ಅಕ್ಕಿ ರಫ್ತಿನ ಮೇಲೆ ನಿಷೇಧ: ಕೇಂದ್ರ ಸರ್ಕಾರ ಕೊಟ್ಟ ಸ್ಪಷ್ಟನೆ ಏನು?
ನವದೆಹಲಿ, ಜೂನ್ 13: ಕಳೆದ ತಿಂಗಳು ಗೋಧಿ ರಫ್ತಿನ ಮೇಲೆ ಭಾರತ ಸರ್ಕಾರ ನಿಷೇಧ ಹೇರಿದೆ. ಬಿಸಿ ಗಾಳಿ, ಹೆಚ್ಚಿನ ತಾಪಮಾನದಿಂದ ಭಾರತದಲ್ಲಿ ಗೋಧಿ ಇಳುವರಿ ಕಡಿಮೆಯಾಗಿದ್ದು, ರಷ್ಯಾ-ಉಕ್ರೇನ್ ಯುದ್ಧದಿಂದ ಉಂಟಾದ ಬಿಕ್ಕಟ್ಟಿನಿಂದ ಭಾರತಕ್ಕೆ ಎದುರಾಗಬಹುದಾದ ಆಹಾರ ಕೊರತೆ ತಪ್ಪಿಸಲು ಭಾರತ ಗೋಧಿ ರಫ್ತು ನಿಷೇಧಿಸಿ ಆದೇಶ ಮಾಡಿತ್ತು. ಈಗ ಅಕ್ಕಿ ರಫ್ತಿನ ಮೇಲೂ ನಿಷೇಧ ಹೇರುತ್ತೆ ಎನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿದ್ದು, ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧದಿಂದ ಜಗತ್ತಿನ ಆಹಾರ ವಲಯದಲ್ಲಿ ಏರುಪೇರಾಗಿದೆ. ಹಲವು ದೇಶಗಳ ಮೇಲೆ ಯುದ್ಧ ಪರಿಣಾಮ ಬೀರಿದ್ದು. ಎಣ್ಣೆ, ಆಹಾರ ಧಾನ್ಯಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತಕ್ಕೆ ಯುದ್ಧದ ಪ್ರಬಾವ ಅಷ್ಟಾಗಿ ತಟ್ಟದಿದ್ದರೂ, ಭವಿಷ್ಯದ ದೃಷ್ಟಿಯಿಂದ ಭಾರತ ಹಲವು ಕ್ರಮಗಳನ್ನು ತೆಗೆದುಕೊಂಡಿತು.
ಗೋಧಿ ನಂತರ, ಸಕ್ಕರೆ ರಫ್ತಿನ ಮೇಲೆ ಮಿತಿ ಹೇರಿತ್ತು. ಭಾರತದ ನಡೆಗೆ ಹಲವು ದೇಶಗಳು ವಿರೋಧ ವ್ಯಕ್ತಪಡಿಸಿದ್ದವು. ಈಗ ಅಕ್ಕಿ ರಫ್ತಿನ ಮೇಲೂ ನಿಷೇಧ ಎನ್ನುವ ಸುದ್ದಿಗೆ ಹಲವು ದೇಶಗಳು ಕಂಗಾಲಾಗಿದೆ. ಆದರೆ ಭಾರತದ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಸ್ಪಷ್ಟನೆ ನೀಡಿದ್ದಾರೆ.

