ನನ್ನ ಸಾವಿಗೆ ರಶ್ಮಿ ಟೀಚರ್ ಕಾರಣ.. ಡೆತ್‌ನೋಟ್ ಬರೆದಿಟ್ಟು 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ!
ಗ್ವಾಲಿಯರ್ ನವೆಂಬರ್ 10: ಮಧ್ಯಪ್ರದೇಶದ ಗ್ವಾಲಿಯರ್‌ನ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಮೊದಲು, ವಿದ್ಯಾರ್ಥಿ ತನ್ನ ನೋಟ್‌ಬುಕ್‌ನಲ್ಲಿ ಆತ್ಮಹತ್ಯೆಗೆ ಕಾರಣವನ್ನು ಬರೆದಿದ್ದಾನೆ.
ಡೆತ್‌ನೋಟ್‌ನಲ್ಲಿ ಶಾಲಾ ಶಿಕ್ಷಕಿ ಕಿರುಕುಳ ನೀಡಿದ್ದಕ್ಕಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಿದ್ಯಾರ್ಥಿ ಬರೆದಿದ್ದಾನೆ. ತನ್ನ ಆತ್ಮಹತ್ಯೆಗೆ ಅವರೇ ಹೊಣೆ ಎಂದಿದ್ದಾನೆ. ಘಟನೆ ಬಳಿಕ ಕುಟುಂಬಸ್ಥರು ಮಹಾರಾಜಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಗ್ವಾಲಿಯರ್ ನ ಕೇಂದ್ರೀಯ ವಿದ್ಯಾಲಯ ನಂ.2ರಲ್ಲಿ ಓದುತ್ತಿರುವ 9ನೇ ತರಗತಿ ವಿದ್ಯಾರ್ಥಿ ಮನ್ವೇಂದ್ರ ಗೌತಮ್ ಶುಕ್ರವಾರ ಸಂಜೆ ಫಿನೈಲ್ ಕುಡಿದಿದ್ದಾನೆ. ತಕ್ಷಣ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಮನ್ವೇಂದ್ರ ತನ್ನ ನೋಟ್ ಬುಕ್ ನಲ್ಲಿ ಸೂಸೈಡ್ ನೋಟ್ ಬರೆದಿಟ್ಟಿದ್ದ.
ಶಿಕ್ಷಕರ ಮೇಲೆ ಆರೋಪ
ಶಿಕ್ಷಕರಾದ ರಶ್ಮಿ ಗುಪ್ತಾ ಮತ್ತು ದಿವಾಕರ್ ಸರ್ ಅವರು ತನಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ವಿದ್ಯಾರ್ಥಿ ಆರೋಪಿದ್ದಾನೆ. ಫೋಷಕರು ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಇಬ್ಬರು ಶಿಕ್ಷಕರು ಹೊಣೆ ಎಂದು ದೂರು ನೀಡಿದ್ದಾರೆ. ಕಳೆದ ಒಂದು ವರ್ಷದಿಂದ ತನ್ನ ಮಗ ಮನ್ವೇಂದ್ರನಿಗೆ ಶಿಕ್ಷಕಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿ ತಾಯಿ ಮಾರ್ಟಿನಾ ಗೌತಮ್ ಹೇಳಿದ್ದಾರೆ.
ಈ ಬಗ್ಗೆ ಶಾಲಾ ಆಡಳಿತ ಮಂಡಳಿಗೂ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೊನೆಗೆ ಮಗ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಇದೀಗ ಮಾರ್ಟಿನಾ ಪೊಲೀಸರಿಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ದೂರು ಸ್ವೀಕರಿಸಿದ ಮಹಾರಾಜಪುರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿದ್ಯಾರ್ಥಿ ಮನ್ವೇಂದ್ರನ ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಶಾಲಾ ಆಡಳಿತ ಮಂಡಳಿಯ ವಿಚಾರಣೆಗೂ ಸಿದ್ಧತೆ ನಡೆದಿದೆ. ವಿಷಯದ ಗಂಭೀರತೆ ಪರಿಗಣಿಸಿ ತಹಸೀಲ್ದಾರ್ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿದ್ಯಾರ್ಥಿ ಮನ್ವೇಂದ್ರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾರಾಜಪುರ ಪೊಲೀಸರು ಭರವಸೆ ನೀಡಿದ್ದಾರೆ. ಸದ್ಯ ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿ ಮನ್ವೇಂದ್ರ ಸ್ಥಿತಿ ಸುಧಾರಿಸಿದ್ದು, ಈ ಘಟನೆಯಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಕಿರುಕುಳ ಮತ್ತೊಮ್ಮೆ ಬಯಲಾಗಿದೆ.












Click it and Unblock the Notifications