ಅಡುಗೆ ಸಿಲಿಂಡರ್ ಸಂಖ್ಯೆ 12ಕ್ಕೇರಿಸುವ ನಿರೀಕ್ಷೆ
ನವದೆಹಲಿ, ಜ. 1: ಅಡುಗೆ ಅನಿಲ ವಿತರಣೆ ಸಂಬಂಧ ಗೊಂದಲ ಮುಂದುವರಿದಿದೆ. ಇಂದಿನಿಂದ ಗುಲ್ಬರ್ಗ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಆಧಾರ್ ಆಧಾರಿತ ನೇರ ಲಾಭ ಹಸ್ತಾಂತರ (DBTL) ಯೋಜನೆ ಜಾರಿಗೊಳ್ಳಲಿದೆ.
ಈ ಮಧ್ಯೆ ಆಧಾರ್ ಕಾರ್ಡ್ ಬಳಕೆ ಸಂಬಂಧ ಸುಪ್ರೀಂಕೋರ್ಟ್ ಏನು ಹೇಳಿತೋ, ತೈಲ ಕಂಪನಿಗಳೂ ಅದನ್ನು ಏನಂತ ಅರ್ಥೈಸಿಕೊಂಡಿವೆಯೋ LPG ಗ್ರಾಹಕರಿಗಂತೂ ಅರ್ಥವಾಗುತ್ತಿಲ್ಲ. ಆದಾಗ್ಯೂ ಗ್ಯಾಸ್ ವಿತರಕರು ಗ್ರಾಹಕರ ಹಿಂದೆಬಿದ್ದು, ಆಧಾರ್ ಆಧಾರ್ ಎಂದು ಲಿಂಕ್ ಆಗುತ್ತಿದ್ದಾರೆ.

ಈ ಮಧ್ಯೆ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಅವರು ನಾವು ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪನ್ನು ಗೌರವಿಸುತ್ತೇವೆ. ಹಾಗಾಗಿ, ಎಲ್ ಪಿಜಿ ಗ್ರಾಹಕರಿಗೆ ಆಧಾರ್ ಲಿಂಕ್ ಕಡ್ಡಾಯವೇನೂ ಅಲ್ಲ ಎಂದಿದ್ದಾರೆ.
ಈ ಮಧ್ಯೆ, LPG ಗ್ರಾಹಕರಿಗೆ ಸಮಾಧಾನ ತರುವ ಸುದ್ದಿಯೊಂದು ಚುನಾವಣೆ ವರ್ಷದಲ್ಲಿ ಕೇಂದ್ರದ ಕಡೆಯಿಂದ ತೇಲಿಬಂದಿದೆ. ಏನಪ್ಪಾ ಅಂದರೆ ಸಬ್ಸಿಡಿ ದರದಲ್ಲಿ ಒದಗಿಸುವ ಎಲ್‌ಪಿಜಿ ಸಿಲಿಂಡರುಗಳ ಸಂಖ್ಯೆಯನ್ನು ಕೇಂದ್ರ ಯುಪಿಎ ಸರಕಾರವು ವರ್ಷಕ್ಕೆ 9ರಿಂದ 12ಕ್ಕೇರಿಸುವ ಸಾಧ್ಯತೆ ಇದೆ.
ಕೇಂದ್ರದ ಈ ಜನಪ್ರಿಯವಲ್ಲದ/ ಆತುರಗೇಡಿ ನಿರ್ಧಾರದ ವಿರುದ್ಧ ರಾಹುಲ್ ಗಾಂಧಿ ಮೂಗುತೂರಿಸಿದ್ದಾರೆ. ಸಬ್ಸಿಡಿ ಸಿಲಿಂಡರುಗಳನ್ನು 9ಕ್ಕೆ ಸೀಮಿತಗೊಳಿಸಿದ್ದು ದೇಶಾದ್ಯಂತ ಮಹಿಳೆಯರ ಕೋಪಕ್ಕೆ ಕಾರಣವಾಗಿದೆ ಎಂಬುದನ್ನು ಕಾಂಗ್ರೆಸ್ ಮುಖ್ಯಮಂತ್ರಿಗಳು ರಾಹುಲ್ ಗಾಂಧಿಗೆ ಮನದಟ್ಟು ಮಾಡಿದ್ದರು.
ಹಾಗಾಗಿ, ಸಿಲಿಂಡರುಗಳ ಸಂಖ್ಯೆ ಮತ್ತು ಬ್ಯಾಂಕ್ ಖಾತೆಗೆ ನೇರ ಧನಸಹಾಯದ ಯೋಜನೆ (DBTL) ಕುರಿತಂತೆ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯಿಲಿ ಹಾಗೂ ಹಣಕಾಸು ಸಚಿವ ಚಿದಂಬರಂ ಜತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ರಾಹುಲ್ ಗಾಂಧಿ ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದ್ದಾರೆ.
ಹಾಗಾಗಿ, ಪ್ರತಿ ವರ್ಷ LPG ಗ್ರಾಹಕರಿಗೆ ನೀಡುವ ಸಬ್ಸಿಡಿಯುಕ್ತ ಅಡುಗೆ ಅನಿಲ ಸಿಲಿಂಡರ್ ಸಂಖ್ಯೆಯನ್ನು ಸರಕಾರ ಈಗಿನ 9ರಿಂದ 12ಕ್ಕೆ ಏರಿಸುವ ನಿರೀಕ್ಷೆ ಇದೆ. ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಿಲಿಂಡರ್ ಮಿತಿಯನ್ನು ಏರಿಸುವ ಮೂಲಕ ಮತದಾರರ ಓಲೈಕೆಗೆ ಕಾಂಗ್ರೆಸ್ ಚಿಂತನೆ ನಡೆಸಿದೆ ಎನ್ನಲಾಗಿದೆ.












Click it and Unblock the Notifications