ಮತ್ತೊಂದು ಚುನಾವಣೆ ಸಮೀಕ್ಷೆ: ಫಲಿತಾಂಶ ಏನು?
ನವದೆಹಲಿ, ಸೆಪ್ಟೆಂಬರ್ 18: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ ಮತ್ತು ದೆಹಲಿಯ ವಿಧಾನಸಭೆಗಳಿಗೆ ಇದೇ ವರ್ಷಾಂತ್ಯ ಚುನಾವಣೆಗಳು ನಡೆಯುವ ಹಿನ್ನೆಲೆಯಲ್ಲಿ ಟೈಮ್ಸ್ ನೌ ರಾಷ್ಟ್ರೀಯ ನ್ಯೂಸ್ ಚಾನೆಲ್ ಮತ್ತು ಸಿ-ವೋಟರ್ ಸಮೀಕ್ಷೆ ನಡೆಸಿದ್ದು ಫಲಿತಾಂಶಗಳು ಕುತೂಹಲಕಾರಿಯಾಗಿವೆ.
ಗಮನಾರ್ಹವೆಂದರೆ ಈ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗಳು ಲೋಕಸಭೆಗೆ 2014ರಲ್ಲಿ ನಡೆಯುವ ಚುನಾವಣೆಗೆ ದಿಕ್ಸೂಚಿ ಎಂದೇ ಪರಿಗಣಿಸಲಾಗಿದ್ದು ಈ ಚುನಾವಣೆ ಪೂರ್ವ ಸಮೀಕ್ಷೆಗೆ ಮಹತ್ವ ಬಂದಿದೆ. ಇಂಟರೆಸ್ಟಿಂಗ್ ಅಂದರೆ ಇತರ ಖಾಸಗಿ ಸುದ್ದಿವಾಹಿನಿಗಳು ನಡೆಸಿದ ಸಮೀಕ್ಷೆಗಳೂ ಬಹುತೇಕ ಇದೇ ರೀತಿಯ ಭವಿಷ್ಯ ನುಡಿದಿವೆ.
ಟೈಮ್ಸ್ ನೌ ವಾಹಿನಿಯ ಹಾಲಿ ಸಮೀಕ್ಷೆಯ ಪ್ರಕಾರ ರಾಜಸ್ಥಾನದಲ್ಲಿ ಕೈ ಪಕ್ಷದಿಂದ ಬಿಜೆಪಿ ಅಧಿಕಾರವನ್ನು ಮರುವಶಪಡಿಸಿಕೊಂಡರೆ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಸರಕಾರ ಉಳಿಸಿಕೊಳ್ಳಲಿದೆ. ಇನ್ನು, ದೆಹಲಿಯಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಫಿಫ್ಟಿ-ಫಿಫ್ಟಿ ಛಾನ್ಸಸ್ ಇದೆ. ಆದರೆ ಇಲ್ಲಿ ಮತ ವಿಭಜನೆಗೆ ಕಾರಣವಾಗುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ನಿರ್ಣಾಯಕ ಪಾತ್ರವಹಿಸಲಿದೆ. Times Now-CVoter poll ಸಮೀಕ್ಷೆ ಫಲಿತಾಂಶ ಹೀಗಿದೆ:

ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷ ನಿರ್ಣಾಯಕ
ದೆಹಲಿಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ಹಣಾಹಣಿ ನಡೆಯಲಿದ್ದು, 70 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 30, ಕಾಂಗ್ರೆಸ್ 29 ಸ್ಥಾನಗಳನ್ನು ಪಡೆಯಲಿವೆ.
ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕ ಸಂಚಲನವನ್ನುಂಟುಮಾಡಿರುವ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು 7 ಸ್ಥಾನ ಪಡೆಯಲಿದೆ. ಜನಪ್ರಿಯ ಸಿಎಂ ಅಭ್ಯರ್ಥಿಯ ರೇಸ್‌ನಲ್ಲಿ ಶೇ 37ರಷ್ಟು ಮತಗಳೊಂದಿಗೆ ಶೀಲಾ ಮುಂಚೂಣಿಯಲ್ಲಿದ್ದರೆ, ಶೇ 18 ಮತದಿಂದ ವಿಜಯ್ ಗೋಯಲ್ 2ನೇ ಸ್ಥಾನದ್ದಾರೆ. ಕೇಜ್ರಿವಾಲ್ ಶೇ 17 ಮತಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.

ರಾಜಸ್ಥಾನದಲ್ಲಿ ವಸುಂಧರಾ ರಾಜೇ ಮುಡಿಗೆ 'ಕಮಲ' :
ಇನ್ನು ರಾಜಸ್ಥಾನದಲ್ಲಿ 'ಕಮಲ' ವಸುಂಧರಾ ರಾಜೇ ಅರಸ್ ಅವರ ಮುಡಿಗೇರಲಿದೆ. ಕಾಂಗ್ರೆಸ್ ಸರಕಾರವಿರುವ ರಾಜಸ್ಥಾನದಲ್ಲಿ ಆಡಳಿತ ವಿರೋಧಿ ಅಲೆ ಜೋರಾಗಿಯೇ ಇದ್ದು ಅದು ಬಿಜೆಪಿಗೆ ವರದಾನವಾಗಲಿದೆ. 200 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 118 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ. ಕಳೆದ ಬಾರಿ 96 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಈ ಸಲ 64 ಸೀಟುಗಳನ್ನಷ್ಟೇ ಪಡೆಯಲಿದೆ. ಇನ್ನುಳಿದಂತೆ ಬಿಎಸ್ಪಿ 3 ಹಾಗೂ ಪಕ್ಷೇತರರು 15 ಸ್ಥಾನಗಳನ್ನು ಪಡೆಯಲಿವೆ ಎಂದು ಸಮೀಕ್ಷೆಯಿಂದ ಅಂದಾಜಿಸಲಾಗಿದೆ.

ಕಾಂಗ್ರೆಸ್ಸಿನ ಜ್ಯೋತಿರಾಧ್ಯ ಸಿಂಧಿಯಾ ಮಂಕು
ಮಧ್ಯ ಪ್ರದೇಶದಲ್ಲಿ ಬಿಜೆಪಿಯ ಸಾಧನೆ ಕಳೆದ ಬಾರಿಗಿಂತ ಕೊಂಚ ಕಳಪೆಯಾದರೂ ಸರಕಾರ ರಚನೆಗೆ ತೊಂದರೆಯಾಗದು. ಕಾಂಗ್ರೆಸ್ ತನ್ನ ಪರಿಸ್ಥಿತಿ ಸುಧಾರಿಸಿಕೊಂಡರೂ ಅಧಿಕಾರದ ಆಸೆ ಕೈಗೂಡುವಂತೆ ಕಾಣಿಸುತ್ತಿಲ್ಲ. 230 ಸದಸ್ಯ ಬಲದ ವಿಧಾನಸಭೆಯಲ್ಲಿ ಕಳೆದ ಚುನಾವಣೆಯಲ್ಲಿ 143 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ 130 ಸ್ಥಾನಗಳಿಗೆ ತೃಪ್ತಿಪಡಲಿದೆ. ಕಾಂಗ್ರೆಸ್ 71 ಸ್ಥಾನಗಳಿಂದ 84ಕ್ಕೆ ತನ್ನ ಸ್ಥಾನಗಳನ್ನು ಏರಿಸಿಕೊಳ್ಳಲಿದೆ. ಬಿಎಸ್ಪಿಯ ಮಾಯಾವತಿ ಅವರು ಐದಾರು 'ಆನೆ'ಯ ಹೆಜ್ಜೆಗುರುತುಗಳನ್ನು ಮೂಡಿಸಬಲ್ಲರಷ್ಟೇ. 11 ಕ್ಷೇತ್ರಗಳಲ್ಲಿ ಪಕ್ಷೇತರರ ಪ್ರಭಾವ ಹೆಚ್ಚಿರಲಿದೆ. ಕಾಂಗ್ರೆಸ್ಸಿನ ಜ್ಯೋತಿರಾಧ್ಯ ಸಿಂಧಿಯಾ ಮಂಕಾಗಿದ್ದಾರೆ.

'ಹಸ್ತ'ದ ಅಜಿತ್ ಜೋಗಿ ಪ್ರಭಾವವಿಲ್ಲ
ಕಾಂಗ್ರೆಸ್ಸಿನ ತೀವ್ರ ಪ್ರತಿರೋಧದ ನಡುವೆಯೂ ಛತ್ತೀಸ್ ಗಢದಲ್ಲಿ ರಮಣ್ ಸಿಂಗ್ ಅಧಿಕಾರ ಅಬಾಧಿತ. ಆಡಳಿತ ವಿರೋಧಿ ಅಲೆಯ ನಡುವೆಯೂ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಬಿಜೆಪಿಯನ್ನು ಗೆಲುವಿನ ದಡದತ್ತ ಕೊಂಡೊಯ್ಯಲಿದ್ದಾರೆ. 90 ಸದಸ್ಯ ಬಲದ ವಿಧಾನಸಭೆಯಲ್ಲಿ ಕಳೆದ ಬಾರಿ 38 ಸ್ಥಾನಗಳಲ್ಲಿ ಗೆಲುವು ಪಡೆದಿದ್ದ ಕಾಂಗ್ರೆಸ್ ಈ ಬಾರಿ 40 ಸ್ಥಾನಕ್ಕೆ ಏರಿಸಿಕೊಂಡರೆ, ಬಿಜೆಪಿಯ ಸಾಧನೆ 50 ಸೀಟುಗಳಿಂದ 47ಕ್ಕೆ ಕುಸಿಯಲಿದೆ. ಬಿಎಸ್ಪಿ 2 ಸ್ಥಾನಗಳೊಂದಿಗೆ ಯಥಾಸ್ಥಿತಿ ಕಾಪಾಡಿಕೊಳ್ಳಲಿದೆ.

ಈ ಸಮೀಕ್ಷಾ ಫಲಿತಾಂಶಗಳ ಪರಿಣಾಮವೇನು?
ಈ ಪ್ರಶ್ನೆ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಆದರೆ ಇದಕ್ಕೆ ಉತ್ತರವಾಗಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಮುನ್ನಡೆ ಎಂಬುದು ಗೋಚರವಾಗುತ್ತದೆ. ಈ ನಾಲ್ಕೂ ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಜನಪ್ರಿಯ ಪ್ರಧಾನಿ ಅಭ್ಯರ್ಥಿಯ ರೇಸ್ ಫಲಿತಾಂಶ ಗಣನೆಗೆ ತೆಗೆದುಕೊಂಡರೆ ಬಿಜೆಪಿಯ ನರೇಂದ್ರ ಮೋದಿ ದೊಡ್ಡ ಪ್ರಮಾಣದಲ್ಲಿ ಮುಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್ ಪಾಳಯದ ರಾಹುಲ್ ಗಾಂಧಿ ಎರಡನೇ ಸ್ಥಾನದಲ್ಲಿದ್ದರೆ, ಪ್ರಧಾನಿ ಮನಮೋಹನ್ ಸಿಂಗ್ ಮೂರನೇ ಸ್ಥಾನದಲ್ಲಿದ್ದಾರೆ.












Click it and Unblock the Notifications