INDIA ಮೈತ್ರಿಯಲ್ಲಿ ಮಹಾ ಬಿರುಕು: ನಮ್ಮದೂ ಏಕಾಂಗಿ ಸ್ಪರ್ಧೆ ಎಂದು ಮಮತಾ ಬ್ಯಾನರ್ಜಿ
ಕೋಲ್ಕತಾ,ಜನವರಿ 24: ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸಿದ್ದ ಐಎನ್‌ಡಿಐಎ ಮೈತ್ರಿಕೂಟಕ್ಕೆ ಆರಂಭದಲ್ಲಿ ಬಿಗ್ ಶಾಕ್ ಎದುರಾಗಿದೆ. ಐಎನ್‌ಡಿಐಎ ಮೈತ್ರಿಕೂಟಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಘಾತ ನೀಡಿದ್ದಾರೆ.
ಹೌದು, ಲೋಕಸಭಾ ಚುನಾವಣೆ ಹಿನ್ನೆಲೆ ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಕುರಿತಾದ ಮಾತುಕತೆ ನಡೆಸುತ್ತಿರುವ ನಡುವೆಯೇ ಬಂಗಾಳದ ಎಲ್ಲಾ 42 ಲೋಕಸಭೆ ಕ್ಷೇತ್ರಗಳಲ್ಲಿ ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ. ಫಲಿತಾಂಶ ಪ್ರಕಟವಾದ ಬಳಿಕವಷ್ಟೇ ಪ್ಯಾನ್ ಇಂಡಿಯಾ ಮೈತ್ರಿಯನ್ನು ಪರಿಗಣಿಸುವುದಾಗಿ ದೀದಿ ಹೇಳಿದ್ದಾರೆ.

ನನಗೂ ಕಾಂಗ್ರೆಸ್‌ಗೂ ಯಾವ ಸಂಬಂಧವೂ ಇಲ್ಲ. ನಾವು ಒಂಟಿಯಾಗಿ ಹೋರಾಡಲಿದ್ದೇವೆ. ಚುನಾವಣೆ ಬಳಿಕ ರಾಷ್ಟ್ರ ಮಟ್ಟದ ಮೈತ್ರಿಯನ್ನು ನಿರ್ಧರಿಸಲಿದ್ದೇವೆ ಎಂದಿರುವ ಮಮತಾ, ಒಪ್ಪಂದಗಳ ಬಗ್ಗೆ ಕಾಂಗ್ರೆಸ್ ಜತೆ ಮಾತನಾಡಿಲ್ಲ ಎಂದಿದ್ದಾರೆ. ನಾವು ಜಾತ್ಯತೀತ ಪಕ್ಷ ಮತ್ತು ಬಂಗಾಳದಲ್ಲಿ ನಾವೇ ಬಿಜೆಪಿಯನ್ನು ಸೋಲಿಸುತ್ತೇವೆ.
ಗುರುವಾರ ಬಂಗಾಳವನ್ನು ಪ್ರವೇಶಿಸಲಿರುವ ಕಾಂಗ್ರೆಸ್‌ನ ಭಾರತ ಜೋಡೋ ನ್ಯಾಯ ಯಾತ್ರೆ ಮತ್ತು ಸಂಸದ ರಾಹುಲ್ ಗಾಂಧಿ ವಿರುದ್ಧ ಕೂಡ ಮಮತಾ ಕಿಡಿಕಾರುವ ಮೂಲಕ, ಆಕ್ರೋಶ ಹೊರಹಾಕಿದ್ದಾರೆ. ಅವರು ನನ್ನ ರಾಜ್ಯಕ್ಕೆ ಬರುತ್ತಿದ್ದಾರೆ. ನನಗೆ ಮಾಹಿತಿ ನೀಡುವ ಸೌಜನ್ಯವೂ ಅವರಲ್ಲಿ ಇಲ್ಲ. ನಾನು ಐಎನ್‌ಡಿಐಎ ಮೈತ್ರಿಕೂಟದ ಭಾಗವಾಗಿದ್ದೇನೆ. 'ದೀದಿ, ನಾನು ನಿಮ್ಮ ರಾಜ್ಯಕ್ಕೆ ಬರುತ್ತಿದ್ದೇನೆ' ಎಂದು ಅವರು ಸೌಜನ್ಯಕ್ಕಾದರೂ ನನಗೆ ಮಾಹಿತಿ ನೀಡಬೇಕಿತ್ತು ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾನು ಅವರಿಗೆ ಏನೆಲ್ಲಾ ಪ್ರಸ್ತಾವನೆಗಳನ್ನು ನೀಡಿದ್ದೇನೋ, ಅವರು ಎಲ್ಲವನ್ನೂ ತಿರಸ್ಕರಿಸಿದ್ದಾರೆ. ಹೀಗಾಗಿ ನಾವು ಬಂಗಾಳದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇವೆ. ಭಾರತದಲ್ಲಿ ಐಎನ್‌ಡಿಐಎ ಇರಲಿದೆ. ಆದರೆ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸ್ಪರ್ಧಿಸಲಿದೆ. ಬಂಗಾಳದಲ್ಲಿ ಬಿಜೆಪಿಗೆ ಟಿಎಂಸಿ ಮಾತ್ರವೇ ಪಾಠ ಕಲಿಸಬಲ್ಲದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ 10- 12 ಲೋಸಕಭೆ ಸೀಟುಗಳನ್ನು ಬಿಟ್ಟುಕೊಡುವಂತೆ ಕಾಂಗ್ರೆಸ್ 'ಸಮರ್ಥನೀಯವಲ್ಲದ' ಬೇಡಿಕೆ ಇರಿಸಿದೆ ಎಂದು ಮಮತಾ, 2014ರಲ್ಲಿ ನಾಲ್ಕು ಮತ್ತು 2019ರ ಚುನಾವಣೆಯಲ್ಲಿ ಕೇವಲ 2 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಕಂಡಿತ್ತು. ಈ ಶೋಚನೀಯ ದಾಖಲೆ ಇರುವುದರಿಂದ 2 ಸೀಟುಗಳನ್ನಷ್ಟೇ ನೀಡಬಹುದು ಎಂದು ಮಮತಾ ಹೇಳಿದ್ದರು.












Click it and Unblock the Notifications