24 ವರ್ಷದವನಿದ್ದಾಗಲೇ ವಿಮಾನ ಹೈಜಾಕ್ ಮಾಡಿದ್ದ ಜೈಷ್ ಕಮಾಂಡರ್ ಅಸ್ಗರ್
ನವದೆಹಲಿ, ಮಾರ್ಚ್ 06 : ಪಾಕಿಸ್ತಾನದ ಪೊಲೀಸರಿಂದ 'ನಿರ್ಬಂಧಿತ' ಬಂಧನಕ್ಕೊಳಲಾಗಿರುವ ಮಫ್ತಿ ಅಬ್ದುಲ್ ರೌಫ್ ಅಸ್ಗರ್ ಅಂತಿಂಥ ವ್ಯಕ್ತಿಯಲ್ಲ. ತನ್ನ 24ನೇ ವಯಸ್ಸಿನಲ್ಲಿಯೇ 1999ರಲ್ಲಿ ಐಸಿ-814 ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಹೈಜಾಕ್ ಮಾಡಿಸಿದ್ದ ಖತರ್ನಾಕ್ ಕ್ರಿಮಿ.
ವಿಮಾನವನ್ನು ಹೈಜಾಕ್ ಮಾಡಿಸಿ, ತನ್ನ ಹಿರಿಯ ಸಹೋದರ, ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖಂಡ ಮೌಲಾನಾ ಮಸೂದ್ ಅಜರ್ ನನ್ನು ಬಿಡಿಸಿಕೊಂಡು ಬಂದಿದ್ದ. ಅಂದಿನಿಂದ ಭಾರತದ ಟಾಪ್ 5 'ಮೋಸ್ಟ್ ವಾಂಟೆಡ್' ಭಯೋತ್ಪಾಕರ ಪಟ್ಟಿಯಲ್ಲಿ ಅಸ್ಗರ್ ಟಾಪ್ ನಲ್ಲಿಯೇ ಇದ್ದಾನೆ.
2001ರ ಜಮ್ಮು ಮತ್ತು ಕಾಶ್ಮೀರದ ವಿಧಾನಸೌಧ ಮತ್ತು ಸಂಸತ್ತಿನ ಮೇಲೆ ನಡೆದ ದಾಳಿ, 2016ರ ಪಠಾಣ್ ಕೋಟ್ ಐಎಎಫ್ ಬೇಸ್ ಮೇಲೆ ನಡೆದ ದಾಳಿ, ನಗರೋಟಾ ಮತ್ತು ಕಥುವಾನಲ್ಲಿ ನಡೆದ ಉಗ್ರರ ದಾಳಿ ಮತ್ತು ಇತ್ತೀಚೆಗೆ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ 40 ಸಿಆರ್‌ಪಿಎಫ್ ಯೋಧರನ್ನು ಹತ್ಯೆ ಮಾಡಿದ್ದರಲ್ಲಿ ಇದೇ ಅಸ್ಗರ್ ಕೈವಾಡವಿದೆ.

ತೀವ್ರ ಅನಾರೋಗ್ಯಕ್ಕೀಡಾಗಿರುವ ಮಸೂದ್ ಅಜರ್ ನ ಅನುಪಸ್ಥಿತಿಯಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆಯ ಎಲ್ಲ ನಿರ್ಧಾರಗಳನ್ನು ಇದೇ ಮಫ್ತಿ ಅಬ್ದುಲ್ ರೌಫ್ ಅಸ್ಗರ್ ನೇ ತೆಗೆದುಕೊಳ್ಳುತ್ತಾನೆ ಎಂದು ಭಾರತದ ಗುಪ್ತದಳ ಮಾಹಿತಿ ನೀಡಿದೆ.
ಹಿಂದೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಹತ್ಯೆಗೆ ಯತ್ನ ನಡೆದ ನಂತರ ಜೈಷ್ ಭೂಗತವಾಗಿತ್ತು. ಆಗ ಅಸ್ಗರ್ ನೇ ಜೈಷ್ ಸಂಘಟನೆಯ ಮುಂದಾಳತ್ವ ವಹಿಸಿಕೊಂಡು, ಅಫಘಾನಿಸ್ತಾನಕ್ಕೆ ಪಯಣಿಸಿ, ತಾಲಿಬಾನ್ ಮುಖಂಡರನ್ನು ಭೇಟಿಯಾಗಿ ಸಂಘಟನೆಯನ್ನು ಬಲಪಡಿಸಿದ್ದ.
