New Airport ಹೊಸೂರು ಏರ್‌ಪೋರ್ಟ್ ಪ್ರಸ್ತಾವನೆ ತಿರಸ್ಕಾರ; ಕರ್ನಾಟಕದ 2ನೇ ವಿಮಾನ ನಿಲ್ದಾಣ ನಿರ್ಮಾಣದ ಹಾದಿ ಸುಗಮ
ಚೆನ್ನೈ: ಬೆಂಗಳೂರಲ್ಲಿ ಎರಡನೇ ಏರ್‌ಪೋರ್ಟ್ ಸುದ್ದಿ ಹಬ್ಬಿದಾಗಿನಿಂದಲೂ ನೆರೆಯ ರಾಜ್ಯ ತಮಿಳುನಾಡು ಹಾಗೂ ಕರ್ನಾಟಕದ ಮಧ್ಯೆ ಮುಸುಕಿನ ಗುದ್ಧಾಟ ನಡೆಯುತ್ತಲೇ ಇತ್ತು. ಅಲ್ಲದೇ ಸ್ಥಳ ಫೈನಲ್ ಮಾಡುವುದಕ್ಕಾಗಿ ಎರಡು ರಾಜ್ಯಗಳ ಮಧ್ಯೆ ಪೈಪೋಟಿ ಶುರುವಾಗಿತ್ತು, ಕೊನೆಗೂ ತಮಿಳುನಾಡು ಏರ್‌ಪೋರ್ಟ್ ಘೋಷಣೆ ಮಾಡುವ ಮೂಲಕ ಕರ್ನಾಟಕಕ್ಕೆ ಟಕ್ಕರ್ ಕೊಟ್ಟಿತ್ತು. ಬೆಂಗಳೂರಿನ ಹೊಸೂರಿನಲ್ಲಿ ಬೃಹತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅಧಿಕೃತವಾಗಿ ಘೋಷಿಸಿದ್ದರು, ಇದೀಗ ಹೊಸೂರು ಏರ್‌ಪೋರ್ಟ್ ಯೋಜನೆಗೆ ಭಾರೀ ಹಿನ್ನಡೆಯಾಗಿದೆ.
ಹೌದು, ಬೆಂಗಳೂರಿಗೆ ಸಮೀಪವಿರುವ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ತಮಿಳುನಾಡು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಭಾರಿ ಹಿನ್ನಡೆಯಾಗಿದೆ. ಹೊಸೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಬೇಕೆಂಬ ತಮಿಳುನಾಡು ಸರ್ಕಾರದ ಮನವಿಯನ್ನು ರಕ್ಷಣಾ ಸಚಿವಾಲಯ ಮತ್ತೊಮ್ಮೆ ತಿರಸ್ಕರಿಸಿದೆ.

ಹೊಸೂರು ವಿಮಾನ ನಿಲ್ದಾಣಕ್ಕೆ ಅನುಮತಿ ಸಿಗಬೇಕಾದರೆ ರಕ್ಷಣಾ ಸಚಿವಾಲಯದ ಒಪ್ಪಿಗೆ ಅತ್ಯಗತ್ಯ. ಏಕೆಂದರೆ ಈ ಪ್ರದೇಶದ ವಾಯುಪ್ರದೇಶದ ನಿಯಂತ್ರಣ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಬಳಿಯಿದೆ. ಈ ಪ್ರದೇಶದ ವಾಯುಪ್ರದೇಶವು ಎಚ್‌ಎಎಲ್ ಬಳಕೆಗೆ ಅಗತ್ಯವಿದೆ ಎಂದು ಕಾರಣ ನೀಡಿ, ರಕ್ಷಣಾ ಸಚಿವಾಲಯವು ಯೋಜನೆಯ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು, ತಮಿಳುನಾಡು ಸರ್ಕಾರಕ್ಕೆ ಬಿಗ್ ಶಾಕ್ ಕೊಟ್ಟಂತಾಗಿದೆ.
