Telangana Election 2023: ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ತೆಲಂಗಾಣ ಜನ ಸಮಿತಿ- ಕೆಸಿಆರ್‌ಗೆ ಭಾರೀ ಆಘಾತ
ಹೈದರಾಬಾದ್, ಅಕ್ಟೋಬರ್ 30: ಮುಂಬರುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸುವಂತೆ ತೆಲಂಗಾಣ ಜನ ಸಮಿತಿ ಜನರಿಗೆ ಮನವಿ ಮಾಡಿದೆ. ಇದರಿಂದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ಭಾರೀ ಹಿನ್ನೆಡೆ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ.
ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ವಿರುದ್ಧದ ಕಾಂಗ್ರೆಸ್ ಹೋರಾಟಕ್ಕೆ ಬೆಂಬಲ ನೀಡುವಂತೆ ತೆಲಂಗಾಣ ಜನ ಸಮಿತಿಯು ಜನರಿಗೆ ಹೇಳಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಸೋಮವಾರ ಘೋಷಿಸಿದೆ.

ಸೋಮವಾರ ತೆಲಂಗಾಣ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ಅವರನ್ನು ತೆಲಂಗಾಣ ಜನ ಸಮಿತಿ ಅಧ್ಯಕ್ಷ ಎಂ ಕೋದಂಡರಾಮ್ ಭೇಟಿಯಾಗಿದ್ದಾರೆ. ಆ ನಂತರ ಜನ ಸಮಿತಿ ಪಕ್ಷ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ.
ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ. ಆದರೆ, ಆಡಳಿತಾರೂಢ ಬಿಆರ್‌ಎಸ್ ವಿರುದ್ಧ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಕೋದಂಡರಾಮ್ ಘೋಷಿಸಿದ್ದಾರೆ.
ತೆಲಂಗಾಣ ಜನ ಸಮಿತಿಯನ್ನು ಮಾರ್ಚ್ 31, 2018 ರಂದು ಸ್ಥಾಪಿಸಲಾಯಿತು. ಕೋದಂಡರಾಮ್ ಅವರು 2009 ರಿಂದ ಪ್ರತ್ಯೇಕ ತೆಲಂಗಾಣ ರಾಜ್ಯ ಚಳವಳಿಯ ನೇತೃತ್ವ ವಹಿಸಿದ್ದರು. ಸರ್ವಪಕ್ಷ ತೆಲಂಗಾಣ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರೂ ಆಗಿದ್ದರು.

ತೆಲಂಗಾಣದಲ್ಲಿ ನವೆಂಬರ್ 30 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. ಬಿಆರ್‌ಎಸ್, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕುತೂಹಲಕಾರಿ ತ್ರಿಕೋನ ಸ್ಪರ್ಧೆಗೆ ತೆಲಂಗಾಣ ಸಾಕ್ಷಿಯಾಗಲಿದೆ.
2018 ರ ಹಿಂದಿನ ಅಸೆಂಬ್ಲಿ ಚುನಾವಣೆಯಲ್ಲಿ, ರಾಜ್ಯದ ಒಟ್ಟು 119 ಸ್ಥಾನಗಳ ಪೈಕಿ 88 ಸ್ಥಾನಗಳನ್ನು ಬಿಆರ್‌ಎಸ್ ಗೆದ್ದಿತ್ತು. ಒಟ್ಟು ಮತಗಳ ಶೇಕಡಾ 47.4 ರಷ್ಟನ್ನು ಗಳಿಸಿತ್ತು. ಕಾಂಗ್ರೆಸ್ ಕೇವಲ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಶೇ 28.7 ರಷ್ಟು ಮತಗಳನ್ನು ತನ್ನದಾಗಿಸಿಕೊಂಡಿತ್ತು.
ತೆಲಂಗಾಣ ಚುನಾವಣೆಯಿಂದ ದೂರ ಉಳಿದ ಟಿಡಿಪಿ
ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೆಲಂಗಾಣ ತೆಲುಗು ದೇಶಂ ಪಕ್ಷ (ಟಿಟಿಡಿಪಿ) ನಿರ್ಧರಿಸಿದೆ. ಕೌಶಲಾಭಿವೃದ್ಧಿ ಯೋಜನೆಯಲ್ಲಿನ ಅಕ್ರಮಗಳ ಆರೋಪದಲ್ಲಿ ಜೈಲಿನಲ್ಲಿರುವ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಶನಿವಾರ ರಾಜಮಂಡ್ರಿ ಸೆಂಟ್ರಲ್ ಜೈಲಿನಲ್ಲಿ ತಮ್ಮ ಪಕ್ಷದ ಮುಖ್ಯಸ್ಥರನ್ನು ಭೇಟಿ ಮಾಡಿದ ಟಿಡಿಪಿ ತೆಲಂಗಾಣ ಘಟಕದ ಅಧ್ಯಕ್ಷ ಕಸನಿ ಜ್ಞಾನೇಶ್ವರ್ ಅವರಿಗೆ ನಾಯ್ಡು ಅವರೇ ಪಕ್ಷದ ನಿರ್ಧಾರವನ್ನು ತಿಳಿಸಿದ್ದಾರೆ ಎನ್ನಲಾಗಿದೆ.
ಆಂಧ್ರಪ್ರದೇಶದ ಸದ್ಯದ ಪರಿಸ್ಥಿತಿಯಿಂದಾಗಿ ಪಕ್ಷವು ತೆಲಂಗಾಣ ಚುನಾವಣೆಯ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ ಎಂದು ನಾಯ್ಡು ಅವರು ಜ್ಞಾನೇಶ್ವರ್ ಅವರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications