಡ್ಡಿ, ಎಇಒ ಲೋಕೇಶ್ ರೆಡ್ಡಿ ಸೇರಿದಂತೆ ಹಲವು ಅಧಿಕಾರಿಗಳು ಸೇರಿ ಭಾನುವಾರ ನಿರೀಕ್ಷೆಗೂ ಮೀರಿ ದೇವಸ್ಥಾನಕ್ಕೆ ಆಗಮಿಸಿದ ಭಕ್ತರನ್ನು ನಿರ್ವಹಿಸಿದ್ದಾರೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಯಾವುದೇ ಸಮಸ್ಯೆಗಳಿಲ್ಲದೆ ರಾಹು ಕೇತು ಪೂಜೆ ಸಂಪನ್ನಗೊಂಡಿದೆ.












Click it and Unblock the Notifications