ಡಿಸಿಎಂ ಬಿಗ್ ಆಪರೇಷನ್; ಕುತೂಹಲ ಮೂಡಿಸಿದ ಡಿ ಕೆ ಶಿವಕುಮಾರ್-ಬಿಜೆಪಿ ನಾಯಕಿ ತೇಜಸ್ವಿನಿ ಅನಂತಕುಮಾರ್ ಭೇಟಿ
ಬೆಂಗಳೂರು, ಸೆಪ್ಟೆಂಬರ್ 04: ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ನ ಆಪರೇಷನ್ ಹಸ್ತ ದ ಬಗ್ಗೆ ಬಿರುಸಿನ ಚರ್ಚೆ ನಡೆಯುತ್ತಿರುವುದರ ನಡುವೆಯೇ ಮಾಜಿ ಕೇಂದ್ರ ಸಚಿವ ಅನಂತ ಕುಮಾರ್ ರವರ ಪತ್ನಿ ತೇಜಸ್ವಿನಿ ಅನಂತ ಕುಮಾರ್ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಹೌದು, ಸೋಮವಾರ ಕುಮಾರ ಕೃಪಾದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನ ಭೇಟಿಯಾದ ಬೆನ್ನಲ್ಲೇ ಬಿಜೆಪಿ ನಾಯಕಿ ತೇಜಸ್ವಿನಿ ಅನಂತಕುಮಾರ್ ಕಾಂಗ್ರೆಸ್ ಸೇರುತ್ತಾರಾ? ಎನ್ನುವ ಚರ್ಚೆ ಮತ್ತೆ ಮುನ್ನಲ್ಲೇ ಬಂದಿದೆ. ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೊಟ್ಟ ಟಾರ್ಗೆಟ್ ನಂತೆ ಹೆಚ್ಚು ಸ್ಥಾನಗಳನ್ನ ಗೆಲ್ಲುವ ಪ್ಲಾನ್ ಮಾಡಿರುವ ರಾಜ್ಯ ಕಾಂಗ್ರೆಸ್ ನಾಯಕರು ಆಪರೇಷನ್ ಹಸ್ತಕ್ಕೆ ಭರ್ಜರಿ ಪ್ಲಾನ್ ಮಾಡಿದ್ದಾರೆ.

ಇನ್ನೂ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಹಿನ್ನಲೆ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಭಾಗದಲ್ಲಿ ಕನಿಷ್ಠ ಎರಡು ಕ್ಷೇತ್ರಗಳನ್ನ ಗೆಲ್ಲುವ ಮಾಸ್ಟರ್ ಪ್ಲಾನ್ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಾಜಿ ಕೇಂದ್ರ ಸಚಿವ ಅನಂತ ಕುಮಾರ್ ರವರ ಪತ್ನಿ ತೇಜಸ್ವಿನಿ ಅನಂತ ಕುಮಾರ್ ಅವರನ್ನ ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಮೂಲಕ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಕಣಕ್ಕಿಳಿಸುವ ಚಿಂತನೆಯನ್ನ ಕಾಂಗ್ರೆಸ್ ನಾಯಕರು ಹಾಕಿಕೊಂಡಿದ್ದಾರೆ ಎನ್ನಲಾಗಿದ್ದು, ಡಿಕೆ ಶಿವಕುಮಾರ್ ಅವರನ್ನ ಸೋಮವಾರ ತೇಜಸ್ವಿನಿ ಅನಂತಕುಮಾರ್ ಭೇಟಿ ಮಾಡಿರುವುದು ಮತ್ತೆ ತೆರೆಯ ಮುಂದೆ ಬಂದಿವೆ.
ಈಗಾಗಲೇ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ದಿವಂಗತ ಮಾಜಿ ಕೇಂದ್ರ ಸಚಿವ ಅನಂತ ಕುಮಾರ್ ಹಾಗೂ ತೇಜಸ್ವಿನಿ ಅನಂತಕುಮಾರ್ ಅವರ ವರ್ಚಸ್ಸು ಹೆಚ್ಚಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಅವರನ್ನ ಕರೆತರುವ ಮೂಲಕ ಹಾಲಿ ಸಂಸದ ತೇಜಸ್ವಿ ಸೂರ್ಯ ವಿರುದ್ದ ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ಪ್ಲಾನ್ ನಡೆಸಿದ್ದಾರೆ ಎನ್ನಲಾಗಿದೆ. ಇನ್ನೂ ಬ್ರ್ಯಾಂಡ್ ಬೆಂಗಳೂರು ಕನಸು ಕಾಣುತ್ತಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬೆಂಗಳೂರಿನ 4 ಸ್ಥಾನಗಳಲ್ಲಿ ಕನಿಷ್ಠ 2 ಗೆಲ್ಲುವ ಗುರಿ ಹೊಂದಿದ್ದಾರೆ. ತೇಜಸ್ವಿನಿ ಅನಂತಕುಮಾರ್ ಬಂದರೆ ಬ್ರಾಹ್ಮಣ, ಒಕ್ಕಲಿಗ, ಕಾಂಗ್ರೆಸ್ ಮತಗಳಿಂದ ಗೆಲುವು ಸುಲಭ ಎಂಬುವುದು ಡಿಕೆ ಶಿವಕುಮಾರ್ ಅವರ ಲೆಕ್ಕಾಚಾರವಾಗಿದೆ.
ಈ ಹಿಂದೆಯೂ ತೇಜಸ್ವಿನಿ ಅನಂತಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎನ್ನುವ ಚರ್ಚೆ ಮುನ್ನಲ್ಲೇ ಗೆ ಬಂದ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಒಲೈಕೆಗೆ ಮುಂದಾಗಿ ಐಐಇಎಸ್‌ಟಿ ಬೋರ್ಡ್ ಆಫ್ ಗವರ್ನರ್ಸ್ ಅಧ್ಯಕ್ಷೆ ಸ್ಥಾನವನ್ನು ನೀಡಿತ್ತು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರನ್ನ ಸಹ ತೇಜಸ್ವಿನಿ ಅನಂತಕುಮಾರ್ ಭೇಟಿಯಾಗಿ ರಾಜಕೀಯ ವಿಚಾರಗಳ ಕುರಿತು ಚರ್ಚಿಸಿದ್ದರು. ತೇಜಸ್ವಿನಿ ಅನಂತಕುಮಾರ್ ಪಕ್ಷ ತೊರೆಯದಂತೆ ತಡೆಯಲು ಬಿಜೆಪಿ ಹೈಕಮಾಂಡ್ ಮುಂದಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆ ತೇಜಸ್ವಿನಿ ಅನಂತಕುಮಾರ್ ಇಂದು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಡಿ ಕೆ ಶಿವಕುಮಾರ್ ಟ್ವೀಟ್ ಮೂಲಕ ಹೇಳಿದ್ದೇನು?
ಬಿಜೆಪಿಯ ಹಿರಿಯ ನಾಯಕರಾಗಿದ್ದ ದಿ.ಅನಂತ್ ಕುಮಾರ್ ಅವರ ಪತ್ನಿ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಇಂದು ನನ್ನನ್ನು ಕುಮಾರ ಕೃಪಾ ಅತಿಥಿ ಗೃಹದಲ್ಲಿ ಭೇಟಿಯಾಗಿ ರಾಜ್ಯ ರಾಜಕೀಯ ವಿಚಾರಗಳ ಕುರಿತು ಚರ್ಚಿಸಿದರು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.












Click it and Unblock the Notifications