ಉತ್ತರ ಪ್ರದೇಶ ಸರ್ಕಾರದಿಂದ 183 ಎನ್‌ಕೌಂಟರ್‌ಗಳ ವಿವರ ಕೇಳಿದ ಸುಪ್ರೀಂ ಕೋರ್ಟ್: ಯೋಗಿ ಸರ್ಕಾರದ ಮೇಲೆ ತೂಗುಕತ್ತಿ?
ನವದೆಹಲಿ, ಆಗಸ್ಟ್ 12: 2017 ರಿಂದ ರಾಜ್ಯದಲ್ಲಿ ನಡೆದ 183 ಎನ್‌ಕೌಂಟರ್‌ಗಳಿಗೆ ಸಂಬಂಧಿಸಿದ ವಿಚಾರಣೆ ಮತ್ತು ತನಿಖಾ ಸ್ಥಿತಿಗತಿಗಳ ಕುರಿತು ವಿವರ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಬಗ್ಗೆ ವಿವರಗಳನ್ನು ಹೊಂದಿರುವ ವಿವರಿಸುವ ಅಫಿಡವಿಟ್ ಅನ್ನು ಸಲ್ಲಿಸುವಂತೆ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಯುಪಿ ಸರ್ಕಾರಕ್ಕೆ ನಿರ್ದೇಶಿಸಿದೆ.
ಏಪ್ರಿಲ್ 15, 2023 ರಂದು ಗ್ಯಾಂಗ್‌ಸ್ಟಾರ್ ಹಾಗೂ ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅವರ ಪೊಲೀಸ್ ಕಸ್ಟಡಿ ಸಾವಿನ ಬಗೆಗಿನ ವಿಚಾರವಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ಈ ಪ್ರಕರಣದ ತನಿಖೆ ನಡೆಸಲು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದ ಆಯೋಗವನ್ನು ರಚಿಸುವುದಾಗಿ ತಿಳಿಸಿದೆ.

ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿಯೂ ಹೆಚ್ಚುತ್ತಿರುವ ಪೊಲೀಸ್ ಎನ್‌ಕೌಂಟರ್‌ಗಳು ಮತ್ತು ಕಸ್ಟಡಿ ಸಾವಿನ ಪ್ರಕರಣಗಳ ಬಗ್ಗೆ ನ್ಯಾಯಮೂರ್ತಿ ಎಸ್‌ಆರ್ ಭಟ್ ನೇತೃತ್ವದ ಪೀಠವು ಕಳವಳ ವ್ಯಕ್ತಪಡಿಸಿದೆ. ತನಿಖೆಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಕ್ರಿಯಾತ್ಮಕ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕೆಂದು ಅದು ಹೇಳಿದೆ.
'ಆರೋಪಿ, ವಿಚಾರಣೆ ಹಂತ ಮತ್ತು ಎನ್‌ಎಚ್‌ಆರ್‌ಸಿ ಮಾರ್ಗಸೂಚಿಗಳ ಅನುಸರಣೆಯ ಬಗ್ಗೆ ನಮಗೆ ಮಾಹಿತಿ ಬೇಕಿದೆ. ಜೈಲಿನ ಗೋಡೆಯೊಳಗೆ ಈ ಘಟನೆಗಳು ಏಕೆ ಸಂಭವಿಸುತ್ತವೆ ಎಂಬುದು ನಮ್ಮ ಪ್ರಶ್ನೆಯಾಗಿದೆ' ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

'ತನಿಖೆಯ ಸ್ಥಿತಿಗತಿಗಳೇನು? ಯಾವ ಆರೋಪಗಳನ್ನು ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತದೆ? ಈ ಬೆಳವಣಿಗೆಗಳು ಒಂದು ರಾಜ್ಯವನ್ನು ಮೀರಿ ಏಕೆ ವಿಸ್ತರಿಸುತ್ತಿವೆ? ಎಂಬುದಕ್ಕೆ ನಮಗೆ ಉತ್ತರ ಬೇಕಿದೆ' ಎಂದು ನ್ಯಾಯಮೂರ್ತಿ ಭಟ್ ಹೇಳಿದ್ದಾರೆ.
'ನಮ್ಮಲ್ಲಿ ಆಯೋಗಗಳು ಮತ್ತು ವಿಶೇಷ ತನಿಖಾ ತಂಡಗಳು (ಎಸ್‌ಐಟಿ) ಇವೆ. ಪಿಯುಸಿಎಲ್ ಮಾರ್ಗಸೂಚಿಗಳು ಸಹ ನಮ್ಮ ವಿಲೇವಾರಿಯಲ್ಲಿವೆ. ಈ ರೀತಿಯ ಹಲವಾರು ಪ್ರಕರಣಗಳು ಕಂಡುಬರುತ್ತಿವೆ. ಇದರ ಹಿನ್ನೆಲೆಯಲ್ಲಿ ಪೂರ್ವನಿಯೋಜಿತ ಕಾರ್ಯಯೋಜನೆ ಇದೆಯೇ? ಈ ಪ್ರಕರಣಗಳ ವಿಚಾರಣೆ ಹೇಗೆ ನಡೆಯುತ್ತಿದೆ? ಬೇರೆ ರಾಜ್ಯಗಳಲ್ಲೂ ಇಂತಹ ಘಟನೆಗಳು ಏಕೆ ನಡೆಯುತ್ತಿವೆ. ಇವುಗಳನ್ನು ಹೇಗೆ ನಿಭಾಯಿಸಲಾಗುತ್ತದೆ' ಎಂದು ಅವರು ಕೇಳಿದ್ದಾರೆ.

ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸುವ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಎಸ್‌ಐಟಿ ಮತ್ತು ತನಿಖಾ ಆಯೋಗಗಳ ರಚನೆಯ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿದರು. ಈ ಕುರಿತಾಗಿ ರಾಜ್ಯ ಸರ್ಕಾರವು ತ್ವರಿತವಾಗಿ ಪ್ರತಿಕ್ರಿಯೆಗಳನ್ನು ನೀಡುತ್ತ ಬಂದಿದೆ ಎಂದು ಅವರು ಹೇಳಿದರು.
ಅತೀಕ್ ಅಹ್ಮದ್ ಅವರ ಸಹೋದರಿಯನ್ನು ಪ್ರತಿನಿಧಿಸುವ ಹಿರಿಯ ವಕೀಲ ಸಿದ್ಧಾರ್ಥ ದವೆ ಅವರು, 'ಎರಡು ಆಯೋಗಗಳನ್ನು ಸ್ಥಾಪಿಸಲಾಗಿದೆ. ಒಂದನ್ನು ನ್ಯಾಯಮೂರ್ತಿ ಭೋನ್ಸಾಲೆ ಮತ್ತು ಇನ್ನೊಂದು ರಾಜೀವ್ ಲೋಚನ್ ನೇತೃತ್ವದಲ್ಲಿವೆ. ಈ ಪ್ರತ್ಯೇಕ ವಿಚಾರಣಾ ಆಯೋಗಗಳು ವಿಭಿನ್ನ ತೀರ್ಮಾನಗಳನ್ನು ನೀಡಬಹುದು. ಇದು ಪ್ರಕರಣದ ದಿಕ್ಕನ್ನು ಬದಲಿಸಬಹುದು' ಎಂದು ವಾದಿಸಿದ್ದಾರೆ.












Click it and Unblock the Notifications