ಹಲವು ಯಾತ್ರಿಗಳ ಪ್ರಾಣ ಉಳಿಸಿದ ಬಸ್ ಚಾಲಕ ಸಲೀಂ
ಶ್ರೀನಗರ, ಜುಲೈ 11: ಅಮರನಾಥ ಯಾತ್ರೆ ಮುಗಿಸಿಕೊಂಡು ಹಿಂತಿರುಗುತ್ತಿದ್ದ ಬಸ್ ಮೇಲೆ ಉಗ್ರರ ದಾಳಿ ಕಹಿ ಘಟನೆಗೆ ಎಲ್ಲೆಡೆಯಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.
ಸೋಮವಾರ ರಾತ್ರಿ ಅನಂತ್ ನಾಗ್ ಜಿಲ್ಲೆಯ ಸೂಕ್ಷ್ಮ ಪ್ರದೇಶದಲ್ಲಿ ವಾಹನ ಚಲಾಯಿಸಿದ್ದು ತಪ್ಪು ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಉಗ್ರರ ದಾಳಿಯನ್ನು ಎದುರಿಸಿ ಪ್ರಯಾಣಿಕರನ್ನು ಸುರಕ್ಷಿತಾ ತಾಣಕ್ಕೆ ಕೊಂಡೊಯ್ದ ಚಾಲಕ ಸಲೀಂ ಈಗ ಹೀರೋ ಆಗಿ ಕಾಣುತ್ತಿದ್ದಾನೆ.

'ನಾನು ಪ್ರಯಾಣಿಕರೊಂದಿಗೆ ಮಾತನಾಡಿದೆ. ಈ ದಾಳಿ ನಡೆದಾಗ ಹಲವಾರು ಮಂದಿ ನಿದ್ದೆ ಮಾಡುತ್ತಿದ್ದರು. ಬಸ್ ನ ಎರಡು ಕಡೆಗಳಿಂದ ದಾಳಿ ಶುರುವಾಗುತ್ತಿದ್ದಂತೆ ಸಲೀಂ, ವಾಹನದ ವೇಗ ಹೆಚ್ಚಿಸಿಕೊಂಡು ಮುಂದಕ್ಕೆ ಸಾಗಿದ್ದಾನೆ. ಮುಂದೆ ಆರ್ಮಿ ಕ್ಯಾಂಪ್ ಸಿಗುವ ತನಕ ಬಸ್ ನಿಲ್ಲಿಸಿಲ್ಲ. ಒಂದು ವೇಳೆ ದಾಳಿ ನಡೆದಾಗ ಬಸ್ ನಿಲ್ಲಿಸಿದ್ದರೆ ಹಲವಾರು ಮಂದಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯಿತ್ತು' ಎಂದು ಕಾಶ್ಮೀರದ ಐಜಿಪಿ ಮುನೀರ್ ಖಾನ್ ಅವರು ಒನ್ಇಂಡಿಯಾಕ್ಕೆ ತಿಳಿಸಿದ್ದಾರೆ.
ಗುಜರಾತಿನಲ್ಲಿ ಹರ್ಷ: ಗುಜರಾತಿನ ವಲ್ಸದ್ ನಲ್ಲಿ ಸಲೀಂ ಕುಟುಂಬದಲ್ಲಿ ಸಂತಸ ಮೇರೆ ಮೀರಿದೆ. ಉಗ್ರರ ಗುಂಡಿನ ದಾಳಿಯ ನಡುವೆ ಯಾತ್ರಾರ್ಥಿಗಳನ್ನು ಬಚಾವ್ ಮಾಡಿದ ಸಲೀಂ ಧೈರ್ಯ ಮೆಚ್ಚಬೇಕು. ಏಳು ಜನರ ಪ್ರಾಣವನ್ನು ಉಳಿಸಲಾಗಲಿಲ್ಲ. 50 ಮಂದಿಯನ್ನು ಸುರಕ್ಷಿತ ತಾಣಕ್ಕೆ ತಲುಪಿಸಿ ನಂತರ ನಮಗೆ ಫೋನ್ ಕರೆ ಮಾಡಿದ ಎಂದು ಸಲೀಂ ಅವರ ಕಸೀನ್ ಹೇಳಿದ್ದಾರೆ.
ನೋಂದಣಿಯಾಗಿತ್ತು: ಗುಜರಾತ್ ಮೂಲದ ಈ ಬಸ್ ಈ ಮಾರ್ಗದಲ್ಲಿ ಸಂಚರಿಸಲು ಪರವಾನಗಿ ಪಡೆದಿರಲಿಲ್ಲ. ಅಮರನಾಥ್ ಯಾತ್ರೆ ಸಮಿತಿಯ ಅನುಮತಿ ಪಡೆದಿರಲಿಲ್ಲ ಎಂಬ ಸುದ್ದಿಯನ್ನು ಕಾಶ್ಮೀರದ ಪೊಲೀಸರು ಅಲ್ಲಗೆಳೆದಿದ್ದಾರೆ. ದರ್ಶನ ಮುಗಿಸಿಕೊಂಡು ಪೂರ್ವ ನಿಗದಿತ ಮಾರ್ಗದಲ್ಲೇ ಬಸ್ ಸಂಚರಿಸುತ್ತಿತ್ತು. ಆದರೆ, ಮಾರ್ಗಮಧ್ಯದಲ್ಲಿ ಇತರೆ ಯಾತ್ರಾ ಸ್ಥಳಗಳನ್ನು ನೋಡಬೇಕಿದ್ದರಿಂದ ಬದಲಿ ಮಾರ್ಗದಲ್ಲಿ ಹೋಗಿ ಮುಂದೆ ಮುಖ್ಯರಸ್ತೆಗೆ ಸಂಪರ್ಕ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.












Click it and Unblock the Notifications