ಲೋಕಸಭೆ ಚುನಾವಣೆಗೆ ಮೊದಲು ಸುಪ್ರೀಂಕೋರ್ಟ್ ತೀರ್ಪಿನ ಸಂಚಲನ!
2024ರ ಲೋಕಸಭೆ ಚುನಾವಣೆಗೆ ಅಂದ್ರೆ ಭಾರತದ ಸಾರ್ವತ್ರಿಕ ಚುನಾವಣೆಗೆ ಇನ್ನೇನು ಕೆಲ ದಿನಗಳು ಮಾತ್ರ ಬಾಕಿ ಇದೆ. ಹೀಗಿದ್ದಾಗಲೇ ಸುಪ್ರೀಂಕೋರ್ಟ್ ಮಹತ್ವದ ತೀರ್ಪನ್ನ ನೀಡಿ ಇಡೀ ದೇಶದ ಗಮನ ಸೆಳೆದಿದೆ. ಹಾಗೇ ಸುಪ್ರೀಂಕೋರ್ಟ್ ಕೊಟ್ಟಿರುವ ಈ ತೀರ್ಪು ಇದೀಗ ಸಂಚಲನ ಕೂಡ ಸೃಷ್ಟಿಸಿದೆ. ರಾಜಕೀಯ ಪಕ್ಷಗಳ ನಾಯಕರಿಗೆ ಕೂಡ ಶಾಕ್ ಕೊಟ್ಟಿದ್ದು, ಹಾಗಾದರೆ ಮಾನ್ಯ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪು ಏನು? ಮುಂದೆ ಓದಿ.
ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ
ಅಷ್ಟಕ್ಕೂ ಅನಾಮಧೇಯ ಚುನಾವಣಾ ಬಾಂಡ್ ಯೋಜನೆ ಮಾಹಿತಿ ಹಕ್ಕು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಉಲ್ಲಂಘನೆ ಆಗಿದೆ ಅಂತಾ ಸುಪ್ರೀಂ ಕೋರ್ಟ್ ಹೇಳಿದೆ. ಈ ಮೂಲಕ ಲೋಸಕಭೆ ಚುನಾವಣೆಗೆ ಮೊದಲು ಸುಪ್ರೀಂ ತೀರ್ಪು ಸಂಚಲನ ಸೃಷ್ಟಿ ಮಾಡಿದೆ. ಯೋಜನೆ ಸಂವಿಧಾನದ ಪರಿಚ್ಛೇದ 19(1)(ಎ) ಅಡಿ ಬರುವ ವಾಕ್ & ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಆಗಿದೆ. ಇದೇ ಕಾರಣಕ್ಕೆ ಅಸಾಂವಿಧಾನಿಕ ಆಗಿದೆ ಎಂದು ತೀರ್ಪು ಪ್ರಕಟಿಸುವ ವೇಳೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ತಿಳಿಸಿದ್ದಾರೆ.

ಬ್ಯಾಂಕ್‌ಗೆ ಕೂಡ ಖಡಕ್ ಸೂಚನೆ
ಇನ್ನು ಖಾಸಗಿತನದ ಮೂಲಭೂತ ಹಕ್ಕು ರಾಜಕೀಯ ಗೋಪ್ಯತೆ ಮತ್ತು ಸಂಬಂಧಿತ ನಾಗರಿಕರ ಹಕ್ಕನ್ನ ಒಳಗೊಂಡಿದೆ ಎಂದು ಇದೇ ವೇಳೆ ಮಾನ್ಯ ಸುಪ್ರೀಂ ಕೋರ್ಟ್ ಪೀಠವು ಸ್ಪಷ್ಟವಾಗಿ ತಿಳಿಸಿದೆ. ಯೋಜನೆಯನ್ನು ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ 2 ಪ್ರತ್ಯೇಕ & ಸರ್ವಾನುಮತದ ತೀರ್ಪು ಪ್ರಕಟಿಸಿದೆ. ಮತ್ತೊಂದು ಪ್ರಮುಖ ವಿಷಯ ಏನೆಂದರೆ ಈ ವೇಳೆ, ಬ್ಯಾಂಕ್‌ಗಳು ಚುನಾವಣಾ ಬಾಂಡ್‌ಗಳ ವಿತರಣೆ ತಕ್ಷಣ ನಿಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಖಡಕ್ ಆದೇಶ ನೀಡಿದೆ.
2018ರಲ್ಲಿ ಶುರುವಾಗಿದ್ದ ಯೋಜನೆ
ಇನ್ನೊಂದು ಕಡೆ ರಾಜಕೀಯ ಪಕ್ಷಗಳಿಗೆ ಈ ತೀರ್ಪಿನಿಂದ ಲೋಕಸಭೆ ಚುನಾವಣೆಗೆ ಮೊದಲು ಭಾರಿ ಹಿನ್ನಡೆ ಆಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ರಾಜಕೀಯ ಪಕ್ಷಗಳು ನಗದೀಕರಿಸಿದ ಚುನಾವಣೆ ಬಾಂಡ್ ವಿವರಗಳನ್ನ ಎಸ್‌ಬಿಐ ಒದಗಿಸಬೇಕು ಎಂದಿದೆ ದೇಶದ ಅತ್ಯುನ್ನತ ಕೋರ್ಟ್. ಚುನಾವಣಾ ಆಯೋಗಕ್ಕೆ ಎಸ್‌ಬಿಐ ವಿವರಗಳನ್ನೆಲ್ಲಾ ಸಲ್ಲಿಸಬೇಕು. ಆಯೋಗವು ಈ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಅಂತಾ ಸುಪ್ರೀಂ ಕೋರ್ಟ್ ಆದೇಶವನ್ನ ನೀಡಿದೆ. ಅಂದಹಾಗೆ 2018ರ ಜನವರಿ 2ರಂದು ಸರ್ಕಾರ ಈ ಯೋಜನೆಗೆ ಅಧಿಸೂಚನೆಯನ್ನ ಹೊರಡಿಸಿತ್ತು.

ಇನ್ನು ಈ ಯೋಜನೆ ಪ್ರಕಾರ, ಚುನಾವಣಾ ಬಾಂಡ್ ಭಾರತದ ಯಾವುದೇ ನಾಗರಿಕ ಅಥವಾ ದೇಶದಲ್ಲಿ ಸಂಘಟಿತ ಅಥವಾ ಸ್ಥಾಪಿತ ಘಟಕದಿಂದ ಖರೀದಿ ಮಾಡಬಹುದಾಗಿತ್ತು. ಒಬ್ಬ ವ್ಯಕ್ತಿ ಏಕಾಂಗಿ ಆಗಿ ಅಥವಾ ಇತರ ವ್ಯಕ್ತಿಗಳ ಜೊತೆಯಾಗಿ ಜಂಟಿಯಾಗಿ ಚುನಾವಣಾ ಬಾಂಡ್‌ಗಳನ್ನು ಖರೀದಿ ಮಾಡಬಹುದು ಎನ್ನಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ಈ ಯೋಜನೆಗೆ ಬ್ರೇಕ್ ಹಾಕಿದೆ. ಹಾಗೇ ಖಡಕ್ ಸೂಚನೆ ಕೂಡ ನೀಡಿದೆ.












Click it and Unblock the Notifications