ಜಯಾ ಕೇಸ್: ನೊಂದು ಆತ್ಮಹತ್ಯೆಗೆ ಮುಂದಾದ ನಟಿ
ಚೆನ್ನೈ, ಅ 9: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸೆಲ್ವಿ ಜಯಲಲಿತಾ ಅವರಿಗೆ ಜಾಮೀನು ನಿರಾಕರಿಸಿರುವುದರಿಂದ ನೊಂದು ತಮಿಳು ನಟಿ ಮಾಯಾ ತನ್ನ ಪುತ್ರಿ ಜೊತೆ ಸೇರಿ ಆತ್ಮಹತ್ಯೆಗೆ ಮುಂದಾದ ಘಟನೆ ಬುಧವಾರ (ಅ 8) ನಗರದಲ್ಲಿ ವರದಿಯಾಗಿದೆ.
ಚೆನ್ನೈ ಪೊಲೀಸ್ ಆಯುಕ್ತರ ಕಚೇರಿಯ ಮುಂದೆ ಈ ಘಟನೆ ನಡೆದಿದ್ದು, ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ.
ಬುಧವಾರ ಮಾಯಾ ತನ್ನ ಪುತ್ರಿ ಗುಣಪ್ರಿಯಾ ಜೊತೆ ಸೇರಿ ಪೊಲೀಸ್ ಕಚೇರಿಯ ಮುಂಭಾಗಕ್ಕೆ ಬಂದು, ಜಯಾಗೆ ಜಾಮೀನು ಸಿಗದೇ ಇರುವುದಕ್ಕೆ ತಮ್ಮ ಅಸಮಾಧಾನವನ್ನು ಘೋಷಣೆ ಕೂಗುವ ಮೂಲಕ ವ್ಯಕ್ತ ಪಡಿಸಲಾರಂಭಿಸಿದ್ದಾರೆ.

ಜಯಲಲಿತಾಗೆ ವ್ಯವಸ್ಥಿತವಾಗಿ ಸಂಚು ರೂಪಿಸಿ ಜಾಮೀನು ಸಿಗದಂತೆ ಮಾಡಲಾಗಿದೆ. ಇದರಿಂದ ನಾನು ಬಹಳ ನೊಂದಿದ್ದೇನೆ. ಸೀಮೆ ಎಣ್ಣೆ ಸುರಿದುಕೊಂಡು ನಾನು ಮತ್ತು ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಮಾಯಾ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಳ್ಳಲು ಮುಂದಾಗಿದ್ದಾರೆ.
ಕೂಡಲೇ ಅಲ್ಲಿದ್ದ ಪೊಲೀಸರು ನಟಿ ಮಾಯಾ ಅವರಿಂದ ಸೀಮೆ ಎಣ್ಣೆಯ ಕ್ಯಾನನ್ನು ವಶ ಪಡಿಸಿಕೊಂಡು ವಿಚಾರಣೆಗೆ ಕರೆ ತಂದಿದ್ದಾರೆ. ಜಯಲಲಿತಾ ಜೈಲಿನಲ್ಲಿರುವುದನ್ನು ನೋಡಲು ನನ್ನಿಂದ ಸಾಧ್ಯವಾಗುತ್ತಿಲ್ಲ.
ನಾನು ಮತ್ತು ನನ್ನ ಪುತ್ರಿ ಅವರಿಗಾಗಿ ನಮ್ಮ ಜೀವನವನ್ನು ತ್ಯಾಗ ಮಾಡಲು ನಿರ್ಧರಿಸಿದ್ದೇವೆ ಎಂದು ಪೊಲೀಸರ ಮುಂದೆ ಮಾಯಾ ಹೇಳಿಕೆ ನೀಡಿದ್ದಾರೆ. ಪೊಲೀಸರು ಮಾಯಾಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ತಮಿಳಿನಲ್ಲಿ ಅಷ್ಟೇನೂ ಚಾಲ್ತಿಯಲ್ಲಿದ್ದ ನಟಿ ಮಾಯಾ ಘರ್ಜನೈ, ಅಮರ ಕಾವ್ಯಂ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. (ಐಎಎನ್ಎಸ್ ವರದಿ)












Click it and Unblock the Notifications