Telangana Election: ತೆಲಂಗಾಣದ ಮೇಲೆ ಕರ್ನಾಟಕದ ದಟ್ಟ ಪ್ರಭಾವ- ತೆಲುಗು ನಾಡಿನಲ್ಲಿ ಬೀಡು ಬಿಟ್ಟ ಸಚಿವರು
ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಿದ್ದು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ಗೆ ಹೊಸ ಆತ್ಮವಿಶ್ವಾಸ ಸಿಕ್ಕಂತಾಗಿದೆ. ಸದ್ಯ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೊಸ ಹುರುಪಿನೊಂದಿಗೆ ಸ್ಪರ್ಧಿಸಿದೆ. ನವೆಂಬರ್ 30ರಂದು ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಭರ್ಜರಿಯಾಗಿ ಪ್ರಚಾರ ಮಾಡುತ್ತಿದೆ.
ತೆಲಂಗಾಣದಲ್ಲಿ ಅಧಿಕಾರ ನಡೆಸುತ್ತಿರುವ ಬಿಆರ್‌ಎಸ್ ಪಕ್ಷಕ್ಕೆ ಪೈಪೋಟಿ ಕೊಡಲು ಸ್ಥಳೀಯ ಮಟ್ಟದಲ್ಲಿ ದೊಡ್ಡ ನಾಯಕರ ಕೊರತೆ ಇರುವ ಕಾರಣ, ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಮತದಾರರನ್ನು ಸೆಳೆಯಲು ಕರ್ನಾಟಕದ ಕ್ಯಾಬಿನೆಟ್‌ನ ಮುಕ್ಕಾಲು ಭಾಗದಷ್ಟು ಸಚಿವರನ್ನು ನಿಯೋಜಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಸುಮಾರು 8 ರಿಂದ 10 ಕಾಂಗ್ರೆಸ್ ಸಚಿವರು ತೆಲಂಗಾಣದಲ್ಲಿ ಕಾಂಗ್ರೆಸ್ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಯಾವ ನಾಯಕರು ಪ್ರಚಾರ?
ಎಸ್‌ಟಿ ಕಲ್ಯಾಣ ಮತ್ತು ಕ್ರೀಡಾ ಸಚಿವ ಬಿ ನಾಗೇಂದ್ರ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಉನ್ನತ ಶಿಕ್ಷಣ ಸಚಿವ ಡಿ ಸುಧಾಕರ್ ಕಳೆದ ಒಂದು ವಾರದಿಂದ ತೆಲಂಗಾಣದಲ್ಲಿ ತಂಗಿದ್ದು ಪ್ರಚಾರಕಾರ್ಯದಲ್ಲಿ ತೊಡಗಿದ್ದಾರೆ.
ಭಾನುವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೊಂದಿಗೆ ವಿಶೇಷ ವಿಮಾನದಲ್ಲಿ ಸಿದ್ದರಾಮಯ್ಯ ಕೂಡ ತೆಲಂಗಾಣದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಕಳೆದ ನಾಲ್ಕು ದಿನಗಳಿಂದ ತೆಲಂಗಾಣದಲ್ಲಿದ್ದು, ಕಾಂಗ್ರೆಸ್‌ನ ಕೊನೆಯ ಕ್ಷಣದ ಪ್ರಚಾರವನ್ನು ನೋಡಿಕೊಳ್ಳುತ್ತಿದ್ದಾರೆ. ಸಾರಿಗೆ ಸಚಿವ ಆರ್ ರಾಮಲಿಂಗಾ ರೆಡ್ಡಿ, ಇಂಧನ ಸಚಿವ ಕೆಜೆ ಜಾರ್ಜ್, ಜಮೀರ್ ಖಾನ್, ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಇತರರು ನಿಯಮಿತವಾಗಿ ತೆಲಂಗಾಣಕ್ಕೆ ಭೇಟಿ ನೀಡುತ್ತಿದ್ದಾರೆ.
ಕರ್ನಾಟಕದಲ್ಲಿ ನೀಡಿದ ಐದು ಗ್ಯಾರಂಟಿ ಕಾರ್ಯಕ್ರಮಗಳ ಯಶಸ್ಸನ್ನು ಪ್ರಚಾರ ಮಾಡುವುದು. ತೆಲಂಗಾಣದಲ್ಲಿ ಕರ್ನಾಟಕ ಕಾಂಗ್ರೆಸ್ ಕೆಲಸಗಳ ಪ್ರಚಾರ ಮಾಡುವ ಮೂಲಕ ಮತದಾರರ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕ ಮಾದರಿಯಲ್ಲಿ ಯೋಜನೆಗಳನ್ನು ಜಾರಿ ಮಾಡುವ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ. ಭಾನುವಾರ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಖಾತರಿಗಳು ವಿಫಲವಾಗಿವೆ ಎನ್ನುವ ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರ ಆರೋಪಗಳನ್ನು ತಳ್ಳಿಹಾಕಿದರು.
ಕಾಂಗ್ರೆಸ್ ನೀಡಿದ್ದ ಐದು ಭರವಸೆಗಳಲ್ಲಿ ನಾಲ್ಕನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ, ಐದನೆಯದನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ನಮ್ಮ ಗ್ಯಾರಂಟಿಗಳು ಐದು ವರ್ಷಗಳವರೆಗೆ ಮುಂದುವರಿಯುತ್ತದೆ. ತೆಲಂಗಾಣದಲ್ಲಿಯೂ ಕಾಂಗ್ರೆಸ್ ತನ್ನ ಎಲ್ಲಾ ಆರು ಭರವಸೆಗಳನ್ನು ಜಾರಿಗೊಳಿಸುತ್ತದೆ ಎಂದು ನನಗೆ ಖಚಿತವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯದಲ್ಲಿ ಬರ, ಸಚಿವರ ಪ್ರಚಾರ!
ಕರ್ನಾಟಕದಲ್ಲಿ ಮಳೆ ಕೊರತೆಯಿಂದ ಬರಗಾಲ ಬಂದಿದೆ, ಈಗಾಗಲೇ ಜಾನುವಾರುಗಳಿಗೆ ಮೇವಿನ ಕೊರತೆಯಾಗಿದೆ. ಕುಡಿಯುವ ನೀರಿನ ಸಮಸ್ಯೆಯಿದೆ, ರಾಜ್ಯದಲ್ಲಿ ಇಷ್ಟೆಲ್ಲಾ ಸಮಸ್ಯೆಗಳು ಇದ್ದಾಗ ಸಚಿವರು ಪಕ್ಕದ ರಾಜ್ಯದಲ್ಲಿ ಚುನಾವಣೆಯಲ್ಲಿ ತೊಡಗಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಡಿಸೆಂಬರ್ 3 ರಂದು ಫಲಿತಾಂಶ
ಐದು ರಾಜ್ಯಗಳ ಚುನಾವಣೆಯನ್ನು ಘೋಷಣೆ ಮಾಡಲಾಗಿತ್ತು, ಈಗಾಗಲೇ ಮಿಜೋರಾಂ, ಮಧ್ಯಪ್ರದೇಶ, ಛತ್ತಿಸ್‌ಗಢ ಮತ್ತು ರಾಜಸ್ಥಾನದಲ್ಲಿ ಮತದಾನ ಮುಕ್ತಾಯವಾಗಿದ್ದು, ತೆಲಂಗಾಣದಲ್ಲಿ ನವೆಂಬರ್ 30ರಂದು ಮತದಾನ ನಡೆಯಲಿದೆ. ಐದು ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 3ರಂದು ಪ್ರಕಟವಾಗಲಿದೆ. ಕನಿಷ್ಠ ಮೂರು ರಾಜ್ಯಗಳಲ್ಲಿ ಗೆಲ್ಲುವ ವಿಶ್ವಾಸವನ್ನು ಕಾಂಗ್ರೆಸ್ ಹೊಂದಿದೆ.












Click it and Unblock the Notifications