
500 ಕೆಜಿ ಗಾಂಜಾ ತಿಂದ ಇಲಿಗಳು: ಕೋರ್ಟ್ ಮೆಟ್ಟಿಲೇರಿದ ಪೊಲೀಸರು
ಮಥುರಾ ನವೆಂಬರ್ 28: ಇಲಿಗಳೂ ಗಾಂಜಾ ತಿನ್ನುತ್ತವೆಯೇ? ಇದು ಸ್ವತಃ ಒಂದು ವಿಚಿತ್ರ ಪ್ರಶ್ನೆ. ಆದರೆ ಮಥುರಾದಲ್ಲಿ ಇಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, 500 ಕೆಜಿ ಗಾಂಜಾವನ್ನು ಇಲಿಗಳು ತಿಂದಿವೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಮಥುರಾ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಅಷ್ಟಕ್ಕೂ ಪೊಲೀಸರು ನ್ಯಾಯಾಲಯದ ಮುಂದೆ ಹೇಳಿದ್ದೇನು?
ಎರಡು ಪ್ರಕರಣಗಳಲ್ಲಿ ಒಟ್ಟು 586 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಈ ವಶಪಡಿಸಿಕೊಂಡ ಗಾಂಜಾವನ್ನು ಹೈವೇ ಪೊಲೀಸ್ ಠಾಣೆಗಳ ಗೋಡೌನ್‌ಗಳಲ್ಲಿ ಇರಿಸಲಾಗಿತ್ತು. ಆದರೆ ಈ ಗಾಂಜಾವನ್ನು ಇಲಿಗಳು ತಿಂದು ತೇಗಿವೆ. ಇದರಿಂದಾಗಿ ಮಥುರಾ ಪೊಲೀಸರು ಇಲಿಗಳ ಕಾಟದಿಂದ ಎಲ್ಲಾ ಗಾಂಜಾ ನಾಶವಾಗಿದೆ ಎಂದು ನಾರ್ಕೋಟಿಕ್ಸ್ ಬ್ಯೂರೋಗೆ ತಿಳಿಸಿದ್ದಾರೆ. ಜೊತೆಗೆ ಈ ವಿಷಯವನ್ನು ಪೊಲೀಸರು ನಾರ್ಕೋಟಿಕ್ಸ್ ವಿಶೇಷ ನ್ಯಾಯಾಲಯದಲ್ಲಿ ಪ್ರತಿಪಾದಿಸಿದ್ದಾರೆ.

ಗಾಂಜಾ ನಾಶಪಡಿಸಿದ ಪೊಲಿಸರು
ಇಲಿಗಳು ನೆಲ ಕೊರೆದು ಸುರಂಗ ಮಾಡಿಕೊಂಡು ಗೋಡನ್‌ನ ಒಳಗೆ ಬಂದಿದೆ. ಜೊತೆಗೆ ಇಲ್ಲಿಟ್ಟಿದ್ದ ಗಾಂಜಾವನ್ನು ತಿಂದಿದೆ. ಇದು ಗಮನಕ್ಕೆ ಬಂದ ಬಳಿಕ ನಾವು ಉಳಿದ ಗಾಂಜಾವನ್ನೂ ನಾಶಪಡಿಸಿದ್ದೇವೆ ಎಂದು ಪೊಲೀಸ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಇಲಿ ನಿರೋಧಕ ಸಂಗ್ರಹಣೆಗೆ ಸ್ಥಳವಿಲ್ಲ. ಇದರಿಂದಾಗಿ ಇಲಿಗಳು ಗೋಡನ್ ಒಳಗೆ ಬರುತ್ತಿವೆ.

