ದೇಶಕ್ಕೆ ‘ಕರ್ನಾಟಕ ಮಾದರಿ’ ಬೇಕು ಎಂದ ಶರದ್ ಪವಾರ್!
ಬೆಂಗಳೂರು: ಚುನಾವಣೆಯಲ್ಲಿ ಬಿಜೆಪಿಗೆ ಭೀಕರ ಸೋಲು ಎದುರಾದ ಬಳಿಕ ಸಾಕಷ್ಟು ಚರ್ಚೆ ಶುರುವಾಗಿದೆ. ಅದರಲ್ಲೂ ದೇಶವೇ ಕರ್ನಾಟಕದ ಕಡೆಗೆ ತಿರುಗಿ ನೋಡುತ್ತಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಗಳಿಸಿದ ಭರ್ಜರಿ ಗೆಲುವು ಎಲ್ಲರಿಗೂ ಮಾದರಿ ಎಂಬ ಮಾತುಗಳು ಕೇಳಿಬರುತ್ತಿದೆ. ಇಷ್ಟೆಲ್ಲದರ ಮಧ್ಯೆ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಕರ್ನಾಟಕದ ಬಗ್ಗೆ ಸರ್ಪ್ರೈಸ್ ಹೇಳಿಕೆ ಕೊಟ್ಟಿದ್ದಾರೆ.
ಹೌದು, ಕರ್ನಾಟಕ ಚುನಾವಣೆ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ ವಿರೋಧ ಪಕ್ಷಗಳಲ್ಲಿ ಹೊಸ ನಿರೀಕ್ಷೆ ಹುಟ್ಟುಹಾಕಿದೆ. ಅದರಲ್ಲೂ ಬಿಜೆಪಿ ವಿರುದ್ಧ ಲೋಕಸಭಾ ಚುನಾವಣೆಗೆ ಮುನ್ನ ಒಗ್ಗೂಡಬೇಕು, ಕೇಂದ್ರದ ಬೆಲೆ ಏರಿಕೆ ಬಿಸಿ ಮತ್ತು ತಪ್ಪುಗಳನ್ನ ಜನರಿಗೆ ಪರಿಚಯಿಸಬೇಕು ಎಂಬುದು ವಿರೋಧ ಪಕ್ಷಗಳ ಪ್ಲ್ಯಾನ್. ಈ ತಂತ್ರಕ್ಕೆ ಇದುವರೆಗೂ ಬಲ ಸಿಕ್ಕಿರಲಿಲ್ಲ. ಆದರೆ ಕರ್ನಾಟಕದಲ್ಲಿ ಬಿಜೆಪಿ ಹೀನಾಯವಾಗಿ ಸೋತ ಬಳಿಕ ಮತ್ತೆ ಈ ಮಾತು ಮುನ್ನೆಲೆಗೆ ಬಂದಿದ್ದು, ದೇಶಕ್ಕೆ 'ಕರ್ನಾಟಕ ಮಾದರಿ' ಎನ್ನಲಾಗುತ್ತಿದೆ.

ಕಾಂಗ್ರೆಸ್ ಗೆಲುವು ಹೊಗಳಿದ ಶರದ್!
ಅಂದಹಾಗೆ ಕಾಂಗ್ರೆಸ್ ಕರ್ನಾಟಕದಲ್ಲಿ ಸಾಧಿಸಿರುವ ಗೆಲುವನ್ನ ಶರದ್ ಪವಾರ್ ಹಾಡಿ ಹೊಗಳಿದ್ದಾರೆ. ಅದೇ ರೀತಿ ದೇಶಕ್ಕೆ 'ಕರ್ನಾಟಕ ಮಾದರಿ' ಆಗಬೇಕೆಂದು ಶರದ್ ಪವಾರ್ ಹೇಳಿದ್ದಾರೆ. 'ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಅನುಸರಿಸಿದ ತಂತ್ರಗಾರಿಕೆ ಮಾದರಿ ಇತರ ರಾಜ್ಯಗಳಲ್ಲೂ ಅಳವಡಿಸಿಕೊಳ್ಳಬೇಕು. ಈ ಪರಿಸ್ಥಿತಿಯಲ್ಲಿ ಇಂತಹ ಮಾದರಿ ಅನುಸರಿಸುವುದು ಅಗತ್ಯ' ಎಂದಿದ್ದಾರೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್. ಈ ಮೂಲಕ ಕರ್ನಾಟಕದ ಚುನಾವಣಾ ಫಲಿತಾಂಶ ದೇಶದಲ್ಲೇ ಸಂಚಲನ ಸೃಷ್ಟಿಸಿದೆ.
