ಕರ್ನಾಟಕಕ್ಕೆ ಮೇಕೆದಾಟು ಅಣೆಕಟ್ಟು ಕಟ್ಟಲು ತಮಿಳುನಾಡು ಎಂದಿಗೂ ಅವಕಾಶ ನೀಡುವುದಿಲ್ಲ: ಸಚಿವ ದೊರೈ ಮುರುಗನ್
ಚೆನ್ನೈ, ಜುಲೈ. 03: ಮೇಕೆದಾಟು ಪ್ರದೇಶದಲ್ಲಿ ಕಾವೇರಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಕರ್ನಾಟಕ ಸರ್ಕಾರಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಸೋಮವಾರ ಹೇಳಿದ್ದಾರೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಪಕ್ಷಗಳು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ವಿರುದ್ಧ ವಾಗ್ಧಾಳಿ ನಡೆಸಿದ ನಂತರ ಅವರ ಹೇಳಿಕೆ ಹೊರಬಿದ್ದಿದೆ.
"ಅವರು ಏನು ಬೇಕಾದರೂ ಹೇಳಬಹುದು. ಅಣೆಕಟ್ಟು ಕಟ್ಟುತ್ತೇವೆ ಎಂದು ಹೇಳುತ್ತಾರೆ. ಯಾರೂ ತಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ. ಇವೆಲ್ಲ ಕೇವಲ ರಾಜಕೀಯ ಮಾತುಗಳು. ನಾವು ಅದನ್ನು ಎಂದಿಗೂ ಅನುಮತಿಸುವುದಿಲ್ಲ ಮತ್ತು ಕಾನೂನಾತ್ಮಕವಾಗಿ ಅದನ್ನು ಮಾಡಲಾಗುವುದಿಲ್ಲ. ಇವು ಕೇವಲ ರಾಜಕೀಯ ಸ್ಟಂಟ್‌ಗಳು" ಎಂದು ಡಿಎಂಕೆ ನಾಯಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಉಪಮುಖ್ಯಮಂತ್ರಿ ಅವರು ಕೇಂದ್ರ ಜಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಜಲಾಶಯ ನಿರ್ಮಾಣಕ್ಕೆ ಬೇಕಾದ ಅನುಮತಿಗಳ ಕುರಿತು ಚರ್ಚಿಸಿದ್ದಾರೆ ಎಂದು ಮಾಧ್ಯಮಗಳ ಮೂಲಕ ತಿಳಿದಿದ್ದೇನೆ ಎಂದು ಸಚಿವ ದೊರೈ ಮುರುಗನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ಯೋಜನೆಯು ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯ ಸಮಯದಲ್ಲಿ ಅದನ್ನು ಎಂದಿಗೂ ಅನುಮತಿಸಬಾರದು ಎಂದು ಒತ್ತಿ ಹೇಳಿದ್ದಾರೆ. ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚಿಸಲು ಶೀಘ್ರದಲ್ಲೇ ದೆಹಲಿಗೆ ಭೇಟಿ ನೀಡುವುದಾಗಿ ಸಚಿವರು ತಿಳಿಸಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಈ ವಿಷಯವನ್ನು ಚರ್ಚಿಸುವುದನ್ನು ಸರ್ಕಾರ ವಿರೋಧಿಸಿದೆ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಬಂದಾಗಲೆಲ್ಲಾ ಸರ್ಕಾರವು ಅಣೆಕಟ್ಟಿನ ಬಗೆಗಿನ ಕರ್ನಾಟಕ ಸರ್ಕಾರದ ವಾದಗಳನ್ನು ಕೆಡವುತ್ತದೆ ಎಂದು ಸಚಿವ ದೊರೈ ಮುರುಗನ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಬೆನ್ನಲ್ಲೇ ಡಿಕೆ ಶಿವಕುಮಾರ್ ಮೇಕೆದಾಟು ಸಮಸ್ಯೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಲ್ಲದೆ ಕೇಂದ್ರ ಸಚಿವರಿಗೂ ಪತ್ರ ಬರೆದಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಆರೋಪಿಸಿದ್ದಾರೆ.