ಗೊಂದಲಕ್ಕೆ ತೆರೆ ಎಳೆದ ಸುಧಾಂಶು ಪಾಂಡೆ
ಅಕ್ಕಿ ರಫ್ತು ನಿಷೇಧದ ವದಂತಿ ಕುರಿತು ಮಾತನಾಡಿರುವ ಸುಧಾಂಶು ಪಾಂಡೆ, "ಅಕ್ಕಿ ರಫ್ತಿನ ಮೇಲೆ ನಿರ್ಬಂಧ ವಿಧಿಸುವ ಯಾವುದೇ ಉದ್ದೇಶವಿಲ್ಲ" ಎಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, "ನಮ್ಮಲ್ಲಿ ಸಾಕಷ್ಟು ಅಕ್ಕಿ ದಾಸ್ತಾನು ಮಾಡಲಾಗಿದೆ, ಆದ್ದರಿಂದ ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರುವ ಬಗ್ಗೆ ಸರ್ಕಾರ ಚಿಂತನೆ ಮಾಡಿಲ್ಲ" ಎಂದು ಹೇಳಿದ್ದಾರೆ.
ಭಾರತವು ವಿಶ್ವಕ್ಕೆ ಅಕ್ಕಿಯನ್ನು ಅತಿ ಹೆಚ್ಚು ರಫ್ತು ಮಾಡುವ ದೇಶವಾಗಿದೆ ಎಂಬುದನ್ನು ಗಮನಿಸಬೇಕು. ಪ್ರಪಂಚದಾದ್ಯಂತದ ವಿವಿಧ ದೇಶಗಳು ಭಾರತೀಯ ಅಕ್ಕಿಯನ್ನು ಹೆಚ್ಚು ಅವಲಂಬಿಸಿವೆ. ಭಾರತ ಏನಾದರೂ ರಫ್ತಿನ ಮೇಲೆ ನಿರ್ಬಂಧ ವಿಧಿಸಿದರೆ ಹಲವು ದೇಶಗಳು ಆಹಾರ ಅಭದ್ರತೆ ಎದುರಿಸುತ್ತವೆ. ಈಗಾಗಲೇ ಯುದ್ಧದ ಕಾರಣದಿಂದಾಗಿ ಹೆಚ್ಚಿನ ಹಣದುಬ್ಬರವನ್ನು ಎದುರಿಸುತ್ತಿವೆ.

ಈ ವರ್ಷದ ಅಕ್ಕಿ ಉತ್ಪಾದನೆ ಲೆಕ್ಕಾಚಾರ
ಭಾರತದಲ್ಲಿ ಈ ವರ್ಷ ಸಾಮಾನ್ಯ ಮುಂಗಾರು ಮಳೆಯನ್ನು ಕಾಣಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಂದರೆ ಭತ್ತದ ಇಳುವರಿಯೂ ಈ ಬಾರಿ ಸಾಮಾನ್ಯವಾಗುವ ನಿರೀಕ್ಷೆಯಿದೆ. ಇದರಿಂದ ಭಾರತವು ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಪ್ರಬಲ ಸ್ಥಾನವನ್ನು ಉಳಿಸಿಕೊಳ್ಳಲು ಸಹಾಯ ಮಾಡಬಹುದು.
ಭಾರತವು 2 ನೇ ಅತಿ ದೊಡ್ಡ ಅಕ್ಕಿ ಉತ್ಪಾದಕ ಮತ್ತು ವಿಶ್ವಾದ್ಯಂತ ಅಕ್ಕಿಯ ಅತಿ ದೊಡ್ಡ ರಫ್ತುದಾರ ದೇಶ. ಭಾರತದಲ್ಲಿ ಅಕ್ಕಿ ಉತ್ಪಾದನೆಯು 1980 ರಲ್ಲಿ 53.6 ಮಿಲಿಯನ್ ಟನ್‌ಗಳಿಷ್ಟಿತ್ತು. ಅದು 2020-21 ರ ವೇಳೆಗೆ 120 ಮಿಲಿಯನ್ ಟನ್‌ಗಳಿಗೆ ಹೆಚ್ಚಾಗಿದೆ. ಅಕ್ಕಿ ಭಾರತದ ಪ್ರಮುಖ ಧಾನ್ಯಗಳಲ್ಲಿ ಒಂದಾಗಿದೆ.

