ನಿರಾಶಾವಾದ ಬಿತ್ತದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ಮೋದಿ
"ಕೆಲವರಿಗೆ ನಿರಾಶಾವಾದವನ್ನು ಹಬ್ಬಲಿಲ್ಲ ಅಂದರೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ನಾವು ಅಂಥ ಜನರನ್ನು ಗುರುತಿಸಬೇಕು" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷಗಳನ್ನು ಲೇವಡಿ ಮಾಡಿದರು.
ದೆಹಲಿಯ ವಿಜ್ಞಾನ ಭವನದಲ್ಲಿ ಇನ್ ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಕಂಪೆನಿ ಕಾರ್ಯದರ್ಶಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಡಿಪಿ ಇದೇ ಮೊದಲ ಬಾರಿಗೆ ಕುಸಿತ ಕಾಣುತ್ತಿರುವುದಲ್ಲ. ಅಭಿವೃದ್ಧಿಯಲ್ಲಿ ಕುಂಠಿತವಾದರೆ ಜನರಿಗೆ ಸಂತೋಷವಾಗುತ್ತದೆ ಎಂದರು.
ಈ ಹಿಂದಿನ ಸರಕಾರದ ಆಡಳಿತಾವಧಿಯಲ್ಲಿ ಆರು ವರ್ಷದಲ್ಲಿ ಎಂಟು ಬಾರಿ ಅಂಥ ಅವಕಾಶ ಇತ್ತು. ಜಿಡಿಪಿ ಬೆಳವಣಿಗೆ 5.7ಕ್ಕಿಂತ ಕೆಳಗೆ ಬಂದಿತ್ತು. ನಾನು ಅರ್ಥಶಾಸ್ತ್ರಜ್ಞ ಅಲ್ಲ, ಆ ರೀತಿ ಹೇಳಿಕೊಂಡಿದ್ದೂ ಇಲ್ಲ ಎಂದು ಅವರು ಹೇಳಿದರು.
ಆರ್ಥಿಕ ಅಭಿವೃದ್ಧಿ ಹೆಚ್ಚಿಸುವುದಕ್ಕೆ, ಬಂಡವಾಳ ಹೂಡಿಕೆ ಹೆಚ್ಚು ಮಾಡುವುದಕ್ಕೆ ಏನೆಲ್ಲ ಮಾಡಬೇಕೋ ಎಲ್ಲವನ್ನೂ ಖಂಡಿತಾ ಮಾಡುತ್ತೇವೆ. ಮೂಉರ್ ವರ್ಷ ಸರಾಸರಿ ಅಭಿವೃದ್ಧಿ ದರ 7.5ರಷ್ಟು ಸಾಧಿಸಿದ ಮೇಲೆ, ನಾವು ಒಪ್ಪಿಕೊಳ್ತೀವಿ ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ ಕುಸಿತವಾಗಿದೆ. ಇದನ್ನು ಸರಿ ದಾರಿಗೆ ತರುವುದಕ್ಕೆ ಸರಕಾರ ಬದ್ಧವಾಗಿದೆ ಎಂದು ಮೋದಿ ಹೇಳಿದರು.

7.7ರಷ್ಟು ಅಭಿವೃದ್ಧಿ
ಮುಂದಿನ ತ್ರೈಮಾಸಿಕಗಳಲ್ಲಿ 7.7ರಷ್ಟು ಅಭಿವೃದ್ಧಿ ಸಾಧಿಸುವ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭವಿಷ್ಯ ನುಡಿದಿದೆ. ವರ್ತಕರು ಎದುರಿಸುತ್ತಿರುವ ಸಮಸ್ಯೆಗಳ ಪರಿಶೀಲನೆ ನಡೆಸುವಂತೆ ಜಿಎಸ್ ಟಿ ಕೌನ್ಸಿಲ್ ಗೆ ಹೇಳಿದ್ದೇನೆ. ಸಲಹೆ- ಸೂಚನೆಗಳ ಆಧಾರದಲ್ಲಿ ಬದಲಾವಣೆಗಳನ್ನು ಮಾಡುತ್ತೇವೆ ಎಂದರು.

ಶೇ ಒಂಬತ್ತಕ್ಕೆ ಇಳಿಕೆ
ಅಪನಗದೀಕರಣದ ನಂತರ ನಗದು ಹಾಗೂ ಜಿಡಿಪಿಯ ಪ್ರಮಾಣ ಶೇ ಒಂಬತ್ತಕ್ಕೆ ಇಳಿಕೆಯಾಗಿದೆ. ಕಳೆದ ವರ್ಷ ನವೆಂಬರ್ ಎಂಟರಂದು ಅದು ಶೇ ಹನ್ನೆರಡರಷ್ಟಿತ್ತು ಎಂದು ಹೇಳಿದರು.

ನಮ್ಮ ಅರ್ಥ ವ್ಯವಸ್ಥೆ ಸದೃಢವಾಗಿದೆ
ನಮ್ಮ ಅರ್ಥ ವ್ಯವಸ್ಥೆ ಸದೃಢವಾಗಿದೆ. ಪ್ರಾಮಾಣಿಕತೆಗೆ ಲಾಭ ಸಿಕ್ಕೇ ಸಿಗುತ್ತದೆ. ವಾಹನಗಳ ಮಾರಾಟ, ವಿಮಾನ ಹಾರಾಟ ಹಾಗೂ ದೂರವಾಣಿ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ನಾನು ನಿಮಗೆ ಖಾತ್ರಿ ನೀಡುತ್ತೇನೆ: ದೇಶವನ್ನು ಹೊಸ ಅಭಿವೃದ್ಧಿ ಪಥದಲ್ಲಿ ನಡೆಸುತ್ತೇವೆ ಎಂದು ಮೋದಿ ಹೇಳಿದರು.

ದುಡಿಮೆಯ ಹಣದ ಬೆಲೆ ಗೊತ್ತಿದೆ
ಅರ್ಥ ವ್ಯವಸ್ಥೆಯನ್ನು ಸರಿ ದಾರಿಯಲ್ಲಿ ನಡೆಸಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧರಿದ್ದೇವೆ. ನಮಗೆ ಜನ ಸಾಮಾನ್ಯರ ದುಡಿಮೆಯ ಹಣದ ಬೆಲೆ ಗೊತ್ತಿದೆ. ಆದ್ದರಿಂದಲೇ ಬಡವರು ಹಾಗೂ ಮಧ್ಯಮ ವರ್ಗದವರ ಜೀವನ ಸುಲಭವಾಗಿಸಲು ನೀತಿಗಳನ್ನು ಹಾಗೂ ಯೋಜನೆಗಳನ್ನು ರೂಪಿಸುತ್ತಿದ್ದೇವೆ ಎಂದರು.

ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ
ಕೈಗೆಟುಕುವ ದರದಲ್ಲಿ ಗೃಹ ಸಾಲ, ಆರ್ಥಿಕ ಸುಧಾರಣೆಗೆ ಸಂಬಂಧಿಸಿದಂತೆ ಮಹತ್ವದ ನೀತಿಗಳನ್ನು ರೂಪಿಸಲಾಗಿದೆ. ಈಗಿನ ಸಮಸ್ಯೆಗಳಿಂದ ದೇಶದ ಭವಿಷ್ಯಕ್ಕೆ ಯಾವ ರೀತಿಯಲ್ಲೂ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.












Click it and Unblock the Notifications