ಶಿವಕುಮಾರ್ ಅವರು ಮೇ ತಿಂಗಳಲ್ಲಿ ಅಣೆಕಟ್ಟಿನ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದಾಗ ನಾನು ಅದನ್ನು ಬಲವಾಗಿ ಖಂಡಿಸಿದ್ದೆ. ಕೈಗೊಂಬೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಆಗ ತಕ್ಕ ಉತ್ತರ ನೀಡಿದ್ದರೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ ಎಂದು ಎಐಎಡಿಎಂಕೆ ಮುಖ್ಯಸ್ಥರು ಭಾನುವಾರ ಆರೋಪಿಸಿದ್ದಾರೆ.
ಡಿಕೆ ಶಿವಕುಮಾರ್ ಸೌಹಾರ್ದತೆಯಿಂದ ಬದುಕುತ್ತಿರುವ ತಮಿಳುನಾಡು ಮತ್ತು ಕರ್ನಾಟಕದ ಜನರ ನಡುವೆ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಪಳನಿಸ್ವಾಮಿ, ಡಿಎಂಕೆ ನೇತೃತ್ವದ ಒಕ್ಕೂಟದ 38 ಲೋಕಸಭಾ ಸಂಸದರೊಂದಿಗೆ ದೆಹಲಿಗೆ ಆಗಮಿಸಿ ಕರ್ನಾಟಕ ಅಣೆಕಟ್ಟು ಕಟ್ಟುವ ಬಗ್ಗೆ ಮುಂದುವರಿಯದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಸ್ಟಾಲಿನ್ ಅವರನ್ನು ಒತ್ತಾಯಿಸಿದ್ದರು.
ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ವಿರೋಧ ಪಕ್ಷದ ಸಭೆಯಲ್ಲಿ ಎಂಕೆ ಸ್ಟಾಲಿನ್ ಭಾಗವಹಿಸಿದರೆ ರಾಜ್ಯದ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ. ಸ್ಟಾಲಿನ್ ಬೆಂಗಳೂರಿನಿಂದ ಹಿಂತಿರುಗಿದ ನಂತರ ಬಿಜೆಪಿ ರಾಜ್ಯಾದ್ಯಂತ "ಗೋ ಬ್ಯಾಕ್ ಸ್ಟಾಲಿನ್" ಪ್ರತಿಭಟನೆ ನಡೆಸಲಿದೆ. ಕೆಳ ನದಿ ತೀರದ ರಾಜ್ಯಗಳ ಒಪ್ಪಿಗೆಯಿಲ್ಲದೆ ಅಣೆಕಟ್ಟು ಯೋಜನೆಯನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂಬ ಕೇಂದ್ರ ಸರ್ಕಾರದ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.
ಮೇಕೆದಾಟು ಕರ್ನಾಟಕವು ಪ್ರಸ್ತಾಪಿಸಿರುವ ಬಹುಪಯೋಗಿ ಕುಡಿಯುವ ನೀರು ಮತ್ತು ವಿದ್ಯುತ್ ಯೋಜನೆಯಾಗಿದೆ. ಇದು ರಾಜ್ಯದ ರಾಮನಗರ ಜಿಲ್ಲೆಯ ಕನಕಪುರ ಬಳಿ ಜಲಾಶಯವನ್ನು ನಿರ್ಮಿಸುವುದನ್ನು ಒಳಗೊಂಡಿರುತ್ತದೆ. ಅಂದಾಜು 9,000 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು ಬೆಂಗಳೂರು ಮತ್ತು ನೆರೆಯ ಪ್ರದೇಶಗಳಿಗೆ ಕುಡಿಯುವ ನೀರನ್ನು ನೀಡುತ್ತದೆ. ರೈತರ ಜೀವನಾಡಿಯಾಗಿರುವ ಕಾವೇರಿ ನೀರಿನ ರಾಜ್ಯದ ಪಾಲಿನ ಮೇಲೆ ಪರಿಣಾಮ ಬೀರಬಹುದೆಂಬ ಕಾರಣಕ್ಕೆ ತಮಿಳುನಾಡು ಸರ್ಕಾರ ಮೊದಲಿನಿಂದಲೂ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ.












Click it and Unblock the Notifications