ವಾರಂಗಲ್ ನಲ್ಲಿ ಭಾರದ ಬ್ಯಾಗ್ ಹೊತ್ತಿದ್ದ ಬಾಲಕಿ ಕುಸಿದು ಬಿದ್ದು ಸಾವು
ವಾರಂಗಲ್, ಅಕ್ಟೋಬರ್ 17: ಹದಿನಾಲ್ಕು ವರ್ಷದ, ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಪಿ.ಶ್ರೀವರ್ಷಿತಾ ಸೋಮವಾರ ತನ್ನ ಶಾಲೆಯ ಆವರಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ವಾರಂಗಲ್ ಜಿಲ್ಲೆಯ ಕರೀಮ್ ಬಾದ್ ನ ಕೌಟಿಲ್ಯ ಶಾಲೆಯ ವಿದ್ಯಾರ್ಥಿನಿಯು ಕುಸಿದು ಬೀಳುವ ಕೆಲವು ನಿಮಿಷಗಳ ಮುಂಚಿನ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ.
ಭಾರೀ ಗಾತ್ರದ ಬ್ಯಾಗ್ ಹೊತ್ತುಕೊಂಡು ಶಾಲೆ ಆವರಣವನ್ನು ಪ್ರವೇಶಿಸಿದ್ದಾಳೆ ಶ್ರೀವರ್ಷಿತಾ. ಆ ನಂತರ ಮೆಟ್ಟಿಲೇರುತ್ತಾ ಮೂರನೇ ಮಹಡಿಯನ್ನು ತಲುಪಿದ್ದಾಳೆ. ಆ ನಂತರ ದಿಢೀರನೇ ಕುಸಿದು ಬಿದ್ದಿದ್ದಾಳೆ. ಬೇರೆ ವಿದ್ಯಾರ್ಥಿಗಳು ಶಾಲಾ ಸಿಬ್ಬಂದಿಗೆ ಈ ವಿಚಾರ ತಿಳಿಸಿದ್ದಾರೆ.

ಆ ವೇಳೆಗೆ ಶ್ರೀವರ್ಷಿತಾಳ ಹಣೆಗೆ ಗಾಯವಾಗಿದೆ. ಮೂಗಿನಿಂದ ರಕ್ತ ಬರಲಾರಂಭಿಸಿದೆ. ಶಾಲೆಯಲ್ಲಿ ಆಕೆಗೆ ಪ್ರಥಮ ಚಿಕಿತ್ಸೆ ನೀಡಿ, ಪೋಷಕರಿಗೆ ಮಾಹಿತಿ ನೀಡಿ, ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಶ್ರೀವರ್ಷಿತಾಳ ರಕ್ತದೊತ್ತಡ ಕಡಿಮೆ ಇದೆ. ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವಂತೆ ಅಲ್ಲಿ ತಿಳಿಸಿದ್ದಾರೆ.
ಅಲ್ಲಿಂದ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಆಕೆ ಮೃತಪಟ್ಟಿದ್ದಾಳೆ. ಆಸ್ಪತ್ರೆಗೆ ಮಗಳನ್ನು ಕರೆದೊಯ್ಯುವ ವಿಚಾರದಲ್ಲಿ ಶಾಲಾ ಸಿಬ್ಬಂದಿ ತಡ ಮಾಡಿದರು ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ. ಅವರ ಆರೋಪಕ್ಕೆ ಧ್ವನಿಗೂಡಿಸಿದ ವಿದ್ಯಾರ್ಥಿ ಸಂಘಟನೆಗಳು ಶಾಲಾ ಆಡಳಿತ ಮಂಡಳಿ ವಿರುದ್ಧ ಧರಣಿ ನಡೆಸಿದ್ದಾರೆ.
ಶಾಲೆ ಪ್ರಾಂಶುಪಾಲ ಶ್ರೀಧರ್ ಮಾತನಾಡಿ, ವೈದ್ಯರು ಹೇಳಿದ ಪ್ರಕಾರ ಶ್ರೀವರ್ಷಿತಾ ಅತಿಸಾರದಿಂದ ಬಳಲುತ್ತಿದ್ದಳು. ಅದರಿಂದ ಸಾವು ಸಂಭವಿಸಿದೆ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.












Click it and Unblock the Notifications