ನೋಟು ಅಮಾನ್ಯೀಕರಣ; ಸಮಗ್ರ ವರದಿ ಸಲ್ಲಿಕೆಗೆ ಕೇಂದ್ರ, ಆರ್‌ಬಿಐಗೆ ಸುಪ್ರೀಂ ಸೂಚನೆ
ನವದೆಹಲಿ, ಅ.12: ಸರ್ಕಾರದ ನೀತಿ ನಿರ್ಧಾರಗಳ ನ್ಯಾಯಾಂಗ ಪರಾಮರ್ಶೆಯ ಕುರಿತು ತನಗೆ "ಲಕ್ಷ್ಮಣ ರೇಖೆ" ತಿಳಿದಿದೆ. ಆದರೆ ಈ ವಿಷಯವು ಕೇವಲ ತಾತ್ವಿಕ ಪ್ರಕ್ರಿಯೆಯಲ್ಲಿದೆಯೇ ಎಂಬ ತೀರ್ಮಾನಕ್ಕೆ ಬರಲು 2016 ರ ನೋಟು ಅಮಾನ್ಯೀಕರಣದ ನಿರ್ಧಾರವನ್ನು ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
2016ರ ಅಧಿಕ ಮೌಲ್ಯದ ಕರೆನ್ಸಿ ನೋಟುಗಳ ಅಮಾನ್ಯೀಕರಣದ ವಿರುದ್ಧದ ಅರ್ಜಿಗಳನ್ನು ಇನ್ನೂ ವಿಚಾರಣೆ ನಡೆಸುವುದಾಗಿ ಹೇಳಿದೆ. ನವೆಂಬರ್ 9 ಕ್ಕೆ ಸುಪ್ರೀಂ ಕೋರ್ಟ್ ಈ ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡಿದೆ.
ಸಂವಿಧಾನ ಪೀಠದ ಮುಂದೆ ಸಮಸ್ಯೆ ಎದುರಾದಾಗ ಉತ್ತರಿಸುವುದು ಅದರ ಕರ್ತವ್ಯ ಎಂದು ಗಮನಿಸಿದ ನ್ಯಾಯಮೂರ್ತಿ ಎಸ್. ಎ ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು 500 ರೂಪಾಯಿ ನೋಟು ಮತ್ತು ರೂ 1,000 ಕರೆನ್ಸಿ ನೋಟುಗಳ ಅಮಾನ್ಯೀಕರಣವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಬಗ್ಗೆ ಸಮಗ್ರ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಸೂಚಿಸಿದೆ.

500, 1,000 ರೂ ನೋಟು ರದ್ದು ಘೋಷಿಸಿದ್ದ ಮೋದಿ
ಆರು ವರ್ಷಗಳ ಹಿಂದೆ ಚಲಾವಣೆಯಲ್ಲಿದ್ದ ಎಲ್ಲಾ ನೋಟುಗಳಲ್ಲಿ ಶೇಕಡಾ 80 ಕ್ಕಿಂತ ಹೆಚ್ಚಾಗಿದ್ದ 500 ರೂ ಮತ್ತು 1,000 ರೂಪಾಯಿ ನೋಟುಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಏಕಾಏಕಿ ತಡರಾತ್ರಿಯ ಭಾಷಣದಲ್ಲಿ ರದ್ದು ಮಾಡಿರುವುದಾಗಿ ಘೋಷಿಸಿದ್ದರು.
ಈ ಕ್ರಮವನ್ನು "ಭ್ರಷ್ಟಾಚಾರ ವಿರೋಧಿ" ಕ್ರಮ ಎಂದು ಬಿಜೆಪಿ ಸರ್ಕಾರ ಹೇಳಿಕೊಂಡಿತ್ತು. ಹೀಗಾಗಿ ಈ ಅರ್ಜಿ ವಿಚಾರಣೆಗಳ ವೇಳೆ ಕೇಂದ್ರ ಮತ್ತು ರಿಸರ್ವ್ ಬ್ಯಾಂಕ್ ಪ್ರತಿಕ್ರಿಯೆಗಳನ್ನು ಸಲ್ಲಿಸಬೇಕೆಂದು ಸುಪ್ರೀಂ ಕೋರ್ಟ್ ಬಯಸಿದೆ.

ನ್ಯಾಯಾಲಯದ ಮೊರೆ ಹೋಗಿದ್ದ ಹಲವಾರು ಮಂದಿ
ರದ್ದಾದ ನೋಟುಗಳನ್ನು ಬದಲಾಯಿಸಿಕೊಳ್ಳಲು ಜನರು ದಿನಗಟ್ಟಲೆ ಸಾಲುಗಟ್ಟಿ ನಿಂತಿದ್ದರು. ಇದು ಭಾರಿ ಆಕ್ರೋಶಕ್ಕೂ ಕಾರಣವಾಗಿತ್ತು. ಇದಾದ ಬಳಿಕ ಸರ್ಕಾರ ಎರಡು ಸಾವಿರ ರೂಪಾಯಿಯ ಹೆಚ್ಚಿನ ಮೌಲ್ಯದ ಹೊಸ ನೋಟುಗಳನ್ನು ಚಲಾವಣೆಗೆ ತಂದಿದೆ. ಇತ್ತಿಚೆಗೆ ಅದು ಕಾಣೆಯಾಗುತ್ತಿದೆ.
ನೋಟು ರದ್ದಾದ ಕೆಲವೇ ದಿನಗಳಲ್ಲಿ ಹಲವಾರು ಜನರು ನ್ಯಾಯಾಲಯದ ಮೊರೆ ಹೋಗಿದ್ದರು. ಸರ್ಕಾರ ನೀಡಿದ್ದ ಗಡುವಿನೊಳಗೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳದ ಹೊರತು ನೋಟುಗಳು ತಮ್ಮ ಮೌಲ್ಯವನ್ನು ಕಳೆದು ಕೊಲ್ಳುವ ಬಗ್ಗೆ ಪ್ರಶ್ನಿಸಿದರು. ಆದರೆ ಈ ಸಮಸ್ಯೆಯನ್ನು ದೀರ್ಘಕಾಲದವರೆಗೆ ವಿಚಾರಣೆಗೆ ಪಟ್ಟಿ ಮಾಡಲಾಗಿಲ್ಲ. ಘೋಷಣೆಯ ಕೇವಲ ಒಂದು ತಿಂಗಳ ನಂತರ ಡಿಸೆಂಬರ್ 2016 ರಲ್ಲಿ ಇದನ್ನು ಮೊದಲು ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠಕ್ಕೆ ಉಲ್ಲೇಖಿಸಲಾಗಿತ್ತು.

