ಕಾವೇರಿ ನೀರಿಗಾಗಿ ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗಲಿರುವ ತಮಿಳುನಾಡು- ವಿವಾದ ಭುಗಿಲೇಳುವ ಸಾಧ್ಯತೆ
ಚೆನ್ನೈ, ಆಗಸ್ಟ್ 12: ಕಾವೇರಿ ನದಿಯ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಶುಕ್ರವಾರ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ. ಗಡಿಭಾಗದ ಜಲಾನಯನ ಪ್ರದೇಶವಾದ ಬಿಳಿಗುಂಡ್ಲುವಿಗೆ 10,000 ಕ್ಯೂಸೆಕ್ ನೀರು ಬೀಡುವಂತೆ ಕಾವೇರಿ ಪ್ರಾಧಿಕಾರ ಕರ್ನಾಟಕಕ್ಕೆ ಸೂಚಿಸಿದೆ.
ಈ ವಿಚಾರವಾಗಿ ಎರಡೂ ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡ ಸಭೆಯನ್ನು ನವದೆಹಲಿಯಲ್ಲಿ ಕಾವೇರಿ ಪ್ರಾಧಿಕಾರ ನಿನ್ನೆ ನಡೆಸಿದೆ. ಆದರೆ, ಚರ್ಚೆ ವೇಳೆ ತಮಿಳುನಾಡು ಸರ್ಕಾರವನ್ನು ಪ್ರತಿನಿಧಿಸುವ ಅಧಿಕಾರಿಗಳು ಹೊರನಡೆದಿದ್ದಾರೆ ಎಂದು ವರದಿಯಾಗಿದೆ.

ಬಿಡುಗಡೆ ಮಾಡಬೇಕಿರುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಕರ್ನಾಟಕ ಸರ್ಕಾರ ಒತ್ತಡ ಹೇರಿದೆ. ಇದನ್ನು ವಿರೋಧಿಸಿ ತಮಿಳುನಾಡು ಪ್ರತಿನಿಧಿಗಳು ಪ್ರತಿಭಟನೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ನಿನ್ನೆ ತಡರಾತ್ರಿ ಹೇಳಿಕೆ ನೀಡಿರುವ ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈಮುರುಗನ್, ಗುರುವಾರ ಸಭೆ ನಡೆಸಿದ ಕಾವೇರಿ ನೀರು ನಿಯಂತ್ರಣ ಸಮಿತಿಯು 15 ದಿನಗಳ ಕಾಲ 15,000 ಕ್ಯೂಸೆಕ್ ಬಿಡುಗಡೆ ಮಾಡಲು ನಿರ್ಧರಿಸಿದೆ. ಆದರೆ, ಕರ್ನಾಟಕ ಸರ್ಕಾರವು ಪ್ರಾಧಿಕಾರದ ಸಭೆಯಲ್ಲಿ ತನ್ನ ನಿಲುವನ್ನು ಬದಲಾಯಿಸಿದೆ ಎಂದು ಆರೋಪಿಸಿದ್ದಾರೆ.

ಆಗಸ್ಟ್ 22 ರ ವರೆಗೆ ತಮಿಳುನಾಡಿಗೆ ಕೇವಲ 8,000 ಕ್ಯೂಸೆಕ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗುವುದು ಎಂದು ಶುಕ್ರವಾರ ಕರ್ನಾಟಕ ಸರ್ಕಾರ ಸ್ಪಷ್ಟವಾಗಿ ಹೇಳಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಜಲಾಶಯಗಳು ಒಟ್ಟು 114.5 ಟಿಎಂಸಿಎಫ್‌ಟಿ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಈಗ ಶೇ 82 ರಷ್ಟು ಸಂಯೋಜಿತ ಸಂಗ್ರಹವನ್ನು ಜಲಾಶಯಗಳು ಹೊಂದಿವೆ ಎಂದು ದುರೈಮುರುಗನ್ ಹೇಳಿದ್ದಾರೆ.

'ಕರ್ನಾಟಕಕ್ಕೆ ನೀರಿನ ಕೊರತೆ ಇಲ್ಲ. ಆದರೆ ತಮಿಳುನಾಡಿಗೆ ನೀರು ಬಿಡಲು ಮನಸ್ಸು ಇಲ್ಲ. ಸುಪ್ರೀಂ ಕೋರ್ಟ್‌ಗೆ ಹೋಗುವುದನ್ನು ಬಿಟ್ಟು ತಮಿಳುನಾಡಿಗೆ ಬೇರೆ ದಾರಿಯಿಲ್ಲ. ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ನೀರು ಪಡೆಯಲು ಸರ್ಕಾರ ತೀರ್ಮಾನಿಸಿದೆ' ಎಂದು ತಮಿಳುನಾಡು ಸಚಿವರು ತಿಳಿಸಿದ್ದಾರೆ.
ಕರ್ನಾಟಕವು ಸುಪ್ರೀಂ ಕೋರ್ಟ್ ಆದೇಶ ಮತ್ತು ಸಿಡಬ್ಲ್ಯೂಎಂಎ ನಿರ್ದೇಶನಗಳನ್ನು ಗೌರವಿಸುತ್ತಿಲ್ಲ ಎಂಬ ತಮಿಳುನಾಡು ಸರ್ಕಾರದ ಆರೋಪದ ಹಿನ್ನೆಲೆಯಲ್ಲಿ ಸಭೆ ನಡೆದಿದೆ.
ಮುಂದಿನ 15 ದಿನಗಳವರೆಗೆ ಬಿಳಿಗುಂಡ್ಲುವಿಗೆ 10,000 ಕ್ಯೂಸೆಕ್ ನೀರು ಬಿಡಬೇಕೆಂದು ನಾವು ಸಭೆಯಲ್ಲಿ ನಿರ್ಧರಿಸಿದ್ದೇವೆ. ಜಲಾಶಯಗಳಿಂದ ನೀರು ಬಿಡುಗಡೆಯ ಪ್ರಮಾಣವು ಹೆಚ್ಚು ಇರಲಿದೆ ಎಂದು ಸಿಡಬ್ಲ್ಯುಎಂಎ ಅಧ್ಯಕ್ಷ ಸೌಮಿತ್ರ ಕುಮಾರ್ ಹಲ್ದಾರ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.












Click it and Unblock the Notifications