ತೆಲಂಗಾಣ ಬಿಆರ್‌ಎಸ್ ಶಾಸಕರ ಪಕ್ಷಾಂತರ ಪ್ರಕರಣ: ತನಿಖೆ ಸಿಬಿಐಗೆ ವಹಿಸದಂತೆ ಸುಪ್ರೀಂಕೋರ್ಟ್ ಸೂಚನೆ
ಬಿಜೆಪಿಯಿಂದ ತೆಲಂಗಾಣದ ಆಡಳಿತರೂಢ ಬಿಆರ್‌ಎಸ್(ಹಿಂದಿನ ಟಿಆರ್ ಎಸ್) ಶಾಸಕರ ಖರೀದಿ ಪ್ರಕರಣದ ತನಿಖೆಯನ್ನು ಸ್ಥಗಿತಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಸಿಬಿಐಗೆ ಆದೇಶಿಸಿದೆ.
ಹೈದರಾಬಾದ್ ಮಾರ್ಚ್ 14: ತೆಲಂಗಾಣದ ನಾಲ್ವರು ಬಿಆರ್‌ಎಸ್ ಶಾಸಕರ ಪಕ್ಷಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ತನಿಖೆ ಬೇಡ ಎಂದು ಸಿಬಿಐಗೆ ಸುಪ್ರೀಂಕೋರ್ಟ್ ಮೌಖಿಕವಾಗಿ ಸೂಚನೆ ನೀಡಿದೆ. ಹೌದು.. ಬಿಜೆಪಿಯಿಂದ ತೆಲಂಗಾಣದ ಆಡಳಿತರೂಢ ಬಿಆರ್‌ಎಸ್(ಹಿಂದಿನ ಟಿಆರ್ ಎಸ್) ಶಾಸಕರ ಖರೀದಿ ಪ್ರಕರಣದ ತನಿಖೆಯನ್ನು ಸ್ಥಗಿತಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಸಿಬಿಐಗೆ ಆದೇಶಿಸಿದೆ.
ಪ್ರಕರಣವನ್ನು ಸಿಬಿಐಗೆ ವಹಿಸಿದ ಹೈಕೋರ್ಟ್ ಆದೇಶದ ವಿರುದ್ಧ ತೆಲಂಗಾಣ ಪೊಲೀಸರು ಸಲ್ಲಿಸಿದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಂ.ಎಂ. ಸುಂದರೇಶ್ ಅವರು, ಸಿಬಿಐ ಈ ಪ್ರಕರಣದ ತನಿಖೆ ಮುಂದುವರಿಸಬಾರದು ಎಂದು ಹೇಳಿ, ವಿಚಾರಣೆಯನ್ನು ಜುಲೈಗೆ ಮುಂದೂಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಹೆಸರು ಕೇಳಿ ಬಂದಿದ್ದ ತೆಲಂಗಾಣ ಶಾಸಕರ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿರುವ ಮೇಲ್ಮನವಿಯ ವಿಚಾರಣೆ ಬಾಕಿ ಇರುವುದರಿಂದ ಪ್ರಕರಣದ ತನಿಖೆಯಿಂದ ದೂರ ಇರುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಹೈಕೋರ್ಟ್ ಏಕ ಸದಸ್ಯ ಪೀಠ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ಬೇರಾರೂ ಇಲ್ಲದೆ ಸ್ವತ: ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಆರೋಪಿಗಳನ್ನು ಸಾರ್ವಜನಿಕವಾಗಿ ಖಂಡಿಸಿ ಸಂಚುಕೋರರು ಎಂದು ಹಣೆಪಟ್ಟಿ ಹಚ್ಚಿದ್ದಾರೆ. ಈ ಘಟನೆಗಳು ಎಸ್‌ಐಟಿ ತನಿಖೆಯ ನ್ಯಾಯಸಮ್ಮತತೆಯನ್ನು ಪ್ರಶ್ನಿಸುತ್ತವೆ ಎಂದು ಹೈಕೋರ್ಟ್ ಆಗ ನುಡಿದಿತ್ತು.

