ಜಮೀನಿಗಾಗಿ ಎರಡು ಕುಟುಂಬಗಳ ನಡುವೆ ಘರ್ಷಣೆ: ಆರು ಮಂದಿ ಸಾವು
ಎರಡು ಕುಟುಂಬಗಳ ನಡುವಿನ ದೀರ್ಘಕಾಲದ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ಮಹಿಳೆ ಸೇರಿದಂತೆ ಆರು ಮಂದಿಯನ್ನು ಕೊಲೆ ಮಾಡಲಾಗಿದೆ. ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಜನರಲ್ಲಿ ಭೀತಿಯನ್ನು ಉಂಟುಮಾಡಿದೆ.
ಡಿಯೋರಿಯಾ ಜಿಲ್ಲೆಯ ರುದ್ರಪುರ ಪೊಲೀಸ್ ಠಾಣೆ ವ್ಯಾಪ್ತಿಯ ಫತೇಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಅಲ್ಲಿಗೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

ಎರಡು ಕುಟುಂಬಗಳ ನಡುವೆ ಹಲವು ವರ್ಷಗಳಿಂದ ಜಮೀನು ವಿಚಾರದಲ್ಲಿ ವಿವಾದ ತಾರಕಕ್ಕೇರಿದ್ದು, ಇಬ್ಬರ ನಡುವೆ ವೈಮನಸ್ಸು ಹೆಚ್ಚಿತ್ತು. ಕೊಲೆಯಾದವರಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರೂ ಇದ್ದಾರೆ ಎಂದು ವರದಿಗಳು ತಿಳಿಸಿವೆ.
ಜಿಪಂ ಸದಸ್ಯನ ಕೊಲೆ ನಂತರ ಹಿಂಸಾಚಾರ
ಫತೇಪುರದ ಲೆಹ್ರಾ ತೋಲಾದಲ್ಲಿ ಸೋಮವಾರ ಬೆಳಗ್ಗೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪ್ರೇಮ್ ಯಾದವ್ ಅವರನ್ನು ಹೊಡೆದು ಕೊಂದಾಗ ಹಿಂಸಾಚಾರ ಭುಗಿಲೆದ್ದಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ನಂತರ, ಆಕ್ರೋಶಗೊಂಡ ಜನರು ಆರೋಪಿಯ ಮನೆಗೆ ಜಮಾಯಿಸಿದರು ಮತ್ತು ಸೇಡು ತೀರಿಸಿಕೊಳ್ಳಲು ಸತ್ಯಪ್ರಕಾಶ್ ದುಬೆಯನ್ನು ಕೊಲೆ ಮಾಡಿದರು. ದುಬೆಯ ಕುಟುಂಬದ ನಾಲ್ವರು ಅಮಾಯಕರು ಸಹ ಪ್ರಾಣ ಕಳೆದುಕೊಂಡಿದ್ದು, ಆದರೂ ಜನರ ಕೋಪವು ಕಡಿಮೆಯಾಗಿಲ್ಲ.
ಇಬ್ಬರ ಬಂಧನ, ಬಿಗಿ ಬಂದೋಬಸ್ತ್
ಈ ಭೀಕರ ಘಟನೆಯ ಹಿನ್ನೆಲೆಯಲ್ಲಿ, ಇಡೀ ಗ್ರಾಮದಲ್ಲಿ ಅಶಾಂತಿ ಆವರಿಸಿತು. ಗ್ರಾಮದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಮತ್ತು ಘಟನಾ ಸ್ಥಳದಲ್ಲಿ ನಿರ್ಣಾಯಕ ಪುರಾವೆಗಳನ್ನು ಸಂಗ್ರಹಿಸಲು ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.
ಮೊದಲು ಕೊಲೆಯಾದ ಪ್ರೇಮ್ ಯಾದವ್ ಅವರು ಸತ್ಯಪ್ರಕಾಶ್ ಅವರ ಮನೆಗೆ ಭೇಟಿ ನೀಡಿದ್ದರು ಎಂದು ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ತಿಳಿಸಿದ್ದಾರೆ. ಇಬ್ಬರ ನಡುವಿನ ತೀವ್ರ ವಾಗ್ವಾದ ಉಂಟಾಗಿದ್ದು, ಪ್ರೇಮ್ ಯಾದವ್‌ರನ್ನು ಹರಿತವಾದ ಆಯುಧದಿಂದ ಕೊಲೆ ಮಾಡಲಾಗಿದೆ. . ಇದಕ್ಕೆ ಪ್ರತೀಕಾರವಾಗಿ ಸತ್ಯಪ್ರಕಾಶ್ ಅವರ ಮನೆಯ ಮೇಲೆ ಪ್ರೇಮ್ ಅವರ ನೆರೆಹೊರೆಯವರು ದಾಳಿ ಮಾಡಿ ಕುಟುಂಬಸ್ಥರನ್ನು ಕೊಲೆ ಮಾಡಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಸಿಎಂ ಯೋಗಿ ಆದಿತ್ಯನಾಥ್ ಟ್ವೀಟ್
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆ ಸಂಬಂಧ ಎಕ್ಸ್ (ಟ್ವಿಟರ್) ನಲ್ಲಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಭರವಸೆ ನೀಡಿದರು. ಘಟನಾ ಸ್ಥಳಕ್ಕೆ ಆಗಮಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಡಿಜಿ ಆಯುಕ್ತರು ಮತ್ತು ಐಜಿ ಅವರಿಗೆ ಸೂಚಿಸಿದ್ದೇನೆ, ಅಲ್ಲದೆ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತವನ್ನು ಕೋರಿದ್ದೇನೆ. ತಪ್ಪಿತಸ್ಥರನ್ನು ಬಿಡಲಾಗುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.












Click it and Unblock the Notifications