ಬಿಜೆಪಿ ಕಾರ್ಯಕರ್ತ ರವೀಂದ್ರ ಜಡೇಜಾ ಸಿಎಸ್‌ಕೆ ಗೆಲ್ಲಲು ನೆರವಾದರು: ಕ್ರೀಡೆಯಲ್ಲಿ ರಾಜಕೀಯ ಬೆರೆಸಿದ ಅಣ್ಣಾಮಲೈ
ಚೆನ್ನೈ, ಮೇ 30: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗೆಲುವು ಸಾಧಿಸಿದೆ. ಕೊನೆಯ ಎರಡು ಎಸೆತಗಳಲ್ಲಿ ಒಂದು ಬೌಂಡರ್ ಹಾಗೂ ಒಂದು ಸಿಕ್ಸರ್ ಹೊಡೆಯುವ ಮೂಲಕ ರವೀಂದ್ರ ಜಡೇಜಾ ಅವರು ಐಪಿಎಲ್ ಪೈನಲ್ ಪಂದ್ಯವನ್ನು ಗೆಲ್ಲಲು ಸಿಎಸ್‌ಕೆಗೆ ನೆರವಾದರು. ಈ ವಿಚಾರವಾಗಿ ಮಾತನಾಡಿರುವ ತಮಿಳುನಾಡು ಬಿಜೆಪಿ ಘಟಕದ ಮುಖ್ಯಸ್ಥ ಅಣ್ಣಾಮಲೈ ಅವರು ಕ್ರೀಡೆಯಲ್ಲಿ ರಾಜಕೀಯ ಬೆರೆಸಲು ಯತ್ನಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ರವೀಂದ್ರ ಜಡೇಜಾ ಅವರು ಹೆಚ್ಚಿನ ಸಂಖ್ಯೆಯ ಐಪಿಎಲ್ ಗೆಲ್ಲಲು ಸಿಎಸ್‌ಕೆಗೆ ನೆರವಾಗಿದ್ದಾರೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು ಈ ಮಾತುಗಳನ್ನು ಹೇಳಿದ್ದಾರೆ.

ರೋಚಕ ಹಣಾಹಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿತು. ಅಂತಿಮವಾಗಿ, ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಪಂದ್ಯದ ಕೊನೆಯ ಎರಡು ಎಸೆತಗಳಲ್ಲಿ 10 ರನ್ ಗಳಿಸಿದರು. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಸಿಎಸ್‌ಕೆ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವನ್ನು ವಿರೋಚಿತವಾಗಿ ಸೋಲಿಸಿತು.
'ಜಡೇಜಾ ಬಿಜೆಪಿ ಕಾರ್ಯಕರ್ತರು ಮತ್ತು ಅವರು ಗುಜರಾತ್ ಮೂಲದವರು. ಅವರ ಪತ್ನಿ ಬಿಜೆಪಿ ಶಾಸಕಿ. ತಮಿಳಿಗನಾಗಿ ನನಗೂ ಹೆಮ್ಮೆ ಇದೆ. ಅಹಮದಾಬಾದ್‌ನಲ್ಲಿ ಗುಜರಾತಿನವರಿಗಿಂತ ಹೆಚ್ಚು ತಮಿಳು ಜನರಿದ್ದರು. ನಾನು ಇದಕ್ಕಾಗಿ ಹೆಮ್ಮೆ ಪಡುತ್ತೇನೆ' ಎಂದು ಅಣ್ಣಾಮಲೈ ಹೇಳಿದರು.
ಸಿಎಸ್‌ಕೆ ಗೆಲುವು 'ಗುಜರಾತ್ ಮಾದರಿಯ ಮೇಲೆ ದ್ರಾವಿಡ ಮಾದರಿಯ ವಿಜಯ' ಎಂದು ಡಿಎಂಕೆ ಸಂದೇಶದ ಕುರಿತು ಸಂದರ್ಶಕರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಗುಜರಾತ್ ಟೈಟಾನ್ಸ್ ಪರ ಆಡಿದ ತಮಿಳಿನ ಸಾಯಿ ಸುದರ್ಶನ್ ಅವರನ್ನು ಅಣ್ಣಾಮಲೈ ಶ್ಲಾಘಿಸಿದರು. '96 ರನ್ ಗಳಿಸಿದ ತಮಿಳಿಗ, ನಾವು ಅವರ ಬಗ್ಗೆಯೂ ಸಹ ಹೆಮ್ಮೆಪಡುತ್ತೇವೆ. ಸಿಎಸ್‌ಕೆಯಲ್ಲಿ ಒಬ್ಬ ತಮಿಳಿಗನೂ ಆಡಿಲ್ಲ. ಆದರೆ ಎಂಎಸ್ ಧೋನಿಯಿಂದಾಗಿ ನಾವು ಇನ್ನೂ ಸಿಎಸ್‌ಕೆಯನ್ನು ಇಷ್ಟಪಡುತ್ತೇವೆ. ಬಿಜೆಪಿ ಕಾರ್ಯಕರ್ತರೊಬ್ಬರು ಸಿಎಸ್‌ಕೆ ಗೆಲುವಿಗಾಗಿ ಶ್ರಮಿಸಿರುವುದು ನಮಗೆ ಹೆಮ್ಮೆ ತಂದಿದೆ ಎಂದರು.
ಜಡೇಜಾ ಅವರು ಬಿಜೆಪಿಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ. ಆದರೆ, ಅವರು ಬಿಜೆಪಿ ಸದಸ್ಯರಾಗಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ. ಅವರ ಪತ್ನಿ ರಿವಾಬಾ ಜಡೇಜಾ ಗುಜರಾತ್‌ನ ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿದ್ದಾರೆ. ರಿವಾಬಾ 2019 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು ಮತ್ತು 2022 ರಲ್ಲಿ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ 80,000 ಮತಗಳ ಅಂತರದಿಂದ ಗೆದ್ದರು.












Click it and Unblock the Notifications