Sinking Joshimath: ಕರ್ಣಪ್ರಯಾಗ, ಬದರಿನಾಥ ಹೆದ್ದಾರಿಯಲ್ಲಿ ಕಾಣಿಸಿಕೊಂಡ ಬಿರುಕು!
ಜೋಶಿಮಠದ ಬಳಿಕ ಕರ್ಣಪ್ರಯಾಗ ಮನೆಗಳಲ್ಲಿ, ಬದರಿನಾಥ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ.
ಕರ್ಣಪ್ರಯಾಗ ಫೆಬ್ರವರಿ 20: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಜೋಶಿಮಠದ ಮನೆಗಳಲ್ಲಿನ ಬಿರುಕುಗಳು ಸದ್ಯ ಎಲ್ಲೆಡೆ ಹರಡಿಕೊಳ್ಳುತ್ತಿವೆ. ಮನೆಗಳು, ರಸ್ತೆಗಳು, ದೇವಸ್ಥನಗಳು ಹೀಗೆ ಅನೇಕ ಕಟ್ಟಡಗಳಲ್ಲಿನ ಗೋಡೆಗಳ ಮೇಲಿನ ಬಿರುಕು ಸದ್ಯ ನೆರೆ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ಇದರಿಂದ ಜನ ಆತಂಕದಲ್ಲೇ ದಿನ ದೂಡುವಂತ ಸ್ಥಿತಿ ನಿರ್ಮಾಣವಾಗಿದೆ.
ಜೋಶಿಮಠದ ಮನೆಗಳ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದರಿಂದ ಹಲವಾರು ಕಟ್ಟಡಗಳು ನೆಲಸಮಗೊಂಡು ಸ್ಥಳೀಯರು ಭಯದಲ್ಲಿ ಬದುಕನ್ನು ಮುಂದುವರೆಸಿದರೆ, ಬದರಿನಾಥ ಮತ್ತು ಕರ್ಣಪ್ರಯಾಗನಲ್ಲೂ ಇದೇ ಆತಂಕದಲ್ಲಿ ಜನ ವಾಸಿಸುತ್ತಿದ್ದಾರೆ. ಉತ್ತರಾಖಂಡದ ಚಮೋಲಿ ಜಿಲ್ಲೆಯ ಕರ್ಣಪ್ರಯಾಗದಲ್ಲಿ ಸುಮಾರು 28 ಮನೆಗಳು ಬಿರುಕು ಬಿಟ್ಟಿದ್ದು ಕುಸಿಯುವ ಹಂತದಲ್ಲಿವೆ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ.
ನಗರದಲ್ಲಿ ಮನೆಗಳ ಗೋಡೆಗಳ ಮೇಲೆ ವಿಶಾಲವಾದ ಬಿರುಕುಗಳನ್ನು ನೋಡಿ ಜನ ದಿಗ್ಭ್ರಮೆಗೊಂಡಿದ್ದಾರೆ. ಅಧಿಕಾರಿಗಳು ಸೂಕ್ತ ವ್ಯವಸ್ಥೆ ಕಲ್ಪಿಸಿ ಸುರಕ್ಷತೆಗೆ ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಮನವಿ ಮಾಡಿದ್ದಾರೆ.
ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಿಮಾಂಶು ಖುರಾನಾ, ಕರ್ಣಪ್ರಯಾಗ ಎಸ್‌ಡಿಎಂ ಹಿಮಾಂಶು ಕಫಲ್ತಿಯಾ, ಶಾಸಕ ಅನಿಲ್ ನೌಟಿಯಾಲ್ ಮತ್ತು ವಿಪತ್ತು ನಿರ್ವಹಣಾ ಅಧಿಕಾರಿ ಎನ್. ಜೋಶಿ ಅವರು ಭಾನುವಾರ ಬಹುಗುಣ ನಗರ, ಸುಭಾಷ್ ನಗರ ಮತ್ತು ಅಪ್ಪರ್ ಬಜಾರ್‌ನಲ್ಲಿ ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲಿಸಿದರು.

ಕರ್ಣಪ್ರಯಾಗ ಮನೆಗಳಲ್ಲಿ ಬಿರುಕು
ಸಂತ್ರಸ್ತ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಮತ್ತು ಬಿರುಕುಗಳನ್ನು ಮೇಲ್ವಿಚಾರಣೆ ಮಾಡಲು ಪೀಡಿತ ಕಟ್ಟಡಗಳಲ್ಲಿ ಕ್ರ್ಯಾಕೊಮೀಟರ್‌ಗಳನ್ನು ಅಳವಡಿಸಲು ಡಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬಾಡಿಗೆ ಮನೆಗಳಲ್ಲಿ ವಾಸಿಸಲು ಆಯ್ಕೆ ಮಾಡುವ ನಿವಾಸಿಗಳಿಗೆ ಆರು ತಿಂಗಳ ಬಾಡಿಗೆ ಮೊತ್ತವನ್ನು ಒದಗಿಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ. ಖುರಾನಾ ಅವರು ರಚನೆಗಳ ವಿವರವಾದ ಸಮೀಕ್ಷೆಯನ್ನು ಮಾಡುವಂತೆ SDM ಗೆ ನಿರ್ದೇಶನ ನೀಡಿದರು. ವ್ಯಾಪಕ ಬಿರುಕು ಬಿಟ್ಟಿರುವ ಕಟ್ಟಡಗಳನ್ನು ತೆರವು ಮಾಡಲಾಗುವುದು ಮತ್ತು ಅಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು ಎಂದು ಖುರಾನಾ ಹೇಳಿದರು.
ಪಟ್ಟಣದ ಈ ಭಾಗದಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ಭೂಮಿ ಕುಸಿಯಲಾರಂಭಿಸಿತ್ತು. ಅನಾಹುತ ಸಂಭವಿಸುವ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ನಿವಾಸಿಗಳು ಆಡಳಿತವನ್ನು ಒತ್ತಾಯಿಸಿದ್ದರು. ಆದರೆ ಇದನ್ನು ನಿರ್ಲಕ್ಷಿಸಲಾಗಿದೆ ಎಂದು ಜನರು ದೂರುತ್ತಿದ್ದಾರೆ.

ಹಿಮಾಲಯವನ್ನು ಸೂಕ್ಷ್ಮ ವಲಯ ಎಂದು ಘೋಷಿಸಲು ಒತ್ತಾಯ
ಮುಳುಗುತ್ತಿರುವ ದೇವಾಲಯದ ಪಟ್ಟಣ ಜೋಶಿಮಠ ಪ್ರತಿ ದಿನವೂ ಹೆಚ್ಚು ಸಂಕಟಗಳನ್ನು ಎದುರಿಸುತ್ತಲೇ ಇದೆ. ನೂರಾರು ಕುಟುಂಬಗಳು ಸ್ಥಳಾಂತರಗೊಳ್ಳುವುದರಿಂದ ವಿದ್ಯುತ್ ಬಿಕ್ಕಟ್ಟಿನವರೆಗೆ ಸುಂದರವಾದ ಜೋಶಿಮಠ ಭೂಮಿ ಕುಸಿತದ ಸಮಸ್ಯೆಯೊಂದಿಗೆ ಹೋರಾಡುತ್ತಿದೆ.
ಉತ್ತರಾಖಂಡದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಯೋಜಿತವಲ್ಲದ ಮತ್ತು ಅನಿಯಂತ್ರಿತ ನಿರ್ಮಾಣಗಳು ಜೋಶಿಮಠವನ್ನು ಮುಳುಗುವ ಅಂಚಿಗೆ ತಂದಿದೆ ಎಂದು ತಜ್ಞರು ಪರಿಶೀಲನೆ ಬಳಿಕ ಹೇಳಿದ್ದಾರೆ. ಹಿಮಾಲಯವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಒತ್ತಾಯಿಸಿದ್ದಾರೆ.

ಜೋಶಿಮಠದಲ್ಲಿ 258 ಕುಟುಂಬ ಸ್ಥಳಾಂತರ
ಅಧಿಕಾರಿಗಳ ಪ್ರಕಾರ, ಜೋಶಿಮಠದ 849 ಮನೆಗಳು ಭೂಮಿ ಕುಸಿತದ ನಂತರ ಬಿರುಕು ಬಿಟ್ಟಿವೆ ಮತ್ತು 258 ಕುಟುಂಬಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಈಗ ವಿದ್ಯುತ್ ಕಂಬಗಳು ವಾಲಲು ಆರಂಭಿಸಿರುವುದರಿಂದ ಮತ್ತೊಂದು ಬಿಕ್ಕಟ್ಟು ಎದುರಾಗಿದೆ. ವರದಿಯ ಪ್ರಕಾರ ಇಲ್ಲಿಯವರೆಗೆ ಸುಮಾರು 70 ವಿದ್ಯುತ್ ಕಂಬಗಳು ಮತ್ತು ಕೆಲವು ಟ್ರಾನ್ಸ್‌ಫಾರ್ಮರ್‌ಗಳು ಉರುಳಿ ಬಿದ್ದಿವೆ.

