ತೆಲಂಗಾಣದಲ್ಲೂ ಸಿದ್ದು, ಡಿಕೆ ಹವಾ: ಒಬಿಸಿ ಮತ ಸೆಳೆಯಲು ದೊಡ್ಡ ಮಟ್ಟದ ಸನ್ಮಾನ ಸಮಾರಂಭ ಆಯೋಜನೆ
ಹೈದರಾಬಾದ್, ಮೇ 25: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶವು ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಒಬಿಸಿ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ತೆಲಂಗಾಣ ಕಾಂಗ್ರೆಸ್ ಯೋಜನೆ ರೂಪಿಸಿದೆ. ಬಿಜೆಪಿ ಮತ್ತು ಬಿಆರ್‌ಎಸ್‌ಗಳ ನಿರೂಪಣೆಗೆ ಪ್ರತಿಯಾಗಿ ಒಬಿಸಿ ಮತಗಳನ್ನು ಕ್ರೋಢೀಕರಿಸುವ ಗುರಿಯನ್ನು ತೆಲಂಗಾಣ ಕಾಂಗ್ರೆಸ್ ಹೊಂದಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಸಾರ್ವಜನಿಕ ಸಭೆಯಲ್ಲಿ ಸನ್ಮಾನಿಸಲು ತೆಲಂಗಾಣ ಕಾಂಗ್ರೆಸ್ ಮುಂದಾಗಿದೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ಒಬಿಸಿ ಸಮುದಾಯದಿಂದ ಬಂದವರು. ಆ ಕಾರಣ, ಇಬ್ಬರು ನಾಯಕರನ್ನು ತೆಲಂಗಾಣದಲ್ಲಿ ಸನ್ಮಾನಿಸುವ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಕರ್ನಾಟಕದ ಫಲಿತಾಂಶವು ಕಾರ್ಯಕರ್ತರ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ ತೆಲಂಗಾಣ ಕಾಂಗ್ರೆಸ್ ಹೇಳಿದೆ.
ಕರ್ನಾಟಕ ವಿಧಾನಸಭೆಯ ಫಲಿತಾಂಶಗಳು ತೆಲಂಗಾಣ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಬಿಆರ್‌ಎಸ್ ಮತ್ತು ಬಿಜೆಪಿ ಪಕ್ಷಗಳು ಹೇಳಿಕೊಂಡಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆಗೆ, ತೆಲಂಗಾಣ ಕಾಂಗ್ರೆಸ್ ರಾಜ್ಯದ ಮೂಲೆ ಮೂಲೆಯಿಂದ ಜನರನ್ನು ಕರೆತರಲು ನಿರ್ಧರಿಸಿದೆ.
ಲೋಕಸಭೆ ಚುನಾವಣೆಗೆ ಡಿಕೆಶಿ ಬಿಗ್ ಟಾರ್ಗೆಟ್: ಎಷ್ಟು ಸೀಟು?
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಕೈ ಪಾಳಯದಲ್ಲಿ ಭಾರೀ ಉತ್ಸಾಹ ಕಾಣಿಸುತ್ತಿದೆ. ಈಗ ಕಾಂಗ್ರೆಸ್ ಮುಂದಿರುವ ಅತಿ ದೊಡ್ಡ ಸವಾಲೆಂದರೆ, ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆ, ಬಿಬಿಎಂಪಿ ಹಾಗೂ ಸ್ಥಳೀಯ ಚುನಾವಣೆಗಳು. ಇದರಲ್ಲಿಯೂ ತಮ್ಮ ಪಕ್ಷದ ಗೆಲುವಿನ ವೇಗವನ್ನು ಮುಂದುವರಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬಿಗ್ ಟಾರ್ಗೆಟ್ ನೀಡಿದ್ದಾರೆ.
ಬುಧವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶಾಸಕರಿಗೆ ಕೆಲ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡುವಂತೆ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ.

ಕರ್ನಾಟಕದ 28 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಬೇಕು. ಶಾಸಕರೆಲ್ಲರೂ ಈ ಗುರಿಯ ಜೊತೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಬೇಕು ಎಂದು ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಜನತಾ ದಳ (ಜಾತ್ಯತೀತ) 2019 ರ ಲೋಕಸಭಾ ಚುನಾವಣೆಯನ್ನು ಮೈತ್ರಿಯಾಗಿ ಎದುರಿಸಿದ್ದವು. ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಗೆದ್ದು ಹೀನಾಯ ಸೋಲನ್ನು ಅನುಭವಿಸಿತ್ತು. ಬಿಜೆಪಿ 25 ಸ್ಥಾನಗಳನ್ನು ಗೆದ್ದು ಬೀಗಿತ್ತು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರದಲ್ಲಿತ್ತು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಮೋಘ ಪ್ರದರ್ಶನ ನೀಡಿದೆ. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ಕಾಂಗ್ರೆಸ್ ನಾಯಕರಲ್ಲಿ ಉತ್ಸಾಹ ಇಮ್ಮಡಿಯಾಗಿರುವುದು ಕಂಡುಬಂದಿದೆ.

ಜಿಲ್ಲಾ ಮಂತ್ರಿಗಳಾಗಿ ನೇಮಕಗೊಳ್ಳುವವರು ಜಿಲ್ಲೆಗಳಲ್ಲಿ ಕಚೇರಿಗಳನ್ನು ಹೊಂದಿರಬೇಕು ಮತ್ತು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಕಚೇರಿಗಳನ್ನು ಹೊಂದಿರಬೇಕು ಎಂದು ಶಿವಕುಮಾರ್ ಪಕ್ಷದ ಶಾಸಕರಿಗೆ ತಿಳಿಸಿದರು.
ಪಕ್ಷದ ಕಚೇರಿಯೇ ನಮ್ಮ ದೇಗುಲವಾಗಿದ್ದು, ಅದಕ್ಕೆ ಆದ್ಯತೆ ನೀಡಬೇಕು ಎಂದು ಶಿವಕುಮಾರ್ ಒತ್ತಿ ಹೇಳಿದ್ದಾರೆ. ಚುನಾವಣೆಯಲ್ಲಿ ತಮಗಾಗಿ ದುಡಿದ ಪಕ್ಷದ ಕಾರ್ಯಕರ್ತರನ್ನು ಮರೆಯಬಾರದು ಎಂದು ಶಾಸಕರನ್ನು ಕೋರಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಜನರ ಆಶೋತ್ತರಗಳನ್ನು ಈಡೇರಿಸುವ ಉತ್ತಮ ಆಡಳಿತ ನೀಡುವುದು ಸರ್ಕಾರದ ಆದ್ಯತೆಯಾಗಿದ್ದು, ಖಾತರಿ ಸೇರಿದಂತೆ ಸರ್ಕಾರದ ಕಾರ್ಯಕ್ರಮಗಳು ಫಲಾನುಭವಿಗಳಿಗೆ ತಲುಪುವಂತೆ ಎಲ್ಲ ಶಾಸಕರು ನೋಡಿಕೊಳ್ಳಬೇಕು ಎಂದರು.












Click it and Unblock the Notifications