MP: ಉಜ್ಜಯಿನಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಆಟೋ ಚಾಲಕ ಸೇರಿ 3 ಮಂದಿ ಬಂಧನ!
ಉಜ್ಜಯಿನಿ ಸೆಪ್ಟೆಂಬರ್ 28: ಅರೆಬೆತ್ತಲೆಯಾಗಿ ಸಹಾಯಕ್ಕಾಗಿ ಓಡಾಡಿದ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕನನ್ನು ಬಂಧಿಸಲಾಗಿದೆ. ಚಾಲಕನೊಂದಿಗೆ ಇತರ ಮೂವರನ್ನು ಬಂಧಿಸಲಾಗಿದೆ. ಮಧ್ಯಪ್ರದೇಶದ ಉಜ್ಜಯಿನಿ ನಗರದ ರಸ್ತೆಯೊಂದರಲ್ಲಿ ಸಂತ್ರಸ್ತ ಬಾಲಕಿ ರಕ್ತಸ್ರಾವದಿಂದ ಸಹಾಯಕ್ಕಾಗಿ ಓಡಾಡಿದ ದೃಶ್ಯ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿತ್ತು.
8 ಕಿಮೀ ವ್ಯಾಪ್ತಿಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬಾಲಕಿ ಓಡಾಡಿದ್ದು ಕಾಣಿಸಿಕೊಂಡಿತ್ತು. ಸಹಾಯಕ್ಕಾಗಿ ಮನವಿ ಮಾಡುವಾಗ ಸಂತ್ರಸ್ತೆ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗಿರುವು ಕಾಣಿಸಿಕೊಂಡಿದೆ. ಆದರೆ ಆಕೆಯ ಸಹಾಯಕ್ಕೆ ಯಾರೂ ಕೂಡ ಬಂದಿಲ್ಲ. ಅಂಗಲಾಚಿದರೂ ಆಕೆಯನ್ನು ದೂರ ಹೋಗಲು ಹೇಳಿದ್ದು ದೃಶ್ಯದಲ್ಲಿ ಕಂಡಿದೆ.

ವಿವರಗಳ ಪ್ರಕಾರ ಬಂಧಿತ ಆಟೋ ಚಾಲಕನನ್ನು 38 ವರ್ಷದ ರಾಕೇಶ್ ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಸಂತ್ರಸ್ತೆ ಜೀವನ್ ಖೇರಿಯಲ್ಲಿ ಆಟೋ ಹತ್ತಿದರು. ಅದರ ಸಿಸಿಟಿವಿ ವೀಡಿಯೋ ಕೂಡ ಪಡೆಯಲಾಗಿದೆ ಎಂದು ಹೇಳಿದರು.
ಬಳಿಕ ಆಟೋದಲ್ಲಿ ರಕ್ತದ ಕಲೆಗಳು ಕೂಡ ಪತ್ತೆಯಾಗಿದ್ದು, ಆಟೋದ ವಿಧಿವಿಜ್ಞಾನ ಪರೀಕ್ಷೆ ನಡೆಯುತ್ತಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ಇತರ ಮೂವರಲ್ಲಿ ಒಬ್ಬರು ಆಟೋ ಚಾಲಕನಾಗಿದ್ದಾನೆ. ಪ್ರಕರಣದಲ್ಲಿ ಬಂಧಿತರಾದ ಇನ್ನುಳಿದವರ ಗುರುತು ಬಹಿರಂಗವಾಗಿಲ್ಲ.
ಉಜ್ಜಯಿನಿಯಲ್ಲಿ ಭಯಾನಕ ಘಟನೆ:-
ಉಜ್ಜಯಿನಿ ನಗರದ ರಸ್ತೆಯೊಂದರಲ್ಲಿ ಅತ್ಯಾಚಾರಕ್ಕೊಳಗಾದ ಮತ್ತು ರಕ್ತಸ್ರಾವವಾಗುತ್ತಿರುವ 12 ವರ್ಷದ ಬಾಲಕಿಯನ್ನು ಪುರೋಹಿತರೊಬ್ಬರು ಟವೆಲ್‌ನಲ್ಲಿ ಹೊದಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಬಳಿಕ ಅಲ್ಲಿಂದ ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಆಕೆಗೆ ರಕ್ತದ ಅವಶ್ಯಕತೆ ಇದ್ದಾಗ ಪೊಲೀಸರೇ ರಕ್ತ ನೀಡಿ ಆಕೆಯ ಜೀವ ಉಳಿಸಿದ್ದಾರೆ.
ತಜ್ಞ ವೈದ್ಯರ ತಂಡವು ಬುಧವಾರ ಬಾಲಕಿಗೆ ಶಸ್ತ್ರಚಿಕಿತ್ಸೆ ಮಾಡಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ ಆದರೆ ಸ್ಥಿರವಾಗಿದೆ ಎಂದು ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ರಕ್ತ ಸ್ರಾವಗೊಂಡ ಬಾಲಕಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮಹಾಕಲ್ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದ್ದು, ಘಟನೆಯ ಕುರಿತು ತನಿಖೆ ನಡೆಯುತ್ತಿದೆ. ಭಾರೀ ಸಾರ್ವಜನಿಕ ಆಕ್ರೋಶದ ನಡುವೆ, ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಆಘಾತಕಾರಿ ಅಪರಾಧದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ ಎಂದು ಹೇಳಿದರು.












Click it and Unblock the Notifications