ಉತ್ತರ ಭಾರತದಲ್ಲಿ ಗುಡುಗು ಸಹಿತ ಮಳೆ, ರಾಜ್ಯದಲ್ಲೂ ತುಂತುರು ಮಳೆ ಸೂಚನೆ
ನವದೆಹಲಿ, ಮಾರ್ಚ್ 13: ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ತೀವ್ರತೆ ಹೆಚ್ಚಿರುವುದರಿಂದ ದೇಶದ ಉತ್ತರ ರಾಜ್ಯಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಸಿಕ್ಕಿಂ ಹಾಗೂ ಒಡಿಶಾದಲ್ಲಿ ಶನಿವಾರ ಗಾಳಿ ಸಹಿತ ಮಳೆಯಾಗುವುದಾಗಿ ತಿಳಿಸಿದೆ.
ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 13ರಂದು ಆಲಿಕಲ್ಲು ಮಳೆಯಾಗುವ ಸೂಚನೆಯನ್ನು ಇಲಾಖೆ ನೀಡಿದೆ. ಹಿಮಾಲಯ ಪ್ರದೇಶದ ಪಶ್ಚಿಮ ಭಾಗಗಳಲ್ಲಿ ಮಾರ್ಚ್ 13ರಿಂದ ಮಾರ್ಚ್ 15ರವರೆಗೂ ಮಳೆಯಾಗುವುದಾಗಿ ಎಚ್ಚರಿಕೆ ನೀಡಿದೆ. ಮಾರ್ಚ್ 16ರ ರಾತ್ರಿಯಿಂದ ಹಿಮಾಲಯದ ಪಶ್ಚಿಮ ಭಾಗಗಳಲ್ಲಿ ಭಾರೀ ಮಳೆ ಆರಂಭವಾಗುವುದಾಗಿ ತಿಳಿಸಿದೆ. ಮುಂದೆ ಓದಿ...

ಉತ್ತರ ರಾಜ್ಯಗಳಲ್ಲಿ ಇನ್ನೂ ಮೂರು ದಿನ ಮಳೆ
ದೆಹಲಿಯಲ್ಲಿ ಶುಕ್ರವಾರ ಮುಂಜಾನೆಯಿಂದ ಮಳೆಯಾಗುತ್ತಿದ್ದು, ಜಮ್ಮು ಹಾಗೂ ಕಾಶ್ಮೀರ, ಲಡಾಖ್, ಮುಜಾಫರ್‌ಬಾದ್, ಹರಿಯಾಣ, ಚಂಡೀಗಢದಲ್ಲಿ ಮಳೆ ಮುಂದುವರೆಯುವುದಾಗಿ ತಿಳಿಸಿದೆ. ಉತ್ತರಾಖಂಡ, ಪಂಜಾಬ್, ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆಯಾಗಲಿರುವುದಾಗಿ ತಿಳಿಸಿದೆ.

ಕೇರಳ, ಮಹಾರಾಷ್ಟ್ರದಲ್ಲಿ ತುಂತುರು ಮಳೆ
ಮುಂದಿನ ನಾಲ್ಕೈದು ದಿನಗಳಲ್ಲಿ ಉತ್ತರ ಭಾಗದಲ್ಲಿ ಬಿಸಿ ಗಾಳಿ ಕಡಿಮೆ ಇರಲಿದ್ದು, ಉತ್ತರ ಹಾಗೂ ಮಧ್ಯ ಭಾರತದಲ್ಲಿ 2-4 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದಾಗಿ ತಿಳಿಸಿದೆ. ಈಶಾನ್ಯ ಭಾರತ, ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ತುಂತುರು ಮಳೆಯಾಗಲಿದ್ದು, ಇನ್ನುಳಿದ ಭಾಗಗಳಲ್ಲಿ ಒಣ ಹವೆ ಮುಂದುವರೆಯಲಿರುವುದಾಗಿ ಇಲಾಖೆ ಮಾಹಿತಿ ನೀಡಿದೆ.

ಅರುಣಾಚಲ ಪ್ರದೇಶದಲ್ಲಿ ಭಾರೀ ಮಳೆ
ಅರುಣಾಚಲ ಪ್ರದೇಶ, ಅಸ್ಸಾಂ ಹಾಗೂ ಮೇಘಾಲಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದ್ದು, ಮಾರ್ಚ್ 16ರವರೆಗೂ ಇದೇ ವಾತಾವರಣ ಮುಂದುವರೆಯುವುದಾಗಿ ತಿಳಿದುಬಂದಿದೆ.

ಕರ್ನಾಟಕದಲ್ಲಿಯೂ ಹಲವೆಡೆ ಮಳೆ
ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ತೀವ್ರತೆ ಇದ್ದು, ಪ್ರತಿ ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡುಗು, ಮಂಡ್ಯ ಹಾಗೂ ಮೈಸೂರಿನಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications