ಸಿಎಂ ನಿತೀಶ್ ಕುಮಾರ್ ಮೇಲೆ ಚಪ್ಪಲಿ ಎಸೆತ
ಪಾಟ್ನಾ, ಡಿ. 23 : ಜೆಡಿಯು ವತಿಯಿಂದ ಆಯೋಜಿಸಿದ್ದ ಸಂಕಲ್ಪ ಸಮಾವೇಶದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ಚಪ್ಪಲಿ ಎಸೆದಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಅದೃಷ್ಟವಶಾತ್ ಚಪ್ಪಲಿ ನಿತೀಶ್‌ಕುಮಾರ್ ಮೇಲೆ ಬೀಳದೆ, ಕೂದಲೆಳೆ ಅಂತರದಲ್ಲಿ ಹಾರಿ ಹೋಗಿ ವೇದಿಕೆ ಹಿಂಭಾಗಕ್ಕೆ ಬಿದ್ದಿದೆ.
ಭಾನುವಾರ ಬಿಹಾರದ ಬೇಗುಸರಾಯ್ ಎಂಬಲ್ಲಿ ಜೆಡಿಯು ಸಂಕಲ್ಪ ಸಮಾವೇಶ ಆಯೋಜಿಸಿತ್ತು. ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಸಿಎಂ ನಿತೀಶ್ ಕುಮಾರ್ ಮಾತನಾಡುತ್ತಿದ್ದರು. ಕಾಂಗ್ರೆಸ್ ಮತ್ತು ಆರ್‌ಜೆಡಿ ರಾಜ್ಯದಲ್ಲಿ ಒಂದಾಗುವ ಲಕ್ಷಣಗಳಿವೆ. ಈ ಎರಡೂ ಪಕ್ಷಗಳು ಒಂದಾದರೆ ಕಾನೂನು ಸುವ್ಯವಸ್ಥೆ ಹಾಳಾಗಲಿದೆ ಎಂದು ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು.

ಬಿಹಾರದಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಸರ್ಕಾರವಿದ್ದಾಗ ಜನರು ಭಯಭೀತರಾಗಿದ್ದರು. ಯಾರೊಬ್ಬರೂ ನಿರ್ಭಯವಾಗಿ ತಿರುಗಾಡುವ ಪರಿಸ್ಥಿತಿ ಇರಲಿಲ್ಲ. ಕೊಲೆ, ಸುಲಿಗೆ, ಅಪಹರಣದಂತಹ ಪ್ರಕರಣಗಳು ನಡೆಯುತ್ತಿದ್ದವು. ಇದಕ್ಕೆ ಈ ಎರಡು ಪಕ್ಷಗಳೇ ಕಾರಣ ಎಂದು ನೇರವಾಗಿ ವಾಗ್ದಾಳಿ ನಡೆಸಿದರು.
ಹೀಗೆ ನಿತೀಶ್ ಕುಮಾರ್ ಕಾಂಗ್ರೆಸ್ ಮತ್ತು ಆರ್‌ಜೆಡಿ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದ ವೇಳೆ ಕಾರ್ಯಕರ್ತನೊಬ್ಬ ಚಪ್ಪಲಿಯನ್ನು ತೆಗೆದುಕೊಂಡು ನೇರವಾಗಿ ನಿತೀಶ್‌ಕುಮಾರ್ ಇದ್ದ ಸ್ಥಳಕ್ಕೆ ಎಸೆದು ಬಿಟ್ಟ, ಅದೃಷ್ಟವಶಾತ್ ಚಪ್ಪಲಿ ನಿತೀಶ್‌ಕುಮಾರ್ ಮೇಲೆ ಬೀಳದೆ, ಕೂದಲೆಳೆ ಅಂತರದಲ್ಲಿ ಹಾರಿ ಹೋಗಿ ವೇದಿಕೆ ಹಿಂಭಾಗಕ್ಕೆ ಬಿದ್ದಿತು.
ತಮ್ಮ ಕಡೆ ಚಪ್ಪಲಿ ತೂರಿಬಂದ ತಕ್ಷಣ ವಿಚಲಿತರಾದ ಸಿಎಂ ನಿತೀಶ್ ಕುಮಾರ್, ತುಸು ಬಾಗಿದರು. ಆದ್ದರಿಂದ ಚಪ್ಪಲಿ ಅವರ ಮುಖದ ಸಮೀಪದಲ್ಲೇ ಹಾದು ಹೋಗಿ ವೇದಿಕೆ ಹಿಂಭಾಗಕ್ಕೆ ಬಿದ್ದಿತು. ಇದರಿಂದ ಸಂಕಲ್ಪ ಯಾತ್ರೆಯಲ್ಲಿ ಕೆಲ ಕಾಲ ಉದ್ವಿಗ್ನಿ ಪರಿಸ್ಥಿತಿ ನಿರ್ಮಾಣಗೊಂಡಿತು. ತಕ್ಷಣವೇ ಪೊಲೀಸರು ಕಾರ್ಯಕರ್ತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದರು.












Click it and Unblock the Notifications