ಐಪಿಸಿ ಸೆಕ್ಷನ್ 377 ತೀರ್ಪು: ಸುಪ್ರೀಂಕೋರ್ಟಿನತ್ತ LGBT ಗಳ ಚಿತ್ತ!
ನವದೆಹಲಿ, ಸೆಪ್ಟೆಂಬರ್ 05: ಭಾರತೀಯ ದಂಡ ಸಂಹಿತೆ(ಐಪಿಸಿ)ಸೆಕ್ಷನ್ 377 ರದ್ದುಗೊಳ್ಳುವುದೇ? ಲೆಸ್ಬಿಯನ್ಸ್, ಗೇಗಳು ತೃತೀಯಲಿಂಗಿಗಳಲ್ಲ ಎಂಬ ತೀರ್ಪು ಬದಲಾಗುವುದೇ? ಎಲ್ಲಕ್ಕೂ ಉತ್ತರ ಗುರುವಾರ(ಸೆಪ್ಟೆಂಬರ್ 06)ದಂದು ಸಿಗಲಿದೆ.
ಐಪಿಸಿಯ ಸೆಕ್ಷನ್ 377ಅನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಎಲ್‌ಜಿಬಿಟಿ ಸಂಘವು (ಸಲಿಂಗಿಗಳ ಸಂಘಟನೆ) ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಅಂತಿಮ ತೀರ್ಪು ನೀಡಲಿದೆ.
ಹೋಟೆಲ್ ಉದ್ಯಮಿ ಕೇಶವ್ ಸೂರಿ ಅವರು ಸೆಕ್ಷನ್ 377ರ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಕೇವಲ ಆರು ದಿನಗಳ ಬಳಿಕ ಹಮ್‌ಸಫರ್ ಟ್ರಸ್ಟ್‌ನ ಅಶೋಕ್ ರಾವ್ ಕವಿ ಮತ್ತು ಆರಿಫ್ ಜಾಫರ್ ಏಪ್ರಿಲ್ 27ರಂದು ಸೆಕ್ಷನ್ ರದ್ದತಿಗೆ ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದರು. ಮೇ ತಿಂಗಳಿನಲ್ಲಿ ಅರ್ಜಿ ವಿಚಾರಣೆ ಆರಂಭವಾಯಿತು.

2009ರಲ್ಲಿ ದೆಹಲಿ ಹೈಕೋರ್ಟ್ ಸೆಕ್ಷನ್ 377ರ ಅಡಿ ಸಲಿಂಗ ಸಂಬಂಧವು ಅಪರಾಧ ಅಲ್ಲ ಎಂದು ಹೇಳಿತ್ತು. ಆದರೆ, ಈ ಆದೇಶವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.
ಐಪಿಸಿ ಸೆಕ್ಷನ್ 377ರ ಪ್ರಕಾರ ನಿಸರ್ಗದ ನಿಯಮಕ್ಕೆ ವಿರುದ್ಧವಾಗಿರುವ ಕಾರಣ ಒಂದೇ ಲಿಂಗದ ವ್ಯಕ್ತಿಗಳ ನಡುವೆ ಒಪ್ಪಿತ ಲೈಂಗಿಕ ಸಂಬಂಧವನ್ನು ಅಸ್ವಾಭಾವಿಕ ಅಪರಾಧ ಎಂದು ಪರಿಗಣಿಸಲಾಗಿದೆ. ಇದಕ್ಕೆ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ.
ಆದರೆ, 2013ರಲ್ಲಿ ದೆಹಲಿ ಹೈಕೋರ್ಟ್ ನೀಡಿದ ಸೆಕ್ಷನ್ 377ರ ಅನ್ವಯ,ಒಂದೇ ಲಿಂಗದ ವ್ಯಕ್ತಿಗಳ ನಡುವೆ ಒಪ್ಪಿತ ಲೈಂಗಿಕ ಸಂಬಂಧವನ್ನು ಅಸ್ವಾಭಾವಿಕ ಅಪರಾಧವಲ್ಲ ಎಂಡು ಘೋಷಿಸಿತ್ತು.
ಸೆಲೆಬ್ರಿಟಿ ಚೆಫ್ ರಿತು ದಾಲ್ಮಿಯಾ, ಹೊಟೇಲ್ ಉದ್ಯಮಿ ಅಮನ್ನಾಥ, ನ್ಯತ್ಯಪಟು ಎನ್.ಎಸ್. ಜೋಹರ್ ಮತ್ತಿತರ ಸಿಲೆಬ್ರಿಟಿ ಸಲಿಂಗಕಾಮಿಗಳು ಸಲಿಂಗಕಾಮವನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಿದ ಐಪಿಸಿ ಸೆಕ್ಷನ್ 377ರ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ.
ಜನನ ಪ್ರಮಾಣಪತ್ರ, ಪಾಸ್ಪೋರ್ಟ್, ಪಡಿತರ ಚೀಟಿ, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಎಲ್ಲಾ ಗುರುತಿನ ದಾಖಲೆಗಳಲ್ಲಿ ಮಂಗಳಮುಖಿಯರನ್ನು ತೃತೀಯ ಲಿಂಗಿಗಳು ಎಂಬುದಾಗಿ ಮಾನ್ಯತೆ ಸಿಕ್ಕಿದೆ. ಆದರೆ, ಸಲಿಂಗಕಾಮ ಅಪರಾಧ ಎಂಬುದರ ಬಗ್ಗೆ ಸ್ಪಷ್ಟನೆ ಸಿಗಬೇಕಿದೆ.












Click it and Unblock the Notifications