ಬದರಿನಾಥ ಹೆದ್ದಾರಿಯ 10 ಸ್ಥಳಗಳಲ್ಲಿ ಹೊಸ ಬಿರುಕು
ಉತ್ತರಾಖಂಡ ಸರ್ಕಾರ ಶನಿವಾರ ಚಾರ್ ಧಾಮ್ ಯಾತ್ರೆಯ ದಿನಾಂಕವನ್ನು ಪ್ರಕಟಿಸಲಾಗಿದೆ. ಈ ನಡುವೆ ಜೋಶಿಮಠದ ಬಳಿಯ ಬದರಿನಾಥ ಹೆದ್ದಾರಿಯಲ್ಲಿ ಸುಮಾರು 10 ಪ್ರಮುಖ ಬಿರುಕುಗಳು ಕಂಡುಬಂದಿವೆ. ಈ ಹೆದ್ದಾರಿಯು ಧಾರ್ಮಿಕ ಪಟ್ಟಣವಾದ ಬದರಿನಾಥ್‌ಗೆ ಸಂಪರ್ಕ ಕಲ್ಪಿಸುತ್ತದೆ. ಇದು ಗರ್ವಾಲ್ ಹಿಮಾಲಯದಲ್ಲಿ ಹೆಚ್ಚು ಭೇಟಿ ನೀಡುವ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಜೋಶಿಮಠ ಮತ್ತು ಮಾರ್ವಾಡಿ ನಡುವಿನ 10 ಕಿ.ಮೀ ವ್ಯಾಪ್ತಿಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಜೋಶಿಮಠ ಬಚಾವೋ ಸಂಘರ್ಷ ಸಮಿತಿ (ಜೆಬಿಎಸ್‌ಎಸ್) ಪದಾಧಿಕಾರಿ ಸಂಜಯ್ ಉನಿಯಾಲ್ ಮಾತನಾಡಿ, ಜೋಶಿಮಠ ಸಮೀಪದ ಬದರಿನಾಥ ಹೆದ್ದಾರಿಯಲ್ಲಿ ಕನಿಷ್ಠ 10 ಸ್ಥಳಗಳಲ್ಲಿ ಹೊಸ ಬಿರುಕು ಕಾಣಿಸಿಕೊಂಡಿದೆ. ಎಸ್‌ಬಿಐ ಶಾಖೆಯ ಎದುರು, ರೈಲ್ವೆ ಅತಿಥಿ ಗೃಹದ ಬಳಿ, ಜೇಪೀ ಕಾಲೋನಿ ಪಕ್ಕದಲ್ಲಿ ಮತ್ತು ಮಾರ್ವಾಡಿ ಸೇತುವೆಯ ಬಳಿ ಹೆದ್ದಾರಿಯಲ್ಲಿ ಬಿರುಕುಗಳು ಎದ್ದು ಕಾಣುತ್ತಿವೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಭೂಕುಸಿತಕ್ಕೆ ಒಳಗಾದ ಬೆಟ್ಟದ ಪಟ್ಟಣದ ರವಿಗ್ರಾಮ ಪುರಸಭೆಯ ವಾರ್ಡ್‌ನ 'ಝೀರೋ ಬೆಂಡ್' ಬಳಿ ಹೆದ್ದಾರಿಯ ಸಣ್ಣ ಭಾಗವೂ ಕುಸಿದಿದೆ ಎಂದು ನಿವಾಸಿ ಪ್ರಣವ್ ಶರ್ಮಾ ಖಾಸಗಿ ಮಾಧ್ಯಮವೊಂದಕ್ಕೆ ತಿಳಿಸಿದರು.

17.6 ಲಕ್ಷ ಯಾತ್ರಿಕರು ಬದರಿನಾಥ ಭೇಟಿ
ಬದರಿನಾಥ ಹೆದ್ದಾರಿ ಈಗಾಗಲೇ ಕುಸಿತದ ಭೀತಿ ಎದುರಿಸುತ್ತಿದೆ. ಚಾರ್ ಧಾಮ್ ಯಾತ್ರೆಯ ವೇಳೆ ಸಾವಿರಾರು ವಾಹನಗಳು ರಸ್ತೆಯಲ್ಲಿ ಸಂಚರಿಸಿದರೆ ಏನಾಗುತ್ತದೋ ಎನ್ನುವ ಭೀತಿ ಹೆಚ್ಚಾಗಿದೆ. ಏಪ್ರಿಲ್ 27 ರಂದು ಬದರಿನಾಥ ಧಾಮದ ಬಾಗಿಲು ತೆರೆಯುತ್ತದೆ, ಕೇದಾರನಾಥ ಯಾತ್ರೆ ಏಪ್ರಿಲ್ 25 ರಿಂದ ಪ್ರಾರಂಭವಾಗಲಿದೆ ಎಂದು ಸರ್ಕಾರ ಶನಿವಾರ ಘೋಷಿಸಿದೆ. ಕಳೆದ ವರ್ಷ ದಾಖಲೆಯ 17.6 ಲಕ್ಷ ಯಾತ್ರಿಕರು ಬದರಿನಾಥವನ್ನು ತಲುಪಿದ್ದರು.












Click it and Unblock the Notifications