Bihar Assembly Election 2025: ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿಯಾಗಿ ಘೋಷಣೆ, ಎಲೆಕ್ಷನ್ ಅಪ್ಡೇಟ್ಸ್
ನವದೆಹಲಿ, ಅಕ್ಟೋಬರ್ 23: ಬಿಹಾರ ವಿಧಾನಸಭಾ ಚುನಾವಣೆ ಕಾವು ಹೆಚ್ಚಾಗಿದೆ. ವಾರಗಳ ಕಾಲ ನಡೆದ ಚರ್ಚೆ ಮತ್ತು ವಾಗ್ವಾದಗಳಿಗೆ ತೆರೆ ಬಿದ್ದಿದೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಬಿಹಾರ ಚುನಾವಣೆಯ ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಿಸಲಾಗಿದೆ. ಇಂದಿನ ಸುದ್ದಿಗೋಷ್ಠಿಯಲ್ಲಿ ಮಹತ್ವದ ನಿರ್ಧಾರ ಪ್ರಕಟವಾಗಿದ್ದು, ವಿರೋಧ ಪಕ್ಷಗಳ ಬಲಪ್ರದರ್ಶನಕ್ಕೂ ವೇದಿಕೆ ಸೃಷ್ಟಿಯಾಗಿದೆ.
ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಅವರು ಮಾತನಾಡಿ, ಎಲ್ಲಾ ಪಕ್ಷಗಳ ಹಿರಿಯ ನಾಯಕರೊಂದಿಗೆ ಚರ್ಚಿಸಿ ತೇಜಸ್ವಿ ಯಾದವ್ ಅವರನ್ನು ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಮಾಡಲಾಗಿದೆ. ಸಿಎಂ ಅಭ್ಯರ್ಥಿಗೆ ದೀರ್ಘ ರಾಜಕೀಯ ಭವಿಷ್ಯ ಇದೆ.

ವಿಕಾಸಶೀಲ್ ಇನ್ಸಾನ್ ಪಕ್ಷದ (ವಿಐಪಿ) ಮುಖ್ಯಸ್ಥ ಮುಖೇಶ್ ಸಹಾನಿ, ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ನಿಶಾದ್ ಸಮುದಾಯದಲ್ಲಿ ಸಹಾನಿಯವರಿಗೆ ಉತ್ತಮ ಪ್ರಭಾವ ಇದೆ. ಬಿಹಾರದಲ್ಲಿ ಭಾರತ ಬಣ ಅಧಿಕಾರಕ್ಕೆ ಬಂದರೆ ಮತ್ತೊಬ್ಬ ಹಿಂದುಳಿದ ವರ್ಗದ ನಾಯಕರಿಗೂ ಉಪಮುಖ್ಯಮಂತ್ರಿಯ ಸ್ಥಾನ ನೀಡಲಾಗುವುದು ಎಂದು ಗೆಹ್ಲೋಟ್ ಮಾಹಿತಿ ನೀಡಿದರು.
ಚುನಾವಣೆ ಎರಡು ವಾರ ಮಾತ್ರವೇ ಬಾಕಿ ಇದೆ. ಹೀಗಿದ್ದಾಗಲೇ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಲಾಗಿದೆ. ಮೈತ್ರಿಕೂಟದ ಪಕ್ಷಗಳಿಗೆ ಒಗ್ಗಟ್ಟಿನಿಂದ ಪ್ರಚಾರ ಆರಂಭಿಸಲು ಸಮಯ ಕಡಿಮೆ ಇದೆ. ಬಿಹಾರ ವಿಧಾನಸಭೆ ಚುನಾವಣೆಗಳು ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ನಡೆಯಲಿದೆ. ನವೆಂಬರ್ 14ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.
ಪೋಸ್ಟರ್ ವಿವಾದ: ರಾಜಕೀಯ ಅಸ್ತ್ರ
ಇಂದಿನ ಆರ್‌ಜೆಡಿ ಸುದ್ದಿಗೋಷ್ಠಿ ವಿವಾದಕ್ಕೂ ಕಾರಣವಾಯಿತು. ಸ್ಥಳದಲ್ಲಿದ್ದ ಪೋಸ್ಟರ್‌ಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಚಿತ್ರ ಕಾಣೆಯಾಗಿದೆ. ಇದೇ ವಿಚಾರವನ್ನು ಬಿಜೆಪಿ ಇದನ್ನು ಕಾಂಗ್ರೆಸ್ ವಿರುದ್ಧ ಟೀಕೆಗೆ ಅಸ್ತ್ರವಾಗಿ ಬಳಸಿಕೊಂಡಿತು. ಬಿಹಾರದಲ್ಲಿ ಎನ್‌ಡಿಎಯ ಮುಖ ನಿತೀಶ್ ಕುಮಾರ್ ಆಗಿದ್ದರು, ಆಗಿದ್ದಾರೆ ಮತ್ತು ಮುಂದೆಯೂ ಆಗಿರುತ್ತಾರೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅಭಿಪ್ರಾಯ ಹೊರ ಹಾಕಿದರು.
ಮೈತ್ರಿಕೂಟದ ಸೀಟು ಹಂಚಿಕೆ ಬಗ್ಗೆ ಸ್ಪಷ್ಟತೆ ಇಲ್ಲ. ಸುಮಾರು 10 ಸ್ಥಾನಗಳಲ್ಲಿ ಅಭ್ಯರ್ಥಿಗಳ ಪೈಪೋಟಿ ನಡೆದಿದೆ. ಆರ್‌ಜೆಡಿ 143 ಸ್ಥಾನಗಳಲ್ಲಿ, ಕಾಂಗ್ರೆಸ್ 61 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಉಳಿದ ಸ್ಥಾನಗಳನ್ನು ಸಿಪಿಐ(ಎಂಎಲ್), ವಿಐಪಿ ಮತ್ತು ಇತರ ಸಣ್ಣ ಪಕ್ಷಗಳಿಗೆ ಹಂಚಲಾಗಿದೆ.












Click it and Unblock the Notifications