ಉಳ್ಳವರು ಮೀಸಲಾತಿ ಬಿಟ್ಟುಕೊಡಿ, ದುರ್ಬಲರಿಗೆ ಲಾಭ ಸಿಗಲಿ: RSS ಮುಖ್ಯಸ್ಥ ಮೋಹನ್ ಭಾಗವತ್ ಕರೆ
ಮುಂಬೈ: "ಮೀಸಲಾತಿ ಎಂದರೆ ಹಿಂದುಳಿದ ಮತ್ತು ಅವಕಾಶವಂಚಿತ ವರ್ಗಗಳ ಏಳಿಗೆಗಾಗಿ ಇರುವ ವ್ಯವಸ್ಥೆಯೇ ಹೊರತು, ಅದೊಂದು ಶಾಶ್ವತ ವ್ಯವಸ್ಥೆಯಲ್ಲ. ಈಗಾಗಲೇ ಮೀಸಲಾತಿಯ ಲಾಭ ಪಡೆದು ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರಗತಿ ಸಾಧಿಸಿರುವ ಉಳ್ಳವರು, ಸ್ವಯಂಪ್ರೇರಣೆಯಿಂದ ಮೀಸಲಾತಿ ಸೌಲಭ್ಯವನ್ನು ಬಿಟ್ಟುಕೊಡಬೇಕು. ಆ ಮೂಲಕ ಸಮಾಜದ ಕಟ್ಟಕಡೆಯ ದುರ್ಬಲರಿಗೆ ಅದರ ಲಾಭ ಸಿಗುವಂತೆ ಮಾಡಬೇಕು" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಕರೆ ನೀಡಿದ್ದಾರೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ದೆಹಲಿಯಲ್ಲಿ ನಡೆದ 'ಜೆನ್ ಜೀ'ಹೋರಾಟವನ್ನೂ ಸಮರ್ಥಿಸಿಕೊಂಡಿದ್ದಾರೆ.

ಮೀಸಲಾತಿ ಶಾಶ್ವತ ವ್ಯವಸ್ಥೆಯಲ್ಲ
ಸಮಾಜದಲ್ಲಿರುವ ಅಸಮಾನತೆ ಹಾಗೂ ತಾರತಮ್ಯವನ್ನ ತೊಡೆದುಹಾಕಲು ಮೀಸಲಾತಿಯನ್ನು ಜಾರಿಗೆ ತರಲಾಗಿದೆ. ಎಲ್ಲಿಯವರೆಗೆ ಸಮಾಜದಲ್ಲಿ ತಾರತಮ್ಯ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಮುಂದುವರಿಯಬೇಕು ಎಂಬುದರಲ್ಲಿ ಎರಡನೇ ಮಾತಿಲ್ಲ. ಆದರೆ ಮೀಸಲಾತಿ ಎನ್ನುವುದು ಶಾಶ್ವತವಾಗಿ ಇರುವಂತಹ ವ್ಯವಸ್ಥೆಯಲ್ಲ ಎಂದು ಮೋಹನ್ ಭಾಗವತ್ ಸ್ಪಷ್ಟಪಡಿಸಿದರು.
"ಮೀಸಲಾತಿಯ ಫಲಾನುಭವಿಗಳಲ್ಲೇ ಕೆಲವರು ಈಗಾಗಲೇ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. 'ನಮಗೆ ಸಾಕಷ್ಟು ಸೌಲಭ್ಯ ಸಿಕ್ಕಿದೆ, ಈಗ ಆ ಸೌಲಭ್ಯಗಳನ್ನ ಸಮಾಜದ ಇತರ ದುರ್ಬಲರಿಗೂ ವಿಸ್ತರಿಸುವ ಸಮಯ ಬಂದಿದೆ' ಎಂದು ಅವರೇ ಯೋಚಿಸಬೇಕಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಮೀಸಲಾತಿಯಿಂದ ಉನ್ನತ ಮಟ್ಟಕ್ಕೆ ಬೆಳೆದ ಬಲಾಢ್ಯರು ಸ್ವಯಂಪ್ರೇರಣೆಯಿಂದ ಸೌಲಭ್ಯಗಳನ್ನ ಬಿಟ್ಟುಕೊಟ್ಟಾಗ ಮಾತ್ರ , ನಿಜವಾದ ಅವಕಾಶವಂಚಿತರಿಗೆ ನ್ಯಾಯ ಒದಗಿಸಲು ಸಾಧ್ಯ" ಎಂದು ಅವರು ಅಭಿಪ್ರಾಯಪಟ್ಟರು.
