ಸೋನಿಯಾಗೆ ಭಾರತರತ್ನ ಕೊಡಿಯೆಂದು ಆಗ್ರಹಿಸುವುದಿಲ್ಲ
ನವದೆಹಲಿ, ಮಾ 28: ನಮ್ಮ ನಾಯಕಿ ಸೋನಿಯಾ ಗಾಂಧಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಅವರಿಗೆ ಭಾರತರತ್ನ ಕೊಡಬೇಕೆಂದು ನಾವೇನೂ ಬೇಡಿಕೆ ಸಲ್ಲಿಸುವುದಿಲ್ಲ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
ಅಜಾತಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಭಾರತರತ್ನ ಪ್ರಶಸ್ತಿ ಪ್ರಧಾನ ಮಾಡಿದ (ಮಾ 27) ದಿನವೇ ಕಾಂಗ್ರೆಸ್ ಈ ರೀತಿಯ ಹೇಳಿಕೆಯನ್ನು ನೀಡಿದೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೋನಿಯಾಗೂ ಭಾರತರತ್ನ ನೀಡಬೇಕೆಂದು ಆಗ್ರಹಿಸುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಿದ್ದ ಕಾಂಗ್ರೆಸ್ ವಕ್ತಾರೆ ರೀತಾ ಜೋಷಿ, ಕೋಟ್ಯಾಂತರ ಕಾರ್ಯಕರ್ತರ ಹೃದಯವನ್ನು ಮೇಡಂ ಸೋನಿಯಾ ಗೆದ್ದಿದ್ದಾರೆ. ಅವರು ತಮ್ಮದೇ ಆದ ಘನತೆ, ಗೌರವವನ್ನು ಹೊಂದಿರುವವರು ಎಂದಿದ್ದಾರೆ.

ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಮೇಡಂ ಇದ್ದಾರೆ. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರುವಾಸಿಯಾಗಿದ್ದಾರೆ. ಆದರೆ ನಾವು ಯಾವತ್ತೂ ಅವರಿಗೆ ಭಾರತರತ್ನ ಸಿಗಲಿದೆ ಎನ್ನುವ ಮಹತ್ವಾಕಾಂಕ್ಷೆಯನ್ನು ಹೊಂದಿಲ್ಲ ಎಂದು ರೀತಾ ಜೋಷಿ ಹೇಳಿದ್ದಾರೆ.
ವಾಜಪೇಯಿಗೆ ಅವರ ನಿವಾಸದಲ್ಲಿ ಭಾರತರತ್ನ ಪ್ರಶಸ್ತಿ ಪ್ರಧಾನ ಮಾಡಿದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಜರಿದ್ದರು. ಆದರೆ ಸೋನಿಯಾ ಗೈರಾಗಿದ್ದರು.
ಈ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ರೀತಾ ಜೋಷಿ, ಸೋನಿಯಾ ಗಾಂಧಿಯವರಿಗೆ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರದ ಕಡೆಯಿಂದ ಆಹ್ವಾನ ಬಂದಿಲ್ಲ ಎಂದಿದ್ದಾರೆ.
ಭಾರತರತ್ನ ಪಡೆದ ವಾಜಪೇಯಿಯವರನ್ನು ಸೋನಿಯಾ ಅಭಿನಂದಿಸಿದ್ದು ಹೀಗೆ, ವಾಜಪೇಯಿಯವರು ವಿಶಾಲ ಹೃದಯವನ್ನು ಹೊಂದಿದ್ದಾರೆ. ಅವರಿಗೆ ಭಾರತರತ್ನ ಪ್ರಶಸ್ತಿ ಅತ್ಯಂತ ಸೂಕ್ತವಾದದ್ದು. ರಾಷ್ಟ್ರಕ್ಕೆ ಸೇವೆ ಸಲ್ಲಿಸುವಲ್ಲಿನ ಅವರ ಬದ್ದತೆ ಎಲ್ಲರೂ ಮೆಚ್ಚುವಂತದ್ದು'.












Click it and Unblock the Notifications