ಕೋರ್ಟ್ ಮೆಟ್ಟಿಲೇರಿದ ಪೊಲೀಸರು
'ಕೆಲ ದಿನಗಳ ಹಿಂದೆ ನಾರ್ಕೋಟಿಕ್ಸ್ ಡ್ರಗ್ಸ್ ಆ್ಯಂಡ್ ಸೈಕೋಟ್ರೊಪಿಕ್ ಸಬ್ಸ್ಟೆನ್ಸ್ ಆಕ್ಟ್ (1985)ಅಡಿ ದಾಖಲಾಗಿದ್ದ ಪ್ರಕರಣದಲ್ಲಿ 586 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಇದರಲ್ಲಿ 500 ಕೆ.ಜಿ.ಗೂ ಹೆಚ್ಚು ಗಾಂಜಾವನ್ನು ಇಲಿಗಳು ತಿಂದಿವೆ' ಎಂದು ವಶಪಡಿಸಿಕೊಂಡ ಗಾಂಜಾವನ್ನು ಹಾಜರುಪಡಿಸುವಂತೆ ನ್ಯಾಯಾಲಯ ಕೇಳಿದಾಗ ಪೊಲೀಸರು ತಿಳಿಸಿದ್ದಾರೆ. ಮಥುರಾ ಪೊಲೀಸರು ಈ ಬಗ್ಗೆ ಸಂಪೂರ್ಣ ವರದಿಯನ್ನು ವಿಶೇಷ ನಾರ್ಕೋಟಿಕ್ ಡ್ರಗ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ (1985) ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇದರಲ್ಲಿ 500 ಕೆಜಿಗೂ ಹೆಚ್ಚು ಗಾಂಜಾವನ್ನು ಇಲಿಗಳು ತಿಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಂಜಾ ಸೇವನೆ ಬಳಿಕ ಸೋಮಾರಿಯಾಗುವ ಇಲಿಗಳು
ಪೊಲೀಸರು ವಶಪಡಿಸಿಕೊಂಡ ಗಾಂಜಾ ನಾಶಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸಾಕ್ಷ್ಯ ಕೇಳಿದೆ. ಇದರೊಂದಿಗೆ ಇಲಿಗಳನ್ನು ನಾಶಪಡಿಸಲು ನ್ಯಾಯಾಲಯ ಆದೇಶಿಸಿದೆ. ಈ ಸಂಬಂಧ ವರದಿ ನೀಡಲು ಪೊಲೀಸ್ ತಂಡಕ್ಕೆ ಕಾಲಾವಕಾಶ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇಲಿಗಳ ಗಾತ್ರ ಚಿಕ್ಕದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಡ್ರಗ್ ಪ್ಯಾಕೆಟ್ ಗಳನ್ನು ಕಚ್ಚಿ ತಿಂದಿದ್ದರಿಂದ ಭಾರೀ ನಷ್ಟವಾಗಿದೆ ಎನ್ನಲಾಗಿದೆ. ಆದರೆ ಈ ಘಟನೆಯ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಹೇಳುವುದೇ ಬೇರೆ.

ಪೊಲೀಸ್ ವರಿಷ್ಠಾಧಿಕಾರಿ ಹೇಳುವುದೇನು?
ನ್ಯಾಯಾಲಯದ ಪ್ರಕರಣದ ನಂತರ ಮಾತನಾಡಿದ ಮಥುರಾ ನಗರ ಪೊಲೀಸ್ ವರಿಷ್ಠಾಧಿಕಾರಿ ಮಾರ್ತಾಂಡ್ ಪ್ರಕಾಶ್ ಸಿಂಗ್, ಗಾಂಜಾ "ಮಳೆ ಮತ್ತು ಪ್ರವಾಹದಿಂದ ನಾಶವಾಗಿದೆ" ಮತ್ತು ಇಲಿಗಳಿಂದ ಅಲ್ಲ ಎಂದು ಸಿಎನ್‌ಎನ್‌ಗೆ ತಿಳಿಸಿದರು. "ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಇಲಿಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ ... ವಶಪಡಿಸಿಕೊಂಡ ಗಾಂಜಾವನ್ನು ಮಳೆ ಮತ್ತು ಪ್ರವಾಹದಲ್ಲಿ ನಾಶಪಡಿಸಲಾಗಿದೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ" ಎಂದು ಅವರು ಹೇಳಿದರು.
ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾನಿಲಯದ 2016 ರ ಅಧ್ಯಯನ ಗಾಂಜಾ ಸೇವಿಸಿದ ಇಲಿಗಳು ಸೋಮಾರಿಯಾಗಿವೆ ಎಂದು ಕಂಡುಹಿಡಿದಿದೆ. ಪ್ರಯೋಗವನ್ನು ಮಾಡಲು ಸಂಶೋಧಕರು 29 ಇಲಿಗಳಿಗೆ ತರಬೇತಿ ನೀಡಿದರು. ತರಬೇತಿ ಪಡೆದ ಇಲಿಗಳು ಆಹಾರ ಪಡೆಯಲು ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದವು. ಆದರೆ ಗಾಂಜಾ ಸೇವಿಸಿದ ಬಳಿಕ ಸುಲಭ ವಿಧಾನವನ್ನು ಕಂಡುಕೊಂಡಿವೆ ಎಂದು ಅಧ್ಯಯನ ಹೇಳಿದೆ.