ಪಕ್ಷಾಂತರ ಮಾಡುವ ಸಲುವಾಗಿ ಆಡಳಿತಾರೂಢ ಬಿಆರ್ಎಸ್ ಪಕ್ಷದ ಶಾಸಕರನ್ನು ಬಿಜೆಪಿ ಸಂಪರ್ಕಿಸಿತ್ತು ಎಂಬ ವಿಚಾರ ನ್ಯಾಯಾಲಯದ ಕಟಕಟೆ ಏರಿತ್ತು.
ತೆಲಂಗಾಣ ಪೊಲೀಸರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ, ತನಿಖೆಯನ್ನು ಸಿಬಿಐಗೆ ವಹಿಸಿರುವುದನ್ನು ತೀವ್ರವಾಗಿ ವಿರೋಧಿಸಿದರು. ಪ್ರಕರಣದ ಸಾಮಾಗ್ರಿಗಳನ್ನು ಇದುವರೆಗೆ ಕೇಂದ್ರ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಲಾಯಿತು. ಬಳಿಕ ಪ್ರಕರಣ ನ್ಯಾಯಾಲಯದಲ್ಲಿರುವಾಗ ಸಿಬಿಐ ತನಿಖೆ ಮುಂದುವರಿಸಬಾರದು ಎಂದು ಸ್ಪಷ್ಟವಾಗಿ ಹೇಳುತ್ತಿರುವುದಾಗಿ ಸುಪ್ರೀಂ ಪೀಠ ತಿಳಿಸಿದೆ.

ಕೇಂದ್ರದ ಹಿಡಿತದಲ್ಲಿದೆ ಎನ್ನಲಾದ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದರೆ ಆಗುವ ಪರಿಣಾಮ ಗಂಭೀರವಾಗಲಿದೆ ಎಂದು ದವೆ ಈ ಹಿಂದೆ ವಾದಿಸಿದ್ದರು. ತೆಲಂಗಾಣ ಹೈಕೋರ್ಟ್‌ನ ವಿಭಾಗೀಯ ಪೀಠವು ಫೆಬ್ರವರಿ 6 ರಂದು ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು.
ಏನಿದು ಬಿಆರ್‌ಎಸ್ ಶಾಸಕರ ಪಕ್ಷಾಂತರ ಪ್ರಕರಣ?
''ಅ. 26ರಂದು ನಾಲ್ವರು ಟಿಆರ್‌ಎಸ್ ಶಾಸಕರ ಖರೀದಿಗೆ ಬಿಜೆಪಿ ಯತ್ನಿಸಿತ್ತು. ಶಾಸಕರಿಗೆ 50 ಕೋಟಿ ರೂ. ಆಮೀಷ ನೀಡಲಾಗಿತ್ತು. ಬಿಜೆಪಿ ಸಂಪರ್ಕದಲ್ಲಿದ್ದ ವ್ಯಕ್ತಿಗಳು ಡೀಲ್ ಕುದುರಿಸಲು ಬಂದಿದ್ದರು,'' ಎಂದು ಟಿಆರ್‌ಎಸ್ ಶಾಸಕರು ಆರೋಪಿಸಿದ್ದರು.ಟಿಆರ್‌ಎಸ್ (ಈಗ ಬಿಆರ್‌ಎಸ್) ಪಕ್ಷದ ನಾಲ್ವರು ಶಾಸಕರಿಗೆ ಹಣದ ಆಮಿಷವೊಡ್ಡಿದ ಆರೋಪದಲ್ಲಿ ಕಳೆದ ತಿಂಗಳು ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ಅವರು ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಫಾರ್ಮ್‌ಹೌಸ್ ಒಂದರಲ್ಲಿ ಟಿಆರ್‌ಎಸ್ ಶಾಸಕರಿಗೆ 100 ಕೋಟಿ ರೂ ಆಫರ್ ನೀಡುವ ವೇಳೆ ಸಿಕ್ಕಿಬಿದ್ದಿದ್ದಾಗಿ ಆರೋಪಿಸಲಾಗಿದೆ.












Click it and Unblock the Notifications