ಸಿಹಿಸುದ್ದಿ: ಈ ನಾಲ್ಕು ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಕಡಿಮೆ!
ನವದೆಹಲಿ, ಫೆಬ್ರವರಿ.22: ಭಾರತದಲ್ಲಿ ಏರುಮುಖವಾಗಿ ಸಾಗುತ್ತಿರುವ ಇಂಧನ ಬೆಲೆ ಬಡ ಮತ್ತು ಮಧ್ಯಮ ವರ್ಗದ ಜನರ ಜೇಬು ಸುಡುತ್ತಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಪ್ರಮುಖ ನಗರಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದ್ದು, ಡೀಸೆಲ್ ಬೆಲೆ 80 ರೂಪಾಯಿಗಿಂತ ಹೆಚ್ಚಾಗಿದೆ.
ಒಂದು ಕಡೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಬೆಲೆ ಏರಿಕೆಯಾಗುತ್ತಿದ್ದರೆ ದೇಶದ ಹಲವು ರಾಜ್ಯಗಳು ತೆರಿಗೆ ವಿನಾಯಿತಿ ಘೋಷಿಸುತ್ತಿವೆ. ಆ ಮೂಲಕ ಆಯಾ ರಾಜ್ಯಗಳಲ್ಲಿ ಇಂಧನ ಬೆಲೆಯನ್ನು ನಿಯಂತ್ರಣದಲ್ಲಿ ಇರಿಸುವ ಪ್ರಯತ್ನದಲ್ಲಿ ತೊಡಗಿವೆ.
ಬೆಂಗಾಳದಲ್ಲಿ ಪೆಟ್ರೋಲ್, ಡೀಸೆಲ್ ಇಳಿಕೆ ಮಾಡಿದ ಮಮತಾ ಸರ್ಕಾರ
ರಾಜ್ಯದ ಪ್ರಯಾಣಿಕರಿಗೆ ಮತ್ತು ಸಾರಿಗೆ ವ್ಯವಸ್ಥೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳುವ ಉದ್ದೇಶದಿಂದಾಗಿ ಭಾರತದ ನಾಲ್ಕು ರಾಜ್ಯಗಳಲ್ಲಿ ಇಂಧನ ಬೆಲೆಯ ಮೇಲೆ ತೆರಿಗೆ ವಿನಾಯಿತಿ ನೀಡಲಾಗಿದೆ.
ಪಶ್ಚಿಮ ಬಂಗಾಳ, ರಾಜಸ್ಥಾನ, ಅಸ್ಸಾಂ ಮತ್ತು ಮೇಘಾಲಯಗಳಲ್ಲಿ ವಿನಾಯಿತಿ ನೀಡಲಾಗಿದೆ. ಈ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ರಾಜಸ್ಥಾನ ಸರ್ಕಾರದಿಂದ ವಿನಾಯಿತಿ
ಒಂದು ಕಡೆ ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದ್ದು, ಡೀಸೆಲ್ 80 ರೂಪಾಯಿ ಮೀರಿದೆ. ಈ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವು ಇಂಧನದ ಮೇಲಿನ ತೆರಿಗೆಯನ್ನು ಶೇ.38 ರಿಂದ ಶೇ.36ಕ್ಕೆ ಇಳಿಕೆ ಮಾಡಿದೆ. ಇದರ ನಡುವೆಯೂ ಗಂಗಾನಗರ್ ಮತ್ತು ಹನುಮಾನ್ ಘರ್ ನಲ್ಲಿ ಪೆಟ್ರೋಲ್ ದರ 100 ರೂ ಗಡಿ ದಾಟುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಇಂಧರ ಬೆಲೆ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ಇಂಧನದ ಮೇಲೆ ವಿಧಿಸುವ ತೆರಿಗೆಗೆ ವಿನಾಯಿತಿ ನೀಡಿದೆ. ಇದರಿಂದ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದ ಮೇಲೆ ಒಂದು ರೂಪಾಯಿ ವಿನಾಯಿತಿ ಸಿಕ್ಕಿದೆ. ರಾಜ್ಯದಲ್ಲಿ ಪೆಟ್ರೋಲ್ ದರ -91.78 ರೂ ಇದ್ದರೆ, ಡೀಸೆಲ್ ದರ 84.56 ರೂಪಾಯಿ ಇದೆ.

ಪ್ರತಿ ಲೀ. ಇಂಧನಕ್ಕೆ 5 ರೂಪಾಯಿ ಇಳಿಕೆ
2021ರಲ್ಲೇ ವಿಧಾನಸಭಾ ಚುನಾವಣೆ ಎದುರಿಸಲಿರುವ ಅಸ್ಸಾಂನಲ್ಲಿ ಸಾರ್ವಜನಿಕರಿಗೆ ರಾಜ್ಯ ಸರ್ಕಾರವು ಭರ್ಜರಿ ಕೊಡುಗೆ ನೀಡಿದೆ. ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರದ ಮೇಲೆ 5 ರೂಪಾಯಿ ವಿನಾಯಿತಿ ನೀಡಲಾಗಿದೆ. ರಾಜ್ಯದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 87.33 ರೂಪಾಯಿ ಇದೆ.

ರಾಜ್ಯದ ಪ್ರಜೆಗಳಿಗೆ ಮೇಘಾಲಯದಲ್ಲಿ ಬಂಪರ್
ಒಂದು ಕಡೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದರೆ ಮೇಘಾಲಯದಲ್ಲಿ ಪ್ರಜೆಗಳಿಗೆ ರಾಜ್ಯ ಸರ್ಕಾರವು ಬಂಪರ್ ಕೊಡುಗೆಯನ್ನೇ ನೀಡಲಾಗಿದೆ. ರಾಜ್ಯ ಸರ್ಕಾರವು ಶೇ.20ರಷ್ಟು ವಿನಾಯಿತಿ ನೀಡಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 7.4 ರೂಪಾಯಿ ಮತ್ತು ಡೀಸೆಲ್ ಬೆಲೆಯಲ್ಲಿ 7.1 ರೂಪಾಯಿ ಕಡಿಮೆಯಾಗಲಿದೆ.