Maharashtra Elections: ಮಹಾರಾಷ್ಟ್ರ ಡಿಜಿಪಿ ಬಗ್ಗೆ ಸಂಜಯ್ ರಾವತ್ ಗಂಭೀರ ಆರೋಪ
ಮಹಾರಾಷ್ಟ್ರ ರಾಜ್ಯದ ಪೊಲೀಸ್ ಮಹಾನಿರ್ದೇಶಕಿ ರಶ್ಮಿ ಶುಕ್ಲಾ ಅವರು ಪೊಲೀಸ್ ಪಡೆಯ ಚುಕ್ಕಾಣಿ ಹಿಡಿದರೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯನ್ನು ನ್ಯಾಯಯುತವಾಗಿ ನಡೆಸಲು ಸಾಧ್ಯವಿಲ್ಲ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯದ ಪೊಲೀಸ್ ಮಹಾನಿರ್ದೇಶಕಿ ರಶ್ಮಿ ಶುಕ್ಲಾ ವಿರುದ್ಧ ಬಹಳ ಗಂಭೀರವಾದ ಆರೋಪವಿದೆ. 2019ರಲ್ಲಿ ನಮ್ಮ ಸರ್ಕಾರ ರಚನೆಯಾದಾಗ, ಭಾರತೀಯ ಜನತಾ ಪಕ್ಷದ ಪರವಾಗಿ ಅವರು ನೇರವಾಗಿ ಕೆಲಸ ಮಾಡುತ್ತಿದ್ದರು. ಈ ಪೊಲೀಸ್ ಮಹಾನಿರ್ದೇಶಕರು ನಮ್ಮೆಲ್ಲ ಫೋನ್‌ಗಳನ್ನು ಟ್ಯಾಪ್ ಮಾಡಿ ಮಾಹಿತಿ ನೀಡುತ್ತಿದ್ದರು. ನಾವು ಏನು ಮಾಡಲಿದ್ದೇವೆ ಎಂಬುದರ ಕುರಿತು ದೇವೇಂದ್ರ ಫಡ್ನವೀಸ್‌ಗೆ ಸಂಪೂರ್ಣ ಮಾಹಿತಿ ಕೊಡುತ್ತಿದ್ದವರು ಇವರೇ ಎಂದು ದೂರಿದ್ದಾರೆ.

ಇಂತಹವರು ಈಗ ನ್ಯಾಯಯುತವಾಗಿ ಚುನಾವಣೆಗಳನ್ನು ನಡೆಸುತ್ತಾರೆ ಎಂದು ನಾವು ನಿರೀಕ್ಷಿಸಬಹುದೇ? ಆಕೆಗೆ ಚುನಾವಣೆಯ ಅಧಿಕಾರವನ್ನು ನೀಡಬಾರದು ಎಂದು ನಾವು ಹೇಳಿದ್ದೇವೆ. ನಂತರ ಚುನಾವಣಾ ಆಯೋಗವು ರಶ್ಮಿ ಶುಕ್ಲಾ ಅವರಿಗೆ ವರ್ಗಾವಣೆ ಮಾಡುವ ಹಕ್ಕಿಲ್ಲ ಎಂದು ಹೇಳಿದೆ. ಪೊಲೀಸರ ಒತ್ತಡದ ಮೇರೆಗೆ ಮಹಾರಾಷ್ಟ್ರ ಚುನಾವಣೆ ನಡೆಸಲಾಗುತ್ತಿದೆ ಎಂದು ರಾವತ್ ದೂರಿದ್ದಾರೆ.
ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಪತ್ರ ಬರೆದು, ರಶ್ಮಿ ಶುಕ್ಲಾ ಅವರನ್ನು ತಮ್ಮ ಸ್ಥಾನದಿಂದ ವಜಾಗೊಳಿಸುವಂತೆ ಮನವಿ ಮಾಡಿದ್ದರು. ಅಲ್ಲದೆ, ಕಾಂಗ್ರೆಸ್, ಶಿವಸೇನೆ (ಯುಬಿಟಿ), ಮತ್ತು ಎನ್‌ಸಿಪಿ (ಎಸ್‌ಪಿ) ಸೇರಿದಂತೆ ರಾಜ್ಯದ ವಿರೋಧ ಪಕ್ಷಗಳ ವಿರುದ್ಧ ಡಿಜಿಪಿ ಶುಕ್ಲಾ ಅವರು ಪಕ್ಷಪಾತ ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಪಟೋಲೆ ಆರೋಪಿಸಿದ್ದರು.