ವಿಶ್ವದ ಅತಿ ದೊಡ್ಡ ರಫ್ತುದಾರ ದೇಶ
ವರದಿಯ ಪ್ರಕಾರ, 2021 ರಲ್ಲಿ ಭಾರತದ ಅಕ್ಕಿ ರಫ್ತು 21.5 ಮಿಲಿಯನ್ ಟನ್‌ಗಳಷ್ಟಿತ್ತು. ಇದು ಥೈಲ್ಯಾಂಡ್, ವಿಯೆಟ್ನಾಂ, ಪಾಕಿಸ್ತಾನ ಮತ್ತು ಅಮೆರಿಕ ರಫ್ತುದಾರರ ಪಟ್ಟಿಯಲ್ಲಿರುವ ಮುಂದಿನ ನಾಲ್ಕು ರಫ್ತುದಾರರ ರಫ್ತುಗಳಿಗಿಂತ ಹೆಚ್ಚು. ಭಾರತವು ಅಕ್ಕಿಯನ್ನು ಬಳಸುವ ವಿಶ್ವದ ಎರಡನೇ ಅತಿದೊಡ್ಡ ದೇಶವಾಗಿದೆ, ಚೀನಾ ವಿಶ್ವದಲ್ಲೇ ಹೆಚ್ಚು ಅಕ್ಕಿ ಬಳಕೆ ಮಾಡುತ್ತದೆ.
2007 ರಲ್ಲಿ, ದೇಶವು ಅಕ್ಕಿ ರಫ್ತಿನ ಮೇಲೆ ನಿಷೇಧವನ್ನು ಘೋಷಿಸಿದಾಗ, ಜಾಗತಿಕ ಅಕ್ಕಿ ಬೆಲೆಗಳು ತೀವ್ರವಾಗಿ ಏರಿಕೆಯಾಗಿತ್ತು. ಭಾರತವು ಪ್ರಪಂಚದಾದ್ಯಂತ 150 ದೇಶಗಳಿಗೆ ಅಕ್ಕಿಯನ್ನು ರಫ್ತು ಮಾಡುತ್ತದೆ.

33.27 ಮಿಲಿಯನ್ ಟನ್ ಅಕ್ಕಿ ದಾಸ್ತಾನು
ಭಾರತ ಈಗಾಗಲೇ ಬಾಸ್ಮತಿ ಸೇರಿ ವಿವಿಧ ತಳಿಯ 21.1 ಮಿಲಿಯನ್ ಟನ್‌ಗಳಷ್ಟು ಅಕ್ಕಿಯನ್ನು ರಫ್ತು ಮಾಡಿದೆ. ಮಾಹಿತಿ ಪ್ರಕಾರ ಭಾರತೀಯ ಆಹಾರ ನಿಗಮದ ವ್ಯಾಪ್ತಿಯಲ್ಲಿ 33.27 ಮಿಲಿಯನ್ ಟನ್ ಅಕ್ಕಿ, 26.61 ಮಿಲಿಯನ್ ಟನ್ ಭತ್ತ ದಾಸ್ತಾನು ಮಾಡಿದೆ.
ಭಾರತವು 2021-22ರಲ್ಲಿ 6.11 ಶತಕೋಟಿ ಡಾಲರ್ ಮೌಲ್ಯದ ಬಾಸ್ಮತಿ, ಮತ್ತು ಇತರೆ ಅಕ್ಕಿಯನ್ನು ರಫ್ತು ಮಾಡಿದೆ, ಇದು 2020-21 ರಲ್ಲಿ 4.8 ಶತಕೋಟಿ ಡಾಲರ್ ನಷ್ಟಿತ್ತು. 2021-22ನೇ ಸಾಲಿನಲ್ಲಿ ಭಾರತ 150 ದೇಶಗಳಿಗೆ ಬಾಸ್ಮತಿ ಅಲ್ಲದ ಅಕ್ಕಿಯನ್ನು ರಫ್ತು ಮಾಡಿದೆ.












Click it and Unblock the Notifications