ಶರದ್ ಪವಾರ್ ಮಹತ್ವದ ಮಾತು
ಸಿಪಿಐ ನಾಯಕ ಡಿ.ರಾಜಾ ಅವರೊಂದಿಗೆ ಚರ್ಚೆ ನಡೆಸಿದ ನಂತರ ಶರದ್ ಪವಾರ್ ಮಾತನಾಡಿದರು. ಈ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಕಂಡ ರೀತಿಯನ್ನ ಶ್ಲಾಘಿಸಿದರು. 'ಕರ್ನಾಟಕ ಫಲಿತಾಂಶ ಉತ್ತಮ ಸಂದೇಶ ರವಾನಿಸಿದೆ. ಕರ್ನಾಟಕದಲ್ಲಿ ಬಿಜೆಪಿಯನ್ನ ಕಾಂಗ್ರೆಸ್ ಮಣಿಸಿದೆ. ಬೇರೆ ರಾಜ್ಯಗಳಲ್ಲೂ ಕರ್ನಾಟಕದ ರೀತಿಯೇ ಚುನಾವಣೆ ಎದುರಿಸಬೇಕು. ಇದಕ್ಕಾಗಿ ಸಮಾನ ಮನಸ್ಕ ಪಕ್ಷಗಳು ಒಂದಾಗಬೇಕು' ಎಂದು ತಿಳಿಸಿದ್ದಾರೆ. ಅತ್ತ ವಿರೋಧ ಪಕ್ಷಗಳ ನಾಯಕರನ್ನು ಒಗ್ಗೂಡಿಸುವ ಕೆಲಸ ನಡೆಯುವಾಗಲೇ ಪವಾರ್ ಈ ಮಾತು ಹೇಳಿದ್ದಾರೆ.
ವಿರೋಧ ಪಕ್ಷಗಳ ಒಗ್ಗಟ್ಟಿನ ಮಂತ್ರ
2024ರ ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಮಹಾಮೈತ್ರಿ ರೂಪಿಸಲು ಪ್ರಯತ್ನ ಸಾಗಿದೆ. ಒಕ್ಕೂಟ ರೂಪಿಸುವ ಮುಂದಾಳತ್ವ ವಹಿಸಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ದೇಶದ ವಿವಿಧೆಡೆ ಓಡಾಡಿ ವಿಪಕ್ಷಗಳ ನಾಯಕರ ಜತೆ ಹೊಂದಾಣಿಕೆಗೆ ಚರ್ಚಿಸುತ್ತಿದ್ದಾರೆ. ಈ ನಡುವೆ ಶರದ್ ಪವಾರ್ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ಕರ್ನಾಟಕ ವಿಧಾನಸಭೆ ಎಲೆಕ್ಷನ್ ರಿಸಲ್ಟ್ ದೇಶದಲ್ಲೇ ಭಾರಿ ಸಂಚಲನ ಸೃಷ್ಟಿಸಿದಂತೆ ಕಾಣುತ್ತಿದೆ.
ಶರದ್ ಪವಾರ್, ರಾಹುಲ್ ಭೇಟಿ!
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮಧ್ಯೆ ಕಳೆದ ತಿಂಗಳು ವಿಪಕ್ಷಗಳ ಒಗ್ಗಟ್ಟಿನ ವಿಚಾರಕ್ಕೆ ಗಂಭೀರ ಚರ್ಚೆ ನಡೆದಿತ್ತು. ಲೋಕಸಭೆ ಎಲೆಕ್ಷನ್ ವೇಳೆ ಬಿಜೆಪಿ ವಿರುದ್ಧ ರಣತಂತ್ರ ಹೆಣೆಯುವ ಸಲುವಾಗಿ ಎನ್‌ಸಿಪಿ ವರಿಷ್ಠ ಪವಾರ್ ಭೇಟಿ ನೀಡಿ ಕೈ ನಾಯಕರ ಜತೆ ಮಾತುಕತೆ ನಡೆಸಿದ್ದರು. ಸಮಾನ ಮನಸ್ಕ ಪಕ್ಷಗಳು ಒಗ್ಗೂಡಬೇಕೆಂಬ ವಿಷಯ ಮೊದಲಿನಿಂದ ಚರ್ಚೆಯಲ್ಲಿತ್ತು. ಈಗಲೂ ಶರದ್ ಪವಾರ್ ಆ ಮಾತನ್ನು ಪರೋಕ್ಷವಾಗಿ ಮತ್ತೆ ಪ್ರಸ್ತಾಪಿಸಿದ್ದು ವಿಶೇಷ.
ಒಟ್ನಲ್ಲಿ ಎಲ್ಲೆಲ್ಲೂ ಸಂಚಲನ ಸೃಷ್ಟಿಸಿದ್ದ ಕರ್ನಾಟಕ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ 135 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ಸಂಪೂರ್ಣ ಬಹುಮತದ ಸರ್ಕಾರ ರಚಿಸಲು ಸಿದ್ಧವಾಗಿದೆ. ಇದೇ ಹೊತ್ತಲ್ಲಿ ಭಾರತದ ಮೂಲೆ ಮೂಲೆಯಲ್ಲೂ ಕರ್ನಾಟಕ ಚುನಾವಣೆ ಸದ್ದು ಮಾಡುತ್ತಿದ್ದು, ರಾಷ್ಟ್ರಮಟ್ಟದ ರಾಜಕೀಯದಲ್ಲೂ ಕರ್ನಾಟಕ ಚುನಾವಣೆ ಪ್ರಭಾವ ಬೀರುವ ಮುನ್ಸೂಚನೆ ನೀಡಿದೆ.












Click it and Unblock the Notifications