ಮತ್ತೆ ಮುನ್ನೆಲೆಗೆ ಬಂದ ನೋಟು ಅಮಾನ್ಯೀಕರಣ ವಿಚಾರ
ಹಿಂದಿನ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಎರಡು ತಿಂಗಳ ಹಿಂದೆ ಅಧಿಕಾರ ತ್ಯಜಿಸುವ ಮೊದಲು ಸಾಂವಿಧಾನಿಕ ಪೀಠಗಳನ್ನು ರಚಿಸಿದ್ದರಿಂದ ಈಗ ಮತ್ತ ನೋಟು ಅಮಾನ್ಯೀಕರಣ ವಿಚಾರ ಕೇಳಿಬರುತ್ತಿದೆ. ಈ ಪೀಠಗಳ ಮುಂದಿರುವ ಇತರ ಪ್ರಮುಖ ವಿಷಯಗಳೆಂದರೆ ಆದಾಯದ ಆಧಾರದ ಮೇಲೆ ಮೇಲ್ಜಾತಿಗಳಿಗೆ ಮೀಸಲಾತಿ ನೀಡುವುದು ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಅಂತ್ಯಗೊಳಿಸಿರುವ ವಿಷಯಗಳು.

1978 ರಲ್ಲಿಯೂ ನೋಟು ಅಮಾನ್ಯೀಕರಣ ನಡೆದಿತ್ತು
ನೋಟು ಅಮಾನ್ಯೀಕರಣದ ಕುರಿತು ಪೀಠಕ್ಕೆ ಹಾಕಲಾದ ವಿವಿಧ ಪ್ರಶ್ನೆಗಳೆಂದರೆ: ನೋಟು ನಿಷೇಧವು ಸಂವಿಧಾನದ 300ಎ ವಿಧಿಯನ್ನು ಉಲ್ಲಂಘಿಸಿದೆಯೇ? ಅದು ಕಾನೂನಿನ ಅಧಿಕಾರದ ಹೊರತು ಯಾವುದೇ ವ್ಯಕ್ತಿಯನ್ನು ಅವರ ಆಸ್ತಿಯಿಂದ ವಂಚಿತಗೊಳಿಸಬಾರದು ಎಂದು ಹೇಳುತ್ತದೆಯೇ? ಎಂಬುದು.
ಈ ರೀತಿಯ ನೋಟು ಅಮಾನ್ಯೀಕರಣಕ್ಕೆ ಸಂಸತ್ತಿನ ಪ್ರತ್ಯೇಕ ಕಾಯಿದೆಯ ಅಗತ್ಯವಿದೆ ಎಂದು ಮಾಜಿ ಹಣಕಾಸು ಸಚಿವ, ಹಿರಿಯ ವಕೀಲ ಪಿ ಚಿದಂಬರಂ ವಾದಿಸಿದ್ದಾರೆ. ಇದೇ ರೀತಿಯ ನೋಟು ಅಮಾನ್ಯೀಕರಣವನ್ನು 1978 ರಲ್ಲಿ ಮಾಡಲಾಗಿತ್ತು.
"ಆರ್‌ಬಿಐನಿಂದ (ನೋಟು ರದ್ದತಿಗಾಗಿ) ಶಿಫಾರಸುಗಳು ಸತ್ಯ ಮತ್ತು ಸಂಶೋಧನೆಗಳೊಂದಿಗೆ ಹೊರಹೊಮ್ಮಿರಬೇಕು ಮತ್ತು ಸರ್ಕಾರವು ಪರಿಗಣಿಸಬೇಕಿತ್ತು. ಆದರೆ, ಇದು ಇಲ್ಲಿ ವಿರುದ್ಧವಾಗಿತ್ತು" ಎಂದು ಹಿರಿಯ ವಕೀಲ ಪಿ ಚಿದಂಬರಂ ವಾದಿಸಿದ್ದಾರೆ.
ನ್ಯಾಯಮೂರ್ತಿ ಎಸ್‌ಎ ನಜೀರ್ ನೇತೃತ್ವದ ಪೀಠವು ಅಂತಿಮವಾಗಿ ಸಾಂವಿಧಾನಿಕ ಪೀಠದ ಮುಂದೆ ಸಮಸ್ಯೆ ಉದ್ಭವಿಸಿದಾಗ ಉತ್ತರಿಸುವುದು ಅದರ ಕರ್ತವ್ಯ ಎಂದು ಹೇಳಿದ್ದಾರೆ. ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ಎಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಮತ್ತು ಬಿವಿ ನಾಗರತ್ನ ಅವರನ್ನು ಪೀಠವು ಒಳಗೊಂಡಿದೆ.












Click it and Unblock the Notifications