ಮೇಕೆದಾಟು ಯೋಜನೆ ಕುರಿತು ಡಿಕೆ ಶಿವಕುಮಾರ್ ಹೇಳಿಕೆ: ವಿರೋಧ ವ್ಯಕ್ತಪಡಿಸಿದ ತಮಿಳುನಾಡು ಸರ್ಕಾರ
ಚೆನ್ನೈ, ಮೇ 31: ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಪೂರ್ಣಗೊಳಿಸಲು ಕರ್ನಾಟಕದ ಸರ್ಕಾರ 1,000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿರುವ ಬೆನ್ನಲ್ಲೇ ತಮಿಳುನಾಡು ಸರ್ಕಾರ ಪ್ರತಿಕ್ರಿಯಿಸಿದೆ. ಈ ಕುರಿತು ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈಮುರುಗಣ್ ಅವರು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
'ಕರ್ನಾಟಕ ಜಲಸಂಪನ್ಮೂಲ ಸಚಿವರಾದ ಡಿಕೆ ಶಿವಕುಮಾರ್ ಅವರು ಮೇಕೆದಾಟು ಅಣೆಕಟ್ಟು ಕಾಮಗಾರಿ ಪೂರ್ಣಗೊಳಿಸುತ್ತೇವೆ. ಅದಕ್ಕಾಗಿ 1,000 ಕೋಟಿ ರೂಪಾಯಿಗಳ ನಿಧಿಯನ್ನು ಮಂಜೂರು ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಸುದ್ದಿಯನ್ನು ಇಂದು ಬೆಳಿಗ್ಗೆ ಪತ್ರಿಕೆಗಳಲ್ಲಿ ಓದಿದೆ' ಎಂದು ದೊರೈಮುರುಗಣ್ ಹೇಳಿದ್ದಾರೆ.

'ಭಾರೀ ಹೋರಾಟ ನಡೆಸಿ ಗೆದ್ದಿರುವ ಶಿವಕುಮಾರ್ ಅವರು ಜನರ ಅಭಿನಂದನೆ ಪಡೆಯುವಲ್ಲಿ ನಿರತರಾಗಿರುವ ಕಾರಣ ನಾನೇ ಒಂದು ಕ್ಷಣ ಖುದ್ದಾಗಿ ಬಂದು ಅಭಿನಂದಿಸುತ್ತೇನೆ. ಆದಾಗ್ಯೂ, ಈ ಹೇಳಿಕೆಯ ಮೂಲಕ ನಾನು ಅವರಿಗೆ ನನ್ನ ಶುಭಾಶಯಗಳನ್ನು ವ್ಯಕ್ತಪಡಿಸಲು ಬಯಸುತ್ತೇನೆ' ಎಂದು ಅವರು ತಿಳಿಸಿದ್ದಾರೆ.
'ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಪಕ್ಕದ ರಾಜ್ಯವನ್ನು ಕೆಣಕುವ ಕೆಲಸ ಮಾಡುತ್ತಿರುವುದು ಆಶ್ಚರ್ಯ ತಂದಿದೆ. ಅಧಿಕಾರಿಗಳು ಇನ್ನೂ ಮೇಕೆದಾಟುವಿನ ಸಂಪೂರ್ಣ ವಿವರಗಳನ್ನು ಅವರಿಗೆ ತಿಳಿಸಿಲ್ಲ ಎಂದು ನಾನು ಭಾವಿಸುತ್ತೇನೆ' ಎಂಬುದಾಗಿ ತಮಿಳುನಾಡು ಜಲಸಂಪನ್ಮೂಲ ಸಚಿವರು ಹೇಳಿದ್ದಾರೆ.
'ಕಾವೇರಿ ಸಮಸ್ಯೆ ಬಗೆಹರಿಸಲು ರಚಿಸಲಾಗಿರುವ ಕಾವೇರಿ ನ್ಯಾಯಮಂಡಳಿ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಮೇಕೆದಾಟು ಯೋಜನೆ ಬಗ್ಗೆ ಉಲ್ಲೇಖವಾಗಿಲ್ಲ. ಅನಧಿಕೃತ ನಿರ್ಮಾಣಗಳು ತಮಿಳುನಾಡಿನ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ತಮಿಳುನಾಡಿನ ಹಕ್ಕಾಗಿರುವ ಅನಿಯಂತ್ರಿತ ಮಧ್ಯಂತರ ಜಲಾನಯನ ಪ್ರದೇಶದಲ್ಲಿ ಮೇಕೆದಾಟು ಅಣೆಕಟ್ಟು ಕಟ್ಟುತ್ತೇವೆ ಎಂಬುದಾಗಿ ಹೇಳಿರುವುದು ಸ್ವಾಗತಾರ್ಹವಲ್ಲ' ಎಂದು ದೊರೈಮುರುಗಣ್ ಹೇಳಿದ್ದಾರೆ.

'ಮೇಘದಾಟು ಎಂಬಲ್ಲಿ ಅಣೆಕಟ್ಟು ನಿರ್ಮಿಸುವ ಕರ್ನಾಟಕ ಸರ್ಕಾರದ ಯೋಜನೆಯನ್ನು ತಮಿಳುನಾಡು ಎಲ್ಲಾ ಹಂತಗಳಲ್ಲಿ ವಿರೋಧಿಸುತ್ತದೆ. ಶೀಘ್ರದಲ್ಲೇ ಅವರನ್ನು ಖುದ್ದಾಗಿ ಭೇಟಿಯಾಗುವ ಅವಕಾಶ ಸಿಗಲಿದೆ. ನಂತರ ನಾವು ಈ ಸಮಸ್ಯೆಯನ್ನು ವಿವರವಾಗಿ ಮಾತನಾಡಬಹುದು ಎಂಬುದಾಗಿ ನಾನು ಭಾವಿಸುತ್ತೇನೆ. ಅಲ್ಲಿಯವರೆಗೆ ಗೌರವಾನ್ವಿತ ಶಿವಕುಮಾರ್ ತಾಳ್ಮೆಯಿಂದ ಇರುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂಬುದಾಗಿ ತಿಳಿಸಿದ್ದಾರೆ.
ಚುನಾವಣೆಗೂ ಮುನ್ನ ಮೇಕೆದಾಟು ಯೋಜನೆ ಜಾರಿಗಾಗಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications