ರಸ್ತೆಯಲ್ಲಿ ನಾಯಿಗಳು ಇರಂಗಿಲ್ಲ, ನಾಯಿ ಮನಸು ಅರ್ಥವಾಗಲ್ಲ: ಸುಪ್ರೀಂ ಕೋರ್ಟ್
ನವದೆಹಲಿ: ಬೀದಿ ನಾಯಿಗಳ ವಿಚಾರವಾಗಿ ಸುಪ್ರೀಂ ಕೋರ್ಟ್ ಮತ್ತೊಂದು ಮಹತ್ವದ ತೀರ್ಪು ನೀಡಿದೆ. ಈಚೆಗೆ ದೇಶದ ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಕೆಲವರು ಬೀದಿಗೆ ಇಳಿದು ಸುಪ್ರೀಂ ಕೋರ್ಟ್‌ನ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ರಸ್ತೆಯಲ್ಲಿ ನಾಯಿಗಳು ಇರಂಗಿಲ್ಲ, ನಾಯಿ ಮನಸು ಅರ್ಥವಾಗಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ರಸ್ತೆಗಳು ಬೀದಿ ನಾಯಿಗಳಿಂದ ಮುಕ್ತವಾಗುವಂತೆ ನೋಡಿಕೊಳ್ಳುವ ವ್ಯವಸ್ಥೆ ಇರಬೇಕು. ಏಕೆಂದರೆ ನಾಯಿ ಕಚ್ಚುವ ಮನಸ್ಥಿತಿಯಲ್ಲಿರುವಾಗ ಅಥವಾ ಇಲ್ಲದಿರುವಾಗ ಅದರ ಮನಸು ಯಾರಿಗೂ ಅರ್ಥವಾಗಲ್ಲ. ನಾಯಿಗಳ ಮನಸು ಯಾರಿಂದಲೂ ಓದಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಬೀದಿ ನಾಯಿಗಳಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಹಾಗೂ ಎನ್.ವಿ ಅಂಜಾರಿಯಾ ಅವರನ್ನು ಒಳಗೊಂಡ ಪೀಠವು ಬೀದಿ ನಾಯಿಗಳ ವಿಚಾರವಾಗಿ ಕಳವಳವನ್ನು ವ್ಯಕ್ತಪಡಿಸಿದೆ.

ಯಾರಾದರೂ ಬೈಕ್ ಅಥವಾ ಸೈಕಲ್‌ನಲ್ಲಿ ಹೋಗುವ ಸಂದರ್ಭದಲ್ಲಿ ನಾಯಿಗಳು ಯಾರನ್ನಾದರೂ ಕಚ್ಚಬಹುದು ಇಲ್ಲವೇ ಬೆನ್ನಟ್ಟಬಹುದು. ಇದರಿಂದ ಆ ವ್ಯಕ್ತಿ ಮತ್ತು ಆ ವ್ಯಕ್ತಿ ಬೀಳಬಹುದು ಅಥವಾ ಅಪಘಾತ ಸಂಭವಿಸಬಹುದು ಎಂದು ಹೇಳಿದೆ. ಅಪಘಾತಗಳನ್ನು ತಪ್ಪಿಸುವುದು ಯಾವಾಗಲೂ ಚಿಕಿತ್ಸೆಗಿಂತ ಉತ್ತಮ, ರಸ್ತೆಗಳು ಸುರಕ್ಷಿತವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ನಾಯಿಗಳು ಜನರಿಗೆ ಕಚ್ಚುವುದು ಒಂದೇ ಸಮಸ್ಯೆಯಲ್ಲ, ಸೈಕಲ್‌ಗಳಲ್ಲಿ ಜನರನ್ನು ಬೆನ್ನಟ್ಟುವ ನಾಯಿಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಬೆಳಿಗ್ಗೆ ಯಾವ ನಾಯಿ, ಯಾವ ಮನಸ್ಥಿತಿಯಲ್ಲಿದೆ ಎಂದು ನೀವು ಹೇಗೆ ಗುರುತಿಸುತ್ತೀರಿ ಎಂದು ಪ್ರಶ್ನೆ ಮಾಡಿದೆ. ಮುಂದುವರಿದು ಪ್ರಾಣಿದಯಾ ಸಂಘದ ಪರವಾಗಿ ವಾದ ಮಂಡಿಸಿದ ಸಿಬಲ್ ಅವರು, ನಾಯಿಗಳು ಕಾಂಪೌಂಡ್‌ಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ವಾಸಿಸುತ್ತಿದ್ದವು ಎಂದು ಹೇಳಿದರು. ನಾನು ವಿಶ್ವವಿದ್ಯಾಲಯದಲ್ಲಿದ್ದಾಗ, ನಾಯಿಗಳು ಇದ್ದವು ಮತ್ತು ಯಾವ ನಾಯಿಯೂ ನನ್ನನ್ನು ಕಚ್ಚಲಿಲ್ಲ. ಹಲವು ನಾಯಿಗಳು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿವೆ ಎಂದು ಹೇಳಿದ್ದರು.
