ಪೆಗಾಸಸ್ ರಾಹುಲ್ ಗಾಂಧಿ ಮನಸ್ಸಿನಲ್ಲಿದೆ, ಫೋನ್‌ನಲ್ಲಿ ಅಲ್ಲ: ಶಿವರಾಜ್ ಚೌಹಾಣ್ ವಾಗ್ದಾಳಿ
ವಿದೇಶಿ ರಾಯಭಾರ ಕಚೇರಿಗಳಿಗೆ ಹೋಗಿ ಭಾರತ ವಿರೋಧಿ ಮಾತನಾಡುತ್ತಾರೆ. ವಿದೇಶಗಳಲ್ಲಿ ಭಾರತದ ಮಾನಹಾನಿ ಮಾಡುವುದು ಕಾಂಗ್ರೆಸ್‌ನ ಹೊಸ ಅಜೆಂಡ.
ಭೋಪಾಲ್, ಮಾರ್ಚ್ 05: ಇಸ್ರೇಲಿ ಸ್ಪೈವೇರ್ ಪೆಗಾಸಸ್ ಮೂಲಕ ಬೇಹುಗಾರಿಕೆ ಮಾಡಲಾಗಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಾಗ್ದಾಳಿ ನಡೆಸಿದ್ದಾರೆ. ಪೆಗಾಸಸ್ ಫೋನ್‌ನಲ್ಲಿಲ್ಲ, ಬದಲಿಗೆ ಅದು ರಾಹುಲ್ ಗಾಂಧಿಯವರ ಮನಸ್ಸಿನಲ್ಲಿದೆ ಎಂದು ಕಿಡಿಕಾರಿದ್ದಾರೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, "ಪೆಗಾಸಸ್ ಫೋನ್‌ನಲ್ಲಿಲ್ಲ, ಅದು ರಾಹುಲ್ ಗಾಂಧಿಯವರ ಮನಸ್ಸಿನಲ್ಲಿದೆ. ಪೆಗಾಸಸ್ ಕಾಂಗ್ರೆಸ್‌ನ ಡಿಎನ್‌ಎಗೆ ಪ್ರವೇಶಿಸಿದೆ. ರಾಹುಲ್ ಗಾಂಧಿ ಅವರ ಬುದ್ಧಿವಂತಿಕೆ ಬಗ್ಗೆ ನನಗ ಕರುಣೆ ಬರುತ್ತಿದೆ. ಅವರು ವಿದೇಶಗಳಿಗೆ ಹೋಗಿ ಅಲ್ಲಿ ನಮ್ಮ ದೇಶದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾರೆ" ಎಂದು ಆರೋಪಿಸಿದ್ದಾರೆ.

"ವಿದೇಶಿ ರಾಯಭಾರ ಕಚೇರಿಗಳಿಗೆ ಹೋಗಿ ಭಾರತ ವಿರೋಧಿ ಮಾತನಾಡುತ್ತಾರೆ. ವಿದೇಶಗಳಲ್ಲಿ ಭಾರತದ ಮಾನಹಾನಿ ಮಾಡುವುದು ಕಾಂಗ್ರೆಸ್‌ನ ಹೊಸ ಅಜೆಂಡಾ. ವಿದೇಶಗಳಲ್ಲಿ ನಮ್ಮ ದೇಶದ ವಿರುದ್ಧ ಟೀಕೆ ಮಾಡುವುದು ದೇಶ ವಿರೋಧಿ ಹೆಜ್ಜೆ. ಹಾಗಾಗಿ ದೇಶ ಮತ್ತು ಜನತೆ ರಾಹುಲ್ ಗಾಂಧಿಯನ್ನು ಎಂದಿಗೂ ಕ್ಷಮಿಸುವುದಿಲ್ಲ" ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ ನೀಡಿದ ರಾಹುಲ್ ಗಾಂಧಿ, ಇಸ್ರೇಲಿ ಸ್ಪೈವೇರ್ ಆಗಿರುವ ಪೆಗಾಸಸ್ ಮೂಲಕ ತಮ್ಮ ಫೋನ್ ಮೇಲೆ ಕಣ್ಣಿಡಲಾಗಿತ್ತು. ತಾವಿ ಯಾರ ಜೊತೆಗೆ ಮಾತನಾಡುತ್ತೇನೆ ಎಂಬುದನ್ನು ಗಮನಿಸಲಾಗುತ್ತಿತ್ತು. ಈ ಬಗ್ಗೆ ಜಾಗರೂಕರಾಗಿರಿ ಎಂದು ಗುಪ್ತಚರ ಅಧಿಕಾರಿಗಳು ಎಚ್ಚರಿಸಿದ್ದಾರೆ ಎಂದು ಹೇಳಿದ್ದಾರೆ.
