ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಗೆಲುವು: ಮುಖ್ಯಮಂತ್ರಿ ಸ್ಥಾನಕ್ಕೆ ಕೆ.ಚಂದ್ರಶೇಖರ್ ರಾವ್ ರಾಜೀನಾಮೆ
ತೆಲಂಗಾಣ, ಡಿಸೆಂಬರ್ 03: ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಕಾಂಗ್ರೆಸ್ ವಿಜಯ ಸಾಧಿಸಿದೆ. ರಾಜ್ಯದಲ್ಲಿ ಈವರೆಗೆ ಅಧಿಪತ್ಯ ಸಾಧಿಸಿದ್ದ ಬಿಆರ್ಎಸ್ ಕಾಂಗ್ರೆಸ್ ವಿರುದ್ಧ ಸೋಲು ಕಂಡು ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಹೀಗಾಗಿ ವಿಧಾನಸಭೆ ಚುನಾವಣೆಯ ಸ್ಪಷ್ಟ ಬಹುಮತ ತಿಳಿದು ಬರುತ್ತಿದ್ದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಕೆ.ಚಂದ್ರಶೇಖರ್ ರಾವ್ ರಾಜೀನಾಮೆ ನೀಡಿದ್ದಾರೆ.
ಆಂಧ್ರಪ್ರದೇಶದಿಂದ ವಿಭಜನೆಗೊಂಡ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ ತೆಲಂಗಾಣದಲ್ಲಿ ದಿಗ್ವಿಜಯ ಸಾಧಿಸಿದ್ದು, ಸ್ಪಷ್ಟ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧತೆ ನಡೆಸುತ್ತಿದೆ. ಇತ್ತ ತನ್ನ ಕ್ಷೇತ್ರದಲ್ಲೇ ಸೋಲು ಕಂಡಿರುವ ಕೆ.ಚಂದ್ರಶೇಖರ್ ರಾವ್ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕೆ.ಚಂದ್ರಶೇಖರ್ ರಾವ್ ತಮ್ಮ ಆಪ್ತ ಸಿಬ್ಬಂದಿ ಮೂಲಕ ರಾಜೀನಾಮೆ ಪತ್ರವನ್ನು ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರಿಗೆ ಕಳುಹಿಸಿದ್ದಾರೆ. ಬಳಿಕ ತಮ್ಮ ಪಾರ್ಮ್ ಹೌಸ್ಗೆ ತೆರಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಬಿಆರ್ಎಸ್ ಪಕ್ಷಕ್ಕೆ ಭಾರೀ ಹಿನ್ನೆಡೆಯಾಗಿದೆ. ಇದನ್ನೇ ಅಸ್ತ್ರವಾಗಿ ಬಳಿಸಿಕೊಂಡ ಕಾಂಗ್ರೆಸ್ ರಾಜ್ಯದಲ್ಲಿ ತನ್ನ ಅಧಿಪತ್ಯ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಹೀಗಾಗಿ ಜನರ ನಿರ್ಧಾರವನ್ನು ಒಪ್ಪಿಕೊಂಡ ಕೆ.ಚಂದ್ರಶೇಖರ್ ರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಈ ಬಾರಿಯ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕೆ.ಚಂದ್ರಶೇಖರ್ ರಾವ್ ಎರಡು ಕ್ಷೇತ್ರದಿಂದ ಸ್ಪರ್ಧಿಸಿ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಕಂಡಿದ್ದಾರೆ. ಕೆಸಿಆರ್ ಗಜ್ವೆಲ್‌ನಲ್ಲಿ ಗೆದ್ದರೆ, ಕಾಮರೆಡ್ಡಿ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ.












Click it and Unblock the Notifications