ಅಲ್ಲದೆ ಮಹಾರಾಷ್ಟ್ರದಲ್ಲಿ ಕಳೆದ 20 ದಿನಗಳಲ್ಲಿ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಹಲವಾರು ರಾಜಕೀಯ ಹಿಂಸಾಚಾರದ ಘಟನೆಗಳು ನಡೆದಿವೆ. ಮಹಾರಾಷ್ಟ್ರದಲ್ಲಿ ಅಪರಾಧ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ ಎನ್ನುವ ಆರೋಪವಿದೆ. ಮಹಾರಾಷ್ಟ್ರದ ಪೊಲೀಸ್ ಮಹಾನಿರ್ದೇಶಕರ ಹುದ್ದೆಯಿಂದ ರಶ್ಮಿ ಶುಕ್ಲಾ ಅವರನ್ನು ತೆಗೆದುಹಾಕಬೇಕು ಎಂದು ಈ ಹಿಂದೆಯೂ ದೂರುಗಳು ಹೋಗಿತ್ತು. ಇವರು ಬಿಜೆಪಿಯ ಪರವಾಗಿದ್ದಾರೆ ಎನ್ನುವ ಆರೋಪ ಹಲವು ನಾಯಕರಿಂದ ಬಂದಿದೆ.
ರಶ್ಮಿ ಶುಕ್ಲಾ ಅವರ ಎತ್ತಂಗಡಿ ಬಗ್ಗೆ ಹಲವು ಬಾರಿ ಪ್ರತಿಕಾಗೋಷ್ಠಿಗಳ ಮೂಲಕವೂ ವಿನಂತಿ ಮಾಡಿಕೊಳ್ಳಲಾಗಿದೆ. ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಾದ ತಕ್ಷಣ ಜಾರ್ಖಂಡ್‌ನಲ್ಲಿ ಡಿಜಿಪಿಯನ್ನು ತೆಗೆದುಹಾಕಲಾಯಿತು. ಆದರೆ ಮಹಾರಾಷ್ಟ್ರದಲ್ಲಿ ಡಿಜಿಪಿಗೆ ವಿನಾಯಿತಿ ನೀಡಲಾಗಿದೆ. ಒಂದು ತಿಂಗಳಿನಲ್ಲೇ ವಿರೋಧ ಪಕ್ಷಗಳ ವಿರುದ್ಧ ರಾಜಕೀಯ ಹಿಂಸಾಚಾರ ಉಲ್ಬಣಗೊಂಡಿದೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ನಾಯಕರು ದೂರಿದ್ದಾರೆ.
ಕಾಂಗ್ರೆಸ್, ಶಿವಸೇನೆ (ಯುಬಿಟಿ), ಮತ್ತು ಎನ್‌ಸಿಪಿ (ಎಸ್‌ಪಿ) ವಿರುದ್ಧ ಆ ಡಿಜಿಪಿ ಪಕ್ಷಪಾತ ತೋರಿದ್ದಾರೆ. ಪುಣೆಯ ಪೊಲೀಸ್ ಕಮಿಷನರ್ ಮತ್ತು ರಾಜ್ಯ ಗುಪ್ತಚರ ಕಮಿಷನರ್ ಆಗಿ ಈ ಹಿಂದೆ ಅವರು ಸೇವೆ ಸಲ್ಲಿಸುತ್ತಿದ್ದಾಗ ಪ್ರತಿಪಕ್ಷ ನಾಯಕರ ಅಕ್ರಮ ಫೋನ್ ಟ್ಯಾಪಿಂಗ್ ಮಾಡಿದ್ದರು ಎನ್ನುವ ಆರೋಪವೂ ಅವರ ಮೇಲಿದೆ.












Click it and Unblock the Notifications