"ನನ್ನ ಫೋನ್‌ನಲ್ಲಿ ಪೆಗಾಸಸ್ ಇತ್ತು. ಹೆಚ್ಚಿನ ಸಂಖ್ಯೆಯ ರಾಜಕಾರಣಿಗಳ ಫೋನ್‌ಗಳಲ್ಲಿ ಪೆಗಾಸಸ್ ಇತ್ತು. ಗುಪ್ತಚರ ಅಧಿಕಾರಿಗಳು ನನಗೆ ಕರೆ ಮಾಡಿ, 'ದಯವಿಟ್ಟು ನೀವು ಫೋನ್‌ನಲ್ಲಿ ಏನು ಹೇಳುತ್ತಿದ್ದೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ ಏಕೆಂದರೆ ನಾವು ಎಲ್ಲವನ್ನೂ ರೆಕಾರ್ಡ್ ಮಾಡುತ್ತೇವೆ' ಎಂದಿದ್ದರು. ಇದ್ದರಿಂದ ನಮ್ಮ ಮೇಲೆ ನಿರಂತರ ಒತ್ತಡವಿದೆ. ಪ್ರತಿಪಕ್ಷಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಕ್ರಿಮಿನಲ್ ಮೊಕದ್ದಮೆಗಳ ಅಡಿಯಲ್ಲಿ ಇರಬಾರದ ವಿಷಯಗಳಿಗಾಗಿ ನನ್ನ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ" ಎಂದು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಡಿಸಿದ್ದರು.

ಇದೇ ವೇಳೆ ತಮ್ಮ ಸರ್ಕಾರ ಜಾರಿಗೆ ತಂದ ಯೋಜನೆಗಳ ಬಗ್ಗೆ ಮಾತನಾಡುತ್ತಾ, ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು ಮುಖ್ಯಮಂತ್ರಿ ಚೌಹಾಣ್ ತರಾಟೆಗೆ ತೆಗೆದುಕೊಂಡಿದ್ದಾರೆ. " 2017 ರಲ್ಲಿ, ನಾವು ಬೈಗಾ, ಭರಿಯಾ ಮತ್ತು ಸಹರಿಯಾಗೆ ಸೇರಿದ ಬುಡಕಟ್ಟುಗಳು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 1,000 ರೂಪಾಯಿ ಠೇವಣಿ ಮಾಡಲು ಪ್ರಾರಂಭಿಸಿದ್ದೇವು. ರಾಜ್ಯದಲ್ಲಿ 2018ರ ವರೆಗೆ ನಮ್ಮ ಸರಕಾರ ಅಧಿಕಾರದಲ್ಲಿರುವವರೆಗೆ ಮಹಿಳೆಯರ ಖಾತೆಗೆ 1,000 ರೂಪಾಯಿ ಜಮಾ ಮಾಡಿದ್ದೆವು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಬೈಗಾ ಖಾತೆಗೆ 1,000 ರೂ. ಜಮಾ ಮಾಡುವುದನ್ನು ಏಕೆ ನಿಲ್ಲಿಸಿದ್ದೀರಿ?" ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications