Tanker Fire: ಹೊತ್ತಿ ಉರಿದ ಇಂಧನ ಟ್ಯಾಂಕರ್! ವಂದೇ ಭಾರತ್ ಸೇರಿ 08 ರೈಲು ಸಂಚಾರ ರದ್ದು
Tanker Fire Incident: ಚೆನ್ನೈನಿಂದ ಬೆಂಗಳೂರಿಗೆ ಇಂಧನ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿಯು ಬೆಂಕಿಗೆ ಆಹುತಿಯಾದ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ. ಇದರಿಂದಾಗಿ ವಂದೇ ಭಾರತ್ ಸೇರಿದಂತೆ ವಿವಿಧ ರೈಲುಗಳ ಸಂಚಾರದಲ್ಲಿ ವಿಳಂಬವಾಯಿತು. ಸುಮಾರು ಎಂಟು ರೈಲುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಿದೆ. ಅಸಲಿಗೆ ಆಗಿದ್ದೇನು, ಯಾವೆಲ್ಲ ರೈಲು ಸಂಚಾರದಲ್ಲಿ ತೊಂದರೆ ಆಯಿತು? ಎಂಬ ಮಾಹಿತಿ ಇಲ್ಲಿದೆ.
ಇಂಧನ ಹೊತ್ತು ಬರುತ್ತಿದ್ದ ಲಾರಿಯೊಂದು ತಮಿಳುನಾಡಿನ ಚೆನ್ನೈನಿಂದ ಬೆಂಗಳೂರಿಗೆ ರಸ್ತೆ ಮಾರ್ಗವಾಗಿ ಬರುತ್ತಿತ್ತು. ಈ ವೇಳೆ ತಿರುವಳ್ಳೂರು ರೈಲು ನಿಲ್ದಾಣದ ಬಳಿ ಬರುತ್ತಿದ್ದಂತೆ ಇಂದು ಬೆಳಗಿನ ಜಾವ ದಿಢೀರ್ ಬೆಂಕಿ ಕಾಣಿಸಿಕೊಂಡಿತು. ನೋಡ ನೋಡುತ್ತಿದ್ದಂತೆ ಆಕಾಶದೆತ್ತರಕ್ಕೆ ದಟ್ಟ ಹೊಗೆ ಆವರಿಸಿಕೊಂಡಿತ್ತು. ಇದರಿಂದ ಪಕ್ಕದಲ್ಲೇ ಇದ್ದ ರೈಲ್ವೆ ಹಳಿ ಸುತ್ತಮುತ್ತ ಹೊಗೆ ತುಂಬಿಕೊಂಡ ಕಾರಣ, ರೈಲು ಸಂಚಾರಕ್ಕೆ ತೊಂದರೆ ಉಂಟಾಯಿತು. ಸುತ್ತಮುತ್ತಲಿನ ವಾಹನಗಳ ಸವಾರರು ಹಾಗೂ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಉಂಟಾಯಿತು.

ಈ ಘಟನೆಯಿಂದ ಬೆಂಗಳೂರು ಮಾರ್ಗವಾಗಿ ಮೈಸೂರು ಮತ್ತು ಕೊಯಮತ್ತೂರಿಗೆ ತೆರಳುವ ಪ್ರೀಮಿಯಂ ವಂದೇ ಭಾರತ್ ಮತ್ತು ಶತಾಬ್ದಿ ಎಕ್ಸ್‌ಪ್ರೆಸ್‌ಗಳು ಸೇರಿದಂತೆ ಕನಿಷ್ಠ ಎಂಟು ರೈಲುಗಳ ಸಂಚಾರ ರದ್ದಾಗಿದೆ ಎಂದು ದಕ್ಷಿಣ ರೈಲ್ವೆ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಟ್ಯಾಂಕರ್ ಲಾರಿ ಆಗಿದ್ದರಿಂದ ಸೂಕ್ತ ಅಗತ್ಯ ಎಚ್ಚರಿಕೆ ವಹಿಸಲಾಗಿದೆ. ಲಾರಿಯಲ್ಲಿ ಬೆಂಕಿ, ದಟ್ಟ ಹೊಗೆ ಕಾಣಿಸುತ್ತಿದ್ದಂತೆ ರೈಲ್ವೆ ಅಧಿಕಾರಿಗಳೊಂದಿಗೆ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳನ್ನು ತಕ್ಷಣವೇ ನಿಯೋಜಿಸಲಾಯಿತು. ಸ್ಥಳದಲ್ಲಿ ಪರಿಸ್ಥಿತಿಯನ್ನು ಸಕ್ರಿಯವಾಗಿ ನಿರ್ವಹಿಸಲಾಗುತ್ತಿದೆ. ರೈಲುಗಳ ಪುನಃಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ, ಮತ್ತು ಸಾಮಾನ್ಯ ರೈಲು ಕಾರ್ಯಾಚರಣೆಗಳು ಆದಷ್ಟು ಬೇಗ ಪುನರಾರಂಭಗೊಳ್ಳುತ್ತವೆ ಎಂದು ದಕ್ಷಿಣ ರೈಲ್ವೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಯಾವ ಕಾರಣಕ್ಕೆ ಟ್ಯಾಂಕರ್ ಲಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿತು, ಅದಕ್ಕೆ ಕಾರಣವೇನು? ಎಂಬೆಲ್ಲ ಮಾಹಿತಿಗಳು ತಿಳಿಯಬೇಕಿದೆ. ಇನ್ನೂ ಈ ಘಟನೆಯಿಂದಾಗಿ ಎಂಟು ರೈಲುಗಳಲ್ಲಿ ಬರುತ್ತಿದ್ದ ಸಾವಿರಾರು ಪ್ರಯಾಣಿಕರಿಗೆ ಕೊಂಚ ಅಡಚಣೆ ಆಯಿತು. ರೈಲ್ವೆ ಅಧಿಕಾರಿಗಳ ಮಾಹಿತಿ ಮೇರೆಗೆ ಹಿಂದಿನ ರೈಲು ನಿಲ್ದಾಣ, ಮಾರ್ಗ ಮಧ್ಯದಲ್ಲೇ ರೈಲುಗಳು ಗಂಟೆಗಳ ಕಾಲ ಕಾಯಬೇಕಾಯಿತು. ಇಂದು ಮಧ್ಯಾಹ್ನದ ಹೊತ್ತಿಗೆ ರೈಲುಗಳ ಎಂದಿನಂತೆ ಸಂಚಾರ ನಿರೀಕ್ಷಿಸಬಹುದಾಗಿದೆ.












Click it and Unblock the Notifications