ಜೆನ್ ಜೀ ಪ್ರತಿಭಟನೆ
ಇತ್ತೀಚೆಗೆ ದೆಹಲಿಯಲ್ಲಿ ನೀಟ್ ಪರೀಕ್ಷಾ ಅಕ್ರಮಗಳು, ಶಿಕ್ಷಣ ವ್ಯವಸ್ಥೆಯ ಲೋಪಗಳು ಹಾಗೂ ಯುವಜನತೆಯ ಸಮಸ್ಯೆಗಳನ್ನ ಖಂಡಿಸಿ ಜೆನ್ ಜೀ ಯುವಕರು ನಡೆಸಿದ ಪ್ರತಿಭಟನೆಗಳು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಹೋರಾಟದ ಬಗ್ಗೆ ಪರ-ವಿರೋಧ ಚರ್ಚೆಗಳಾಗಿದ್ದವು. ಈ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸಿದ ಮೋಹನ್ ಭಾಗವತ್, ಪ್ರತಿಭಟಿಸಿದ ತಕ್ಷಣ ಯುವಕರನ್ನು 'ದೇಶ ವಿರೋಧಿಗಳು' ಎಂದು ಕರೆಯುವುದು ತಪ್ಪು ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 2,000ಕ್ಕೂ ಹೆಚ್ಚು ಜೆನ್ ಜೀ ಮತ್ತು ಜೆನ್ ಆಲ್ಫಾ ಪೀಳಿಗೆಯವರನ್ನಾ ಉದ್ದೇಶಿಸಿ ಮಾತನಾಡಿದ ಅವರು, "ಜೆನ್ ಝೀ ಯುವಕರು ಕೂಡ ನಮ್ಮ ಸಮಾಜದ ಮಕ್ಕಳೆ. ಅವರು ತಮ್ಮ ಭವಿಷ್ಯದ ಕಳವಳಗಳ ಬಗ್ಗೆ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆಂದರೆ, ಸರ್ಕಾರ ಮತ್ತು ಸಮಾಜ ಅವರ ದೂರನ್ನು ತಾಳ್ಮೆಯಿಂದ ಆಲಿಸಿ ಪರಿಹರಿಸುವ ಕೆಲಸ ಮಾಡಬೇಕು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯು ಸಂವಾದದ ಒಂದು ನ್ಯಾಯಸಮ್ಮತ ರೂಪವಾಗಿದೆ. ಭಾರತದ ಶಿಕ್ಷಣ ವ್ಯವಸ್ಥೆಯ ಕುರಿತು ಜೆನ್ ಜೀ ಪೀಳಿಗೆ ವ್ಯಕ್ತಪಡಿಸುತ್ತಿರುವ ಆತಂಕಗಳು ಮತ್ತು ಅಹವಾಲುಗಳು ಸಂಪೂರ್ಣ ನ್ಯಾಯಯುತವಾಗಿವೆ. ಅವರ ಪ್ರಾಮಾಣಿಕತೆಯನ್ನ ನಾನು ಗೌರವಿಸುತ್ತೇನೆ" ಎಂದು ಭಾಗವತ್ ಹೇಳಿದರು.
ಯುವಜನತೆಯ ಹೋರಾಟಗಳು ಸಮಾಜದಲ್ಲಿ ಒಡಕು ಮೂಡಿಸುವ ಬದಲು ಒಗ್ಗಟ್ಟನ್ನು ಬಲಪಡಿಸುವಂತಿರಬೇಕು ಎಂದು ಸಲಹೆ ನೀಡಿದ ಭಾಗವತ್, ನಿಜವಾದ ನಾಯಕತ್ವದ ಗುಣಲಕ್ಷಣಗಳನ್ನು ವಿವರಿಸಿದರು. "ನಾಯಕತ್ವ ಎಂದರೆ ಕೇವಲ ವೇದಿಕೆ ಮೇಲೆ ನಿಂತು ಭಾಷಣ ಮಾಡುವುದಲ್ಲ ಅಥವಾ ಚುನಾವಣೆಗಳಲ್ಲಿ ಗೆಲ್ಲುವುದಲ್ಲ. ನಿಜವಾದ ನಾಯಕನಾದವನು ವ್ಯವಸ್ಥೆಯ ಒಳಗಿದ್ದುಕೊಂಡು ಹಿಂಬದಿಯಿಂದ ಮುನ್ನಡೆಸುತ್ತಾನೆ. ನಾಯಕನ ಮುಖ್ಯ ಉದ್ದೇಶ ಜನರನ್ನು ಬೆಳಕಿನೆಡೆಗೆ ಕೊಂಡೊಯ್ಯುವುದು ಮತ್ತು ಹೊಸ ನಾಯಕರನ್ನ ಸೃಷ್ಟಿಸುವುದೇ ಹೊರತು, ಕೇವಲ ತನ್ನ ಹಿಂದೆ ಸುತ್ತುವ ಅನುಯಾಯಿಗಳನ್ನ ಸೃಷ್ಟಿಸುವುದಲ್ಲ" ಎಂದು ಪ್ರತಿಪಾದಿಸಿದರು.


Click it and Unblock the Notifications