ಇದಕ್ಕೆ ಪೀಠವು ನಿಮ್ಮ ಮಾಹಿತಿ ಹಳೆಯದು. ಈ ಪ್ರದೇಶಗಳಲ್ಲಿ ನಾಯಿಗಳು ಮನುಷ್ಯರನ್ನು ಕಚ್ಚುವುದು ವರದಿ ಆಗುತ್ತಿದೆ. ನಾಯಿ ಕಚ್ಚುವುದನ್ನು ತಪ್ಪಿಸುವುದಕ್ಕೆ ಒಂದು ವ್ಯವಸ್ಥೆ ಇರಬೇಕು. ನಾಯಿಗಳಿಗೆ ಗುಂಡು ಹಾರಿಸಿ ಎಂದು ಯಾರೂ ಹೇಳುತ್ತಿಲ್ಲ. ರಸ್ತೆಗಳು ನಾಯಿಗಳಿಂದ ಮುಕ್ತವಾಗಿರಬೇಕು ಎಂದು ಹೇಳಿದೆ. ಇದಕ್ಕೆ ಎಲ್ಲಾ ನಾಯಿಗಳಿಗೆ ಆಶ್ರಯ ನೀಡುವುದು ಪರಿಹಾರವಲ್ಲ ಎಂದು ಸಿಬಲ್ ಅವರು ವಾದ ಮಂಡಿಸಿದರು.
ಮುಂದುವರಿದು ಎಲ್ಲಾ ನಾಯಿಗಳನ್ನು ಆಶ್ರಯ ಹೊದಗಿಸುವುದು ಪರಿಹಾರವಲ್ಲ. ಇದು ಆರ್ಥಿಕವಾಗಿಯೂ ಕಾರ್ಯಸಾಧ್ಯವಲ್ಲ. ಈ ಸಮಸ್ಯೆಗೆ ವೈಜ್ಞಾನಿಕ ವಿಧಾನದ ಮೂಲಕ ಪರಿಹಾರವನ್ನು ಕಂಡುಹಿಡಿಯಬೇಕು ಎಂದು ಸಿಬಲ್ ಹೇಳಿದರು. ನ್ಯಾಯಾಲಯ ಆವರಣದಲ್ಲಿ, ವಿಶ್ವವಿದ್ಯಾಲಯಗಳಲ್ಲಿ ನಿಮಗೆ ನಾಯಿಗಳು ಏಕೆ ಬೇಕು ಎಂದು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ.
ಕೇಂದ್ರದ ನಿಲುವಿಗೆ ಅಸಮಾಧಾನ
ಇನ್ನು ನಾಯಿಗಳಿರುವ ಪ್ರದೇಶಗಳನ್ನು ತೆರವುಗೊಳಿಸುವ ಜವಾಬ್ದಾರಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಜ್ಯಗಳ ಮೇಲೆ ವರ್ಗಾಯಿಸಿರುವುದಕ್ಕೆ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿದೆ. ಕಳೆದ 20 ದಿನಗಳಲ್ಲಿ ಇಬ್ಬರು ನ್ಯಾಯಾಧೀಶರು ಬೀದಿ ಪ್ರಾಣಿಗಳಿಂದಾಗಿ ಹೆದ್ದಾರಿಗಳಲ್ಲಿ ಅಪಘಾತಗಳನ್ನು ಅನುಭವಿಸಿರುವುದ್ದಾರೆ ಎಂದು ಹೇಳಿದೆ.
ಸಾರ್ವಜನಿಕ ಪ್ರದೇಶಗಳಾದ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಬಸ್ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳಂತಹ ಪ್ರದೇಶಗಳಲ್ಲಿ ನಾಯಿ ಕಚ್ಚುವ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ. ಸಾರ್ವಜನಿಕ ಸುರಕ್ಷತೆ, ಆರೋಗ್ಯ ಮತ್ತು ಬೀದಿ ನಾಯಿಗಳ ನಿರ್ವಹಣೆಯ ಹಿತದೃಷ್ಟಿಯಿಂದ ನಿರ್ದೇಶನಗಳನ್ನು ನೀಡುವುದು ಅತ್ಯಗತ್ಯ ಎಂದು ಕೋರ್ಟ್ ಹೇಳಿದೆ.












Click it and Unblock the Notifications