ಯಾವುದೇ ಆತ್ಮಾಹುತಿ ದಾಳಿಯಾಗಲಿ, ಸೈನಿಕರ ಮೇಲೆ ನಡೆದ ದಾಳಿಯ ಹೊಣೆಗಾರಿಕೆಯನ್ನು ಹೊತ್ತು ಸೋಷಿಯಲ್ ಮೀಡಿಯಾಗೆ ಬಂದು ಹೇಳಿಕೆ ನೀಡುವುದು ಅಸ್ಗರ್. ಭವಲ್ಪುರ ಮಸೀದಿಯಲ್ಲಿ ಭಾರೀ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುತ್ತ, 2017ರ ಪಠಾಣ್ ಕೋಟ್ ದಾಳಿಯ ನೇತೃತ್ವ ವಹಿಸಿದ್ದು ನಾನೇ ಎಂದು ಘಂಟಾಘೋಷವಾಗಿ ಸಾರಿದ್ದ ವಿಡಿಯೋ ಎಲ್ಲೆಡೆ ಓಡಾಡಿತ್ತು.
ಪಾಕ್ ಆಕ್ರಮಿತ ಕಾಶ್ಮೀರದಲ್ಲಾಗಲಿ, ಪಾಕಿಸ್ತಾನದ ಬಾಲಕೋಟ್ ನಲ್ಲಿ ಸ್ಥಾಪಿಸಲಾಗಿದ್ದ ಉಗ್ರರ ತರಬೇತಿ ತಾಣಗಳನ್ನು ಹುಟ್ಟುಹಾಕಿದ್ದು ಅಸ್ಗರ್. ಜೈಷ್ ಉಗ್ರರಿಗೆ ತರಬೇತಿ ನೀಡುವುದು, ಆತ್ಮಾಹುತಿಗೆ ಉತ್ತೇಜಿಸುವುದು, ಪಾಕಿಸ್ತಾನ ಸರಕಾರ ಮತ್ತು ಐಎಸ್ಐ ಜೊತೆ ಸಂಪರ್ಕ ಸಾಧಿಸುವುದು, ದಾಳಿಗೆ ಮುನ್ನ ಆಡಿಯೋ, ವಿಡಿಯೋ ತಯಾರಿಸುವುದು, ಎಲ್ಲ ಹತ್ಯಾಕಾಂಡಗಳಿಗೆ ಹಣವನ್ನು ಕ್ರೋಢೀಕರಿಸುವುದು ಅಸ್ಗರ್ ಜವಾಬ್ದಾರಿ.
ಈ ಎಲ್ಲ ಕಾರಣಗಳಿಂದಾಗಿಯೇ ಮಸೂದ್ ಅಜರ್ ಹೆಸರಿನ ಜೊತೆ, ಮಫ್ತಿ ಅಬ್ದುಲ್ ರೌಫ್ ಅಸ್ಗರ್ ಹೆಸರನ್ನು ಕೂಡ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಪಟ್ಟಿಯಲ್ಲಿ ಸೇರಿಸಲು ಭಾರತ ಎಲ್ಲ ಪ್ರಯತ್ನಗಳನ್ನು ನಡೆಸಿದೆ.
ಇಂಡಿಯನ್ ಏರ್ ಲೈನ್ಸ್ ವಿಮಾನ ಅಪಹರಣ : 1999ರ ಡಿಸೆಂಬರ್ 24ರಂದು ನೇಪಾಳದ ಕಾಠಮಾಂಡು ಮತ್ತು ದೆಹಲಿ ನಡುವೆ ಹಾರಾಡುವ ಐಸಿ-814 ವಿಮಾನವನ್ನು ಅಪಹರಿಸಿ ಅಫಘಾನಿಸ್ತಾನದ ಕಂದಹಾರ್ ಗೆ ಕೊಂಡೊಯ್ಯಲಾಗಿತ್ತು. ಆಗ ಅಫಘಾನಿಸ್ತಾನ ತಾಲಿಬಾನ್ ನಿಯಂತ್ರಣದಲ್ಲಿತ್ತು. ಏಳು ದಿನಗಳ ಕಾಲ ಉಗ್ರರೊಡನೆ ಮಾತುಕತೆ ನಡೆಸಿದ ನಂತರ ಭಾರತದ ಬಂಧನದಲ್ಲಿದ್ದ ಮುಷ್ತಾಕ್ ಅಹ್ಮದ್ ಜರ್ಗಾರ್, ಅಹ್ಮದ್ ಓಮರ್ ಸಯೀದ್ ಶೇಖ್ ಮತ್ತು ಮೌಲಾನಾ ಮಸೂದ್ ಅಜರ್ ರನ್ನು ಜೈಲಿನಿಂದ ಬಿಟ್ಟ ನಂತರ ವಿಮಾನವನ್ನು ಬಿಡುಗಡೆ ಮಾಡಲಾಗಿತ್ತು.












Click it and Unblock the Notifications