ಕಳೆದ ವಾರ ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿರುವ ಸಚಿವಾಲಯ, ಈ ಪ್ರದೇಶದ ವಾಯುಪ್ರದೇಶವು ಎಚ್‌ಎಎಲ್‌ಗೆ ಅವಶ್ಯಕವಾಗಿದೆ. ಹೀಗಾಗಿ ವಿಮಾನ ನಿಲ್ದಾಣದ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಈಗ, ರಾಜ್ಯ ಸರ್ಕಾರವು ಮುಂದಿನ ಕ್ರಮ ಮತ್ತು ಏನು ಮಾಡಬೇಕೆಂಬುದರ ಕುರಿತು ಅದರ ಆಯ್ಕೆಗಳನ್ನು ಮೌಲ್ಯಮಾಪನ ಮಾಡಲು ಪ್ರಾರಂಭಿಸುತ್ತದೆ ಎಂದು ಮೂಲಗಳು ತಿಳಿಸಿದೆ.
ಇನ್ನೂ 2025 ರ ಜೂನ್ ತಿಂಗಳಿನಲ್ಲಿಯೇ ತಮಿಳುನಾಡು ಸರ್ಕಾರ ವಾಯುಪ್ರದೇಶದ ಸಡಿಲಿಕೆ ಕೋರಿ ಮನವಿ ಮಾಡಿತ್ತು. ಆದರೆ ಹಿಂದೆಯೂ ಅದನ್ನು ತಿರಸ್ಕರಿಸಲಾಗಿತ್ತು. ತದನಂತರ ನವೆಂಬರ್‌ನಲ್ಲಿ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಎಚ್‌ಎಎಲ್ ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗದಂತೆ ವಿಮಾನ ನಿಲ್ದಾಣ ನಿರ್ಮಿಸುವುದು ಹೇಗೆ ಎಂಬ ಬಗ್ಗೆ ನಿರ್ದೇಶಾಂಕ ಅಂದರೆ ಕೋ ಆರ್ಡಿನೇಟ್ಸ್‌ನೊಂದಿಗೆ ವಿವರವಾದ ವರದಿಯನ್ನು ಸಲ್ಲಿಸಿದ್ದರು. ಯಾವುದೇ ಚರ್ಚೆ ನಡೆಸದೆ ಪ್ರಸ್ತಾವನೆಯನ್ನು ನೇರವಾಗಿ ತಿರಸ್ಕರಿಸಿರುವುದು ನಿರಾಶಾದಾಯಕವಾಗಿದೆ. ಒಂದು ವೇಳೆ ಸಭೆ ನಡೆಸಿದ್ದರೆ, ವಾಸ್ತವ ಅಂಶಗಳನ್ನು ವಿವರಿಸಲು ಸರ್ಕಾರಕ್ಕೆ ಅವಕಾಶ ಸಿಗುತ್ತಿತ್ತು ಎಂದು ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಹಾದಿ ಸುಗಮ
ಇನ್ನೂ ತಮಿಳುನಾಡಿನ ಪ್ರಸ್ತಾವನೆಯನ್ನ ಎರಡು ಬಾರೀ ತಿರಸ್ಕರಿಸಿದ್ದು,ಇತ್ತ ಕರ್ನಾಟಕ ಕೂಡ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ಹೊರಟಿದೆ. 2033ರ ಗಡುವನ್ನು ನೋಡಿಕೊಂಡು ಈಗಿನಿಂದಲೇ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಜಾಗದ ಕುರಿತು ಚರ್ಚೆಯಾಗುತ್ತಿದೆ. ಇದೀಗ ತಮಿಳುನಾಡಿಗೆ ಪದೇ ಪದೇ ಹಿನ್ನಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಸ್ವಲ್ಪ ಮಟ್ಟಿಗೆ ಹಾದಿ ಸುಗಮವಾದಂತಾಗಿದೆ.












Click it and Unblock the Notifications