ಹಿಮಾಚಲ ಪ್ರದೇಶ: ಭಾರತದ ಮೊದಲ ಮತದಾರ ಶ್ಯಾಮ್ ಶರಣ್ ನೇಗಿ ನಿಧನ
ಶಿಮ್ಲಾ, ನವೆಂಬರ್ 5: ಭಾರತದ ಮೊದಲ ಮತದಾರ ಶ್ಯಾಮ್ ಶರಣ್ ನೇಗಿ (106) ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರು ವಯೋಸಹಜ ಕಾರಣಗಳಿಂದ ಮೃತಪಟ್ಟಿದ್ದಾರೆ.
ಹಿಮಾಚಲ ಪ್ರದೇಶದ ಕಲ್ಪಾದಲ್ಲಿನ ತಮ್ಮ ನಿವಾಸದಲ್ಲಿ ನಿಧರಾಗಿರುವ ನೇಗಿ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಶ್ಯಾಮ್ ನೇಗಿ ಸ್ವತಂತ್ರ ಭಾರತದ ಮೊದಲ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. 1951ರ ಅಕ್ಟೋಬರ್ 23 ರಂದು ಕಲ್ಪಾ ಮತಗಟ್ಟೆಯಲ್ಲಿ ತಮ್ಮ ಮೊದಲ ಮತದಾನ ಮಾಡಿದ್ದರು.

ದೇಶದ ಮೊದಲ ಮತದಾರರೂ ಆಗಿದ್ದ ನೇಗಿ ಈ ವರ್ಷದ ನವೆಂಬರ್ 2 ರಂದು ಕೊನೆಯ ಬಾರಿಗೆ ಮತ ಚಲಾವಣೆ ಮಾಡಿದ್ದರು. ನೇಗಿ ಒಟ್ಟು 34 ಬಾರಿ ಮತ ಚಲಾಯಿಸಿದ್ದಾರೆ.
ಶ್ಯಾಮ್ ನೇಗಿ ಸಾವಿಗೆ ಕಂಬನಿ ಮಿಡಿದಿರುವ ಪ್ರಧಾನಿ ಮೋದಿ, 'ನೇಗಿ ಬದುಕು ಶ್ಲಾಘನೀಯವಾಗಿದೆ. ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಾಗೂ ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸಲು ಯುವ ಮತದಾರರಿಗೆ ಸ್ಫೂರ್ತಿಯಾಗಿದೆ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಹಿಮಾಚಲ ಮುಖ್ಯಮಂತ್ರಿ ಜೈರಾಮ್ ಠಾಕೂರ್, ನೇಗಿ ನಿಧನಕ್ಕೆ ಸಾಂತ್ವನ ಹೇಳಿದ್ದಾರೆ. 'ದೇಶದ ಮೊದಲ ಮತದಾರ ತಮ್ಮ ಕೊನೆಯ ಮತವನ್ನು ಚಲಾಯಿಸಿದ ನೆನಪು ನನಗಿದೆ. ಇದು ಯಾವಾಗಲೂ ಭಾವನಾತ್ಮಕವಾಗಿ ಉಳಿಯಲಿದೆ' ಎಂದು ಹೇಳಿದ್ದಾರೆ

'ಸ್ವತಂತ್ರ ಭಾರತದ ಮೊದಲ ಮತದಾರ ಕಿನ್ನೌರ್‌ಗೆ ಸೇರಿದ ಶ್ಯಾಮ್ ಶರಣ್ ನೇಗಿ ನಿಧನದ ಸುದ್ದಿ ಕೇಳಿ ದುಃಖವಾಯಿತು. ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಲೇ ಬಂದರು. ನವೆಂಬರ್ 2 ರಂದು 34 ನೇ ಬಾರಿಗೆ ವಿಧಾನಸಭಾ ಚುನಾವಣೆಗೆ ಅಂಚೆ ಮತ ಚಲಾಯಿಸಿದರು. ಈ ನೆನಪು ಯಾವಾಗಲೂ ಭಾವನಾತ್ಮಕವಾಗಿ ಉಳಿಯಲಿದೆ' ಎಂದು ಠಾಕೂರ್ ಟ್ವೀಟ್ ಮಾಡಿದ್ದಾರೆ.
ಕಿನ್ನೌರ್‌ನ ಡೆಪ್ಯೂಟಿ ಕಮಿಷನರ್ ಅಮನ್‌ದೀಪ್ ಗರ್ಗ್, ನೇಗಿಯವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ನಡೆಸಲಾಗುವುದು ಎಂದು ಹೇಳಿದ್ದಾರೆ.












Click it and Unblock the Notifications