ರಾಮ್ ರಹೀಮ್ ತೀರ್ಪು : ನ್ಯಾಯಮೂರ್ತಿಗಳಿಗೆ ಝಡ್ ಪ್ಲಸ್ ಭದ್ರತೆ?
ನವದೆಹಲಿ, ಆಗಸ್ಟ್. 27 : ರಾಮ್ ರಹೀಮ್ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ನೀಡಿರುವ ಸಿಬಿಐ ವಿಶೇಷ ಕೋರ್ಟ್ ನ್ಯಾಯಮೂರ್ತಿ ಜಗದೀಪ್ ಸಿಂಗ್ ಅವರಿಗೆ ಝಡ್ ಪ್ಲಸ್ ಭದ್ರತೆ ಒದಗಿಸಲಾಗುತ್ತದೆಯೇ?. ಕೇಂದ್ರ ಸರ್ಕಾರ ಈ ಕುರಿತು ಇನ್ನೂ ಪರಿಶೀಲನೆ ನಡೆಸುತ್ತಿದೆ.
ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಮ್ ಸಿಂಗ್ ಅಪರಾಧಿ ಎಂದು ತೀರ್ಪು ನೀಡಲಾಗಿದೆ. ಶಿಕ್ಷೆ ಪ್ರಮಾಣವನ್ನು ಸೋಮವಾರ ಪ್ರಕಟಿಸಲಾಗುತ್ತದೆ. ರೋಹ್ಟಕ್ ಜೈಲಿನಲ್ಲಿ ಸಿಂಗ್ ಇದ್ದು, ನ್ಯಾಯಮೂರ್ತಿಗಳು ಮತ್ತು ನ್ಯಾಯಾಲಯದ ಸಿಬ್ಬಂದಿ ಅಲ್ಲಿಗೆ ತೆರಳಿ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಿದ್ದಾರೆ.

ಹೈಕೋರ್ಟ್ ಸಿಬಿಐ ವಿಶೇಷ ಕೋರ್ಟ್ ನ್ಯಾಯಮೂರ್ತಿಗಳು ಮತ್ತು ಇಬ್ಬರು ಸಿಬ್ಬಂದಿ ಜೈಲಿಗೆ ಹೆಲಿಕಾಪ್ಟರ್ ಮೂಲಕ ತೆರಳಲು ಅಗತ್ಯ ವ್ಯವಸ್ಥೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಜೈಲಿನಲ್ಲಿ ನ್ಯಾಯಾಲಯದ ಅಗತ್ಯ ವ್ಯವಸ್ಥೆ ಮಾಡಲು ಮತ್ತು ವಕೀಲರಿಗೆ ಹಾಜರಾಗಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದೆ.
ರಾಮ್ ರಹೀಮ್ ಸಿಂಗ್ ದೋಷಿ ಎಂದು ತೀರ್ಪು ನೀಡಿದ ಬಳಿಕ ಅವರ ಬೆಂಬಲಿಗರು ಹಿಂಸಾಚಾರ ನಡೆಸಿದ್ದು ಇದುವರೆಗೂ 36 ಜನರು ಗಲಭೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನೂರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ತೀರ್ಪು ನೀಡಿರುವ ವಿಶೇಷ ಕೋರ್ಟ್ ನ್ಯಾಯಮೂರ್ತಿ ಜಗದೀಪ್ ಸಿಂಗ್ ಅವರಿಗೆ ಝಡ್ ಪ್ಲಸ್ ಭದ್ರತೆ ಒದಗಿಸಲಾಗುತ್ತದೆಯೇ? ಎಂಬ ಪ್ರಶ್ನೆ ಎದ್ದಿದೆ. ಕೇಂದ್ರ ಸರ್ಕಾರ ಈ ಕುರಿತು ಇನ್ನೂ ಪರಿಶೀಲನೆ ನಡೆಸುತ್ತಿದೆ.












Click